GST ಬೆಳವಣಿಗೆ ದರ ಕುಸಿದಿಲ್ಲ: ಮೋಹನ್ ದಾಸ್ ಪೈ ಸಂದೇಶಕ್ಕೆ ಎಲ್ ಕೆ ಅತೀಕ್ ತಿರುಗೇಟು
ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬೆಳವಣಿಗೆ ದರದಲ್ಲಿ ಕುಸಿತವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ;
ಬೆಂಗಳೂರು: ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬೆಳವಣಿಗೆ ದರದಲ್ಲಿ ಕುಸಿತವಾಗಿಲ್ಲ. ಕರ್ನಾಟಕವು ದೇಶದಲ್ಲಿ ಅತ್ಯಧಿಕ ಜಿಎಸ್‌ಟಿ ಸಂಗ್ರಹವಾಗುವ ಮೂರು ರಾಜ್ಯಗಳ ಪಟ್ಟಿಯಲ್ಲೇ ಮುಂದುವರಿದಿದೆ ಎಂದು ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಹೇಳಿದ್ದಾರೆ.
ಏಪ್ರಿಲ್ ತಿಂಗಳ ತೆರಿಗೆ ಸಂಗ್ರಹದ ಬೆಳವಣಿಗೆ ದರಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಅಂಕಿಅಂಶಗಳನ್ನು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದ ಉದ್ಯಮಿ ಟಿ.ವಿ. ಮೋಹನ್ ದಾಸ್ ಪೈ, 'ದೀರ್ಘಕಾಲದ ಬಳಿಕ ಕರ್ನಾಟಕದಲ್ಲಿ ಜಿಎಸ್‌ಟಿ ಬೆಳವಣಿಗೆ ದರ ಕುಸಿತ ಕಾಣಲಾರಂಭಿಸಿದೆ. ಇದು ಕಳವಳಕಾರಿ ಬೆಳವಣಿಗೆ' ಎಂದು ಸಂದೇಶ ಹಾಕಿದ್ದರು.
ದೇಶದಲ್ಲಿ ಶೇ. 12.4ರಷ್ಟು ಬೆಳವಣಿಗೆ ದರದೊಂದಿಗೆ ₹2.10 ಲಕ್ಷ ಕೋಟಿಯಷ್ಟು ದಾಖಲೆಯ ಜಿಎಸ್‌ಟಿ ಸಂಗ್ರಹವಾಗಿರುವ ಮಾಹಿತಿಯನ್ನು ಕೇಂದ್ರ ಸರ್ಕಾರ ಹಂಚಿಕೊಂಡಿತ್ತು. ಏಪ್ರಿಲ್ ತಿಂಗಳಲ್ಲಿ ಕರ್ನಾಟಕದಲ್ಲಿ ಜಿಎಸ್‌ಟಿ ಬೆಳವಣಿಗೆ ದರ ಶೇ. 9ರಷ್ಟಿತ್ತು. ಅದನ್ನು ಆಧರಿಸಿ ಪೈ, ಪೋಸ್ಟ್ ಹಾಕಿದ್ದರು.
ಏಪ್ರಿಲ್‌ನಲ್ಲಿ ಕರ್ನಾಟಕದಲ್ಲಿ ಶೇ 9ರ ಬೆಳವಣಿಗೆ ದರದೊಂದಿಗೆ ₹ 15,978 ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಶೇ 13ರ ಬೆಳವಣಿಗೆ ದರದೊಂದಿಗೆ ₹ 37,671 ಕೋಟಿ ಜಿಎಸ್‌ಟಿ ಸಂಗ್ರಹಿಸುವುದರೊಂದಿಗೆ ಮಹಾರಾಷ್ಟ್ರ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಗುಜರಾತ್‌ನಲ್ಲೂ ಬೆಳವಣಿಗೆ ದರ ಶೇ 13ರಷ್ಟಿತ್ತು. ತೆಲಂಗಾಣದಲ್ಲಿ ಶೇ 11ರಷ್ಟು ಮತ್ತು ಆಂಧ್ರಪ್ರದೇಶಲ್ಲಿ ಶೇ 12ರಷ್ಟು ಜಿಎಸ್‌ಟಿ ಬೆಳವಣಿಗೆ ದರ ಇತ್ತು.
ಮೋಹನ್ ದಾಸ್ ಪೈ ಹೇಳಿಕೆಯನ್ನು ಅಲ್ಲಗಳೆದಿರುವ ಅತೀಕ್, '2023-24ರಲ್ಲಿ ಕರ್ನಾಟಕದಲ್ಲಿ ಜಿಎಸ್‌ಟಿ ಬೆಳವಣಿಗೆ ದರ ಕುಸಿದಿಲ್ಲ. ದೇಶದಲ್ಲಿ ಜಿಎಸ್‌ಟಿ ಬೆಳವಣಿಗೆ ಸರಾಸರಿ ದರ ಶೇ 12ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ.18ರಷ್ಟಿದೆ. ಮಹಾರಾಷ್ಟ್ರದಲ್ಲೂ ಶೇ.18 ಇದೆ. ಗುಜರಾತ್‌ನಲ್ಲಿ ಶೇ.10ರಷ್ಟಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
2022-23ಕ್ಕೆ ಹೋಲಿಸಿದರೆ 2023-24ರಲ್ಲಿ ಜಿಎಸ್‌ಟಿ ಬೆಳವಣಿಗೆ ದರ ಕುಸಿದಿದೆ ಎಂದು ಎಲ್ಲರಿಗೂ ಅನಿಸುತ್ತದೆ. ಏಕೆಂದರೆ 2021-22ರಲ್ಲಿ ಕೋವಿಡ್ ಇತ್ತು. ಆಗಿನ ಬೆಳವಣಿಗೆ ದರಕ್ಕೆ ಹೋಲಿಸಿದಾಗ 2022-23ರಲ್ಲಿ ತುಂಬಾ ಏರಿಕೆ ಕಾಣಿಸಿತ್ತು ಎಂದು ಹೇಳಿದ್ದಾರೆ.
ಅತೀಕ್ ವಾದಕ್ಕೆ ಪ್ರತಿಕ್ರಿಯಿಸಿರುವ ಪೈ, 'ಇದು ನನಗೆ ಚೆನ್ನಾಗಿ ಗೊತ್ತಿದೆ. ಪ್ರತಿ ತಿಂಗಳೂ ನಾನು ಈ ಅಂಕಿ-ಅಂಶಗಳನ್ನು ಓದುತ್ತೇನೆ. ಆರ್ಥಿಕ ವರ್ಷದ ಕೊನೆಯ ತಿಂಗಳಾದ ಮಾರ್ಚ್‌ನಲ್ಲಿ ಕರ್ನಾಟಕದ ಸಾಧನೆ ಕಳಪೆಯಾಗಿದೆ. ದೇಶದ ಇತರೆ ರಾಜ್ಯಗಳಲ್ಲಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ' ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.
'ಏಪ್ರಿಲ್ ತಿಂಗಳ ಬೆಳವಣಿಗೆ ದರ ಒಂದು ಪ್ರಕರಣವಷ್ಟೆ, ಅದು ಜಿಎಸ್‌ಟಿ ಬೆಳವಣಿಗೆ ದರದ ಕುಸಿತವಲ್ಲ. ಕರ್ನಾಟಕವು ಜಿಎಸ್‌ಟಿ ಬೆಳವಣಿಗೆ ದರದಲ್ಲಿ ಅಗ್ರ ಮೂರು ರಾಜ್ಯಗಳ ಪಟ್ಟಿಯಲ್ಲೇ ಇದೆ' ಎಂದಿರುವ ಅತೀಕ್ ಚರ್ಚೆಗೆ ತೆರೆ ಎಳೆದಿದ್ದಾರೆ.