ಜಿಎಸ್‌ಟಿ ಸರಳೀಕರಣ ವಿರೋಧಿಸಿದಿ ದೆಹಲಿಯಲ್ಲಿ 8 ಸಮಾನ ಮನಸ್ಕ ರಾಜ್ಯಗಳ ಸಭೆ

ದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಸಭೆಯಲ್ಲಿ ಎಂಟು ರಾಜ್ಯಗಳ ಹಣಕಾಸು ಸಚಿವರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.;

Update: 2025-08-30 04:33 GMT

ಜಿಎಸ್‌ಟಿ 

ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸರಳೀಕರಣ ವ್ಯವಸ್ಥೆಯು ರಾಜ್ಯಗಳ ಆರ್ಥಿಕ ಸ್ವಾಯತ್ತತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಂಟು ಸಮಾನ ಮನಸ್ಕ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ. ಈ ಹೊಸ ವ್ಯವಸ್ಥೆಯಿಂದ ಕರ್ನಾಟಕಕ್ಕೆ ವಾರ್ಷಿಕವಾಗಿ ಅಂದಾಜು 15,000 ರೂಪಾಯಿ ಕೋಟಿ ಆದಾಯ ನಷ್ಟವಾಗಬಹುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ. .

ದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಸಭೆಯಲ್ಲಿ ಎಂಟು ರಾಜ್ಯಗಳ ಹಣಕಾಸು ಸಚಿವರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು. ಕರ್ನಾಟಕದಿಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ತಮಿಳುನಾಡಿನಿಂದ ಹಣಕಾಸು ಸಚಿವ ತಂಗಮ್ ತನ್ನರಸು, ಹಿಮಾಚಲ ಪ್ರದೇಶದಿಂದ ಹಣಕಾಸು ಸಚಿವ ರಾಜೇಶ್ ಧರ್ಮಾನಿ, ಜಾರ್ಖಂಡ್​ನಿಂದ ಹಣಕಾಸು ಸಚಿವ ರಾಧಾಕೃಷ್ಣ ಕಿಶೋರ್ ಪಂಜಾಬ್​ನಿಂದ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ, ಕೇರಳದಿಂದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್, ತೆಲಂಗಾಣದಿಂದ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ಪಶ್ಚಿಮ ಬಂಗಾಳದಿಂದ ಸರ್ಕಾರದ ಪರವಾಗಿ ನಿವಾಸಿ ಆಯುಕ್ತೆ ಉಜೈನಿ ದತ್ತ ಪಾಲ್ಗೊಂಡಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ರಾಜ್ಯಗಳು, ಜಿಎಸ್‌ಟಿ ಸರಳೀಕರಣದಿಂದ ರಾಜ್ಯಗಳಿಗೆ ಉಂಟಾಗುವ ಆದಾಯ ನಷ್ಟವನ್ನು ಭರಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದವು.

ರಾಜ್ಯಗಳಿಗೆ ಉಂಟಾಗುವ ಆದಾಯ ನಷ್ಟವನ್ನು ಸರಿದೂಗಿಸಲು, ಪರಿಹಾರ ಸೆಸ್ (compensation cess) ಮಾದರಿಯ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಆರೋಗ್ಯಕ್ಕೆ ಹಾನಿಕಾರಕವಾದ ಮತ್ತು ಐಷಾರಾಮಿ ಸರಕುಗಳ ಮೇಲೆ ಹೆಚ್ಚುವರಿ ಸೆಸ್ ವಿಧಿಸಬೇಕು. ಈ ಸೆಸ್‌ನಿಂದ ಬರುವ ಸಂಪೂರ್ಣ ಆದಾಯವನ್ನು ರಾಜ್ಯಗಳಿಗೆ ವರ್ಗಾಯಿಸಬೇಕು. ಜಿಎಸ್‌ಟಿ ಸರಳೀಕರಣದ ಪ್ರಕ್ರಿಯೆಯಲ್ಲಿ ಯಾವುದೇ ಕಾರಣಕ್ಕೂ ರಾಜ್ಯಗಳ ಆದಾಯಕ್ಕೆ ಧಕ್ಕೆಯಾಗಬಾರದು ಎಂದು ಅವರೆಲ್ಲರೂ ಒತ್ತಾಯಿಸಿದ್ದಾರೆ.

ಸರಳೀಕರಣಕ್ಕೆ ಷರತ್ತುಬದ್ಧ ಸ್ವಾಗತ

"ತೆರಿಗೆ ಸರಳೀಕರಣವನ್ನು ನಾವು ವಿರೋಧಿಸುವುದಿಲ್ಲ, ಆದರೆ ಇದು ರಾಜ್ಯಗಳ ಆದಾಯವನ್ನು ಬಲಿ ಪಡೆಯಬಾರದು. ಇದರ ಲಾಭ ಕೆಲವೇ ಕಾರ್ಪೊರೇಟ್ ಕಂಪನಿಗಳಿಗೆ ಸೀಮಿತವಾಗದೆ, ದೇಶದ ಕಟ್ಟಕಡೆಯ ಪ್ರಜೆಗೂ ತಲುಪಬೇಕು," ಎಂದು ಕೃಷ್ಣ ಬೈರೇಗೌಡ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಎಸ್‌ಟಿ ಸರಳೀಕರಣದಿಂದ ರಾಜ್ಯಗಳಿಗೆ ಆಗುವ ಒಟ್ಟು 2.5 ಲಕ್ಷ ಕೋಟಿ ರೂಪಾಯಿ ನಷ್ಟವನ್ನು (ಕರ್ನಾಟಕಕ್ಕೆ ಅಂದಾಜು 15,000 ಕೋಟಿ ರೂಪಾಯಿ) ಸರಿದೂಗಿಸಲು ಕೇಂದ್ರ ಸರ್ಕಾರವೇ ಸಾಲವನ್ನು ಪಡೆಯಬೇಕು. ಕೇಂದ್ರ ಪಡೆದ ಸಾಲವನ್ನು ಮರುಪಾವತಿಸಲು ಈಗಿರುವ ಪರಿಹಾರ ಸೆಸ್ (compensation cess) ಅವಧಿಯನ್ನು 5 ವರ್ಷಗಳ ನಂತರವೂ ಮುಂದುವರಿಸಬೇಕು. ಜಿಎಸ್‌ಟಿ ವ್ಯವಸ್ಥೆಯು ಸಂಪೂರ್ಣವಾಗಿ ಸ್ಥಿರಗೊಳ್ಳುವವರೆಗೆ, 2024-25ನೇ ಹಣಕಾಸು ವರ್ಷದಿಂದಲೇ ರಾಜ್ಯಗಳಿಗೆ ವಾರ್ಷಿಕ ಶೇ 14ರ ದರದಲ್ಲಿ ನಷ್ಟ ಪರಿಹಾರ ನೀಡುವುದನ್ನು ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Tags:    

Similar News