ಕೆಂಪೇಗೌಡರ ಗೋಪುರ ಮೀರಿದ ಬೆಂಗಳೂರು | ವಿಭಜನೆಗೆ ʼಗ್ರೇಟರ್ ಬೆಂಗಳೂರು' ಮಸೂದೆ ಮಂಡನೆ
ಬೃಹತ್ ಬೆಂಗಳೂರನ್ನು ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ಆಸುಪಾಸಿಗೂ ವಿಸ್ತರಿಸಿ ಐದು ಪಾಲಿಕೆಗಳಾಗಿ (Corporation) ವಿಭಜಿಸುವ ʼಗ್ರೇಟರ್ ಬೆಂಗಳೂರು ವಿಧೇಯಕʼವನ್ನು ವಿಧಾನಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡಿಸಿದ್ದಾರೆ.
ಬೃಹತ್ ಬೆಂಗಳೂರನ್ನು ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ಆಸುಪಾಸಿಗೂ ವಿಸ್ತರಿಸಿ ಐದು ಪಾಲಿಕೆಗಳಾಗಿ (Corporation) ವಿಭಜಿಸುವ ಗ್ರೇಟರ್ ಬೆಂಗಳೂರು ವಿಧೇಯಕವನ್ನು ವಿಧಾನಸಭೆಯಲ್ಲಿ ಬೆಂಗಳೂರು ಅಭಿವೃದ್ಧಿಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡಿಸಿದ್ದಾರೆ.
ಬೃಹತ್ ಬೆಂಗಳೂರನ್ನು ವಿಭಜಿಸುವ ವರದಿಗೆ ರಾಜ್ಯ ಸಚಿವ ಸಂಪುಟ ಇತ್ತಿಚೆಗೆ ಅನುಮೋದನೆ ನೀಡಿತ್ತು. ಬಿಬಿಎಂಪಿ ಸುಧಾರಣಾ ಸಮಿತಿ ಅಧ್ಯಕ್ಷ ಬಿ.ಎಸ್. ಪಾಟೀಲ್ ಸಮಿತಿ ನೀಡಿದ್ದ ವರದಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಬೆಂಗಳೂರನ್ನು ಒಂದರಿಂದ 10 ಪಾಲಿಕೆಗಳಾಗಿ ವಿಭಜಿಸಿ, ಬಿಬಿಎಂಪಿಯನ್ನು ರದ್ದುಗೊಳಿಸಲು ಈ ಸಮಿತಿ ಶಿಫಾರಸು ಮಾಡಿತ್ತು. ಇದೀಗ ಈ ಸಮಿತಿಯ ಸಲಹೆಯಂತೆ ಗ್ರೇಟರ್ ಬೆಂಗಳೂರು ಅಥಾರಿಟಿ ಮಾಡುವ ಅಂಶವೂ ವಿಧೇಯದಲ್ಲಿದೆ.
“ಬೆಂಗಳೂರು ಎಲ್ಲರಿಗೂ ಸೇರಿದ್ದು, ಹೀಗಾಗಿ ಬೆಂಗಳೂರಿನ ಹಿತ ಕಾಪಾಡಲು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ಎಲ್ಲಾ ನಾಯಕರ ಅಭಿಪ್ರಾಯ, ಸಲಹೆ ಪಡೆಯಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಮಂಡನೆ ಮಾಡಿದಾಗ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಬಿಜೆಪಿ ಶಾಸಕರಾದ ಅಶ್ವತ್ಥ್ ನಾರಾಯಣ ಹಾಗೂ ಸುರೇಶ್ ಕುಮಾರ್ ಅವರು ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, “ ಅಧಿಕಾರಿಗಳ ಸಮಿತಿ ಮಾಡಿದ್ದಾಗ ಅವರು ಲಂಡನ್ ಮಾದರಿ ಪ್ರಸ್ತಾಪ ಮಾಡಿದ್ದರು. ಆದರೆ ನಾನು ಅದನ್ನು ಒಪ್ಪಲಿಲ್ಲ. ಈಗಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಲು ಆಗುತ್ತಿಲ್ಲ. ಇರುವ ವ್ಯವಸ್ಥೆಯನ್ನೇ ಸ್ವಲ್ಪ ಪ್ರಮಾಣದಲ್ಲಿ ಮಾರ್ಪಾಡು ಮಾಡಲು ಪ್ರಯತ್ನಿಸುತ್ತಿದ್ದೇವೆ” ಎಂದು ತಿಳಿಸಿದರು.
“ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರುಗಳ ಅಭಿಪ್ರಾಯ ಪಡೆಯದೇ ತೀರ್ಮಾನ ಮಾಡುವುದಿಲ್ಲ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಶಾಸಕರ ಜತೆ ಮಾತನಾಡಿ, ಈ ವಿಚಾರ ಹೆಚ್ಚು ಚರ್ಚೆಯಾಗಲಿ, ಬೆಂಗಳೂರಿನ ಹಿತಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳೋಣ. ಪ್ರತಿಪಕ್ಷದವರು ಬೇಡ ಎಂದರೆ ನಾವು ಮಾಡಲು ಆಗುವುದಿಲ್ಲ. ಬಿಜೆಪಿಯವರೂ ಹಿಂದೆ ಬೆಂಗಳೂರು ಜಿಲ್ಲಾ ಮಂತ್ರಿಯಾಗಿದ್ದರು. ನಾನು ಈ ವಿಧೇಯಕವನ್ನು ಸಾರಸಗಟಾಗಿ ಅಂಗೀಕಾರ ಮಾಡಿ ಎಂದು ಹೇಳುತ್ತಿಲ್ಲ. ಚರ್ಚೆಗಾಗಿಯೇ ಮಂಡನೆ ಮಾಡುತ್ತಿದ್ದೇನೆ. ಈ ವಿಧೇಯಕದ ಪ್ರತಿ ಸಾಲನ್ನೂ ಪರಾಮರ್ಶೆ ಮಾಡಿ, ಅಭಿಪ್ರಾಯ ಹೇಳಿ” ಎಂದು ಹೇಳಿದರು.
“ಬೆಂಗಳೂರು ಅನಿಯಂತ್ರಿತವಾಗಿ ಬೆಳೆಯುತ್ತಿದ್ದು, ಹೊರಗಿನಿಂದ ಹೆಚ್ಚಿನ ಜನ ಆಗಮಿಸುತ್ತಿದ್ದಾರೆ. ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ 70 ಲಕ್ಷ ಇದ್ದ ಬೆಂಗಳೂರಿನ ಜನಸಂಖ್ಯೆ ಇಂದು ಒಂದೂವರೆ ಕೋಟಿಯಷ್ಟಾಗಿದೆ. ಹೊರ ವರ್ತುಲ ರಸ್ತೆಗಳು ಈಗ ನಗರದ ಮಧ್ಯ ಭಾಗವಾಗಿವೆ. ವಾಹನಗಳ ಸಂಖ್ಯೆಯೇ ಒಂದು ಕೋಟಿ ಮೀರಿದೆ. ನೀರಿನ ವ್ಯವಸ್ಥೆ ಮಾಡಬೇಕು, ಕಸದ ಸಮಸ್ಯೆ ಸೇರಿದಂತೆ ಬೆಂಗಳೂರಿನಲ್ಲಿ ಬೇರೆ ಬೇರೆ ಸಮಸ್ಯೆಗಳಿವೆ. ಅಭಿವೃದ್ಧಿ ಹಾಗೂ ಆರ್ಥಿಕತೆ ಹಿತ ದೃಷ್ಟಿಯಿಂದ ಈ ವಿಧೇಯಕವನ್ನು ಮಂಡನೆ ಮಾಡುತ್ತಿದ್ದೇನೆ. ಇದು ಉತ್ತಮವಾಗಿದೆಯೋ, ಉತ್ತಮವಾಗಿಲ್ಲವೋ ಎಂಬುದನ್ನು ಚರ್ಚೆ ಮಾಡೋಣ. ಚರ್ಚೆ ಮಾಡದೇ ಏನೂ ಮಾಡುವುದಿಲ್ಲ” ಎಂದರು.
“ರಾಜ್ಯ ರಾಜಧಾನಿಯು ಕೇವಲ ಬೆಂಗಳೂರಿಗರಿಗೆ ಮಾತ್ರ ಸೀಮಿತವಲ್ಲ. ರಾಜ್ಯದ ಎಲ್ಲಾ ಭಾಗದವರಿಗೂ ಸೇರಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರಿಗೆ ಬಂದಾಗ ಒಂದು ಮಾತು ಹೇಳಿದ್ದರು. ಇಷ್ಟು ದಿನ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವಿಶ್ವ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ ಎಂದಿದ್ದರು. ಬೆಂಗಳೂರಿನ ಮಹತ್ವದ ಬಗ್ಗೆ ನನಗೂ ಅರಿವಿದೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ನೀವು ಇದನ್ನು ಯಾವ ರೀತಿ ಮಾಡಬೇಕು ಎಂದು ಹೇಳುತ್ತೀರೋ ಆ ರೀತಿ ಮಾಡೋಣ” ಎಂದರು.
ಆಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, “ಇದೇ ತಿಂಗಳು 27ರಂದು ಸಭೆ ಕರೆದಿದ್ದೀರಲ್ಲಾ, ಅಂದು ಚರ್ಚೆ ಮಾಡೋಣ” ಎಂದು ಹೇಳಿದಾಗ, ಶಿವಕುಮಾರ್ ಅವರು “ಅಂದು ಈ ವಿಚಾರವನ್ನೂ ಚರ್ಚಿಸೋಣ” ಎಂದು ತಿಳಿಸಿದರು.
ನಾಲ್ಕು ಗೋಪುರ ಮೀರಿದೆ
ಬಿಡ್ಬ್ಲೂಎಸ್ ಎಸ್ ಬಿ ನೌಕರರ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯೋತ್ಸವದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, "ನಾಡಪ್ರಭು ಕೆಂಪೇಗೌಡರು ಕಟ್ಟಿಸಿರುವ ನಾಲ್ಕು ಗೋಪುರಗಳನ್ನು ಮೀರಿ (ಲಾಲ್-ಬಾಗ್ ಹಿಂಭಾಗದ ಬೃಹತ್ ಬಂಡೆಯ ಮೇಲಿರುವ ಗೋಪುರ, ಅಲಸೂರು ಕೆರೆಯ ಬದಿಯ ಗುಡ್ಡದ ಮೇಲಿರುವ ಗೋಪುರ, ಬಳ್ಳಾರಿ ರಸ್ತೆಯ ಮೇಖ್ರಿ ವೃತ್ತದ ಬಳಿಯಿರುವ ಗೋಪುರ ಮತ್ತು ದೊಡ್ಡ ಬಸವಣ್ಣನ ಗುಡಿಯ ಹಿಂಭಾಗದಲ್ಲಿರುವ ಗೋಪುರ. ಈ ಗೋಪುರಗಳ ನಡುವೆ ಬೆಂಗಳೂರು ಬೆಳೆಯಬೇಕು ಎನ್ನುವುದು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕಲ್ಪನೆಯಾಗಿತ್ತು.) ಬೆಳೆಯುತ್ತಿರುವ ಬೆಂಗಳೂರಿನ ಸಮರ್ಪಕ ನಿರ್ವಹಣೆಗೆ ಗ್ರೇಟರ್ ಬೆಂಗಳೂರು ಬಿಲ್ ಮಂಡನೆ ಮಾಡಲಾಗಿದೆ” ಎಂದು ತಿಳಿಸಿದರು.
“ಕಳೆದ ಒಂದು ವರ್ಷದಿಂದ ನಮ್ಮ ಸಾರ್ವಜನಿಕರಿಂದ 70 ಸಾವಿರ ಸಲಹೆಗಳನ್ನು ಪಡೆಯಲಾಗಿದೆ. ಇವುಗಳನ್ನು ಕ್ರೋಡಿಕರಿಸಿ ಬೆಂಗಳೂರು ಜನಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಗ್ರೇಟರ್ ಬೆಂಗಳೂರು ಬಿಲ್ ಸಿದ್ದಪಡಿಸಲಾಗಿದೆ. ಕೆಂಪೇಗೌಡರು ಬೆಂಗಳೂರು ಕಟ್ಟಿದರು, ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದರು. ಎಸ್.ಎಂ.ಕೃಷ್ಣ ಅವರು ಬೆಂಗಳೂರಿನ ಹೆಸರನ್ನು ಅಂತರರಾಷ್ಟೀಯ ಮಟ್ಟಕ್ಕೆ ಬೆಳೆಸಿದರು. ಇಂತಹ ಬೆಂಗಳೂರನ್ನು ನಾವು ಉಳಿಸಬೇಕಾಗಿದೆ” ಎಂದು ಹೇಳಿದರು.
“ಸಚಿವನಾದ ತಕ್ಷಣ ಬೆಂಗಳೂರಿಗೆ 6 ಟಿಎಂಸಿ ಕಾವೇರಿ ನೀರನ್ನು ಹೆಚ್ಚುವರಿಯಾಗಿ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಗರದ ಜನರಿಗೆ ನೀರು, ಭದ್ರತೆ, ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು. ವಾಹನಗಳ ಸಂಖ್ಯೆ, ನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ರಸ್ತೆ ಇದ್ದಷ್ಟೇ ಇದೆ. ಈ ಸವಾಲುಗಳನ್ನು ಇಟ್ಟುಕೊಂಡೇ ಬೆಂಗಳೂರು ಅಭಿವೃದ್ಧಿ ಮಾಡಬೇಕಾಗಿದೆ.” ಎಂದರು.
ಮಸೂದೆಯಲ್ಲೇನಿದೆ?
- ಒಂದರಿಂದ ಹತ್ತು ಪಾಲಿಕೆಗಳನ್ನು ರಚಿಸುವ ಅಧಿಕಾರವನ್ನು ಸರ್ಕಾರ ಹೊಂದಲಿದ್ದು, ಪ್ರತಿ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಅಧಿಕಾರದ ಅವಧಿ ಐದು ವರ್ಷಗಳಾಗಲಿದೆ. ವಾರ್ಡ್ಗಳ ಸಮಿತಿಗೆ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಧರಿಸುವ ಅಧಿಕಾರವಿದೆ.
- ಮೂರು ಹಂತದ ಆಡಳಿತ ವ್ಯವಸ್ಥೆಯನ್ನು ಕಲ್ಪಿಸುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ರಚನೆಯಾಗುತ್ತದೆ. ಪ್ರಾಧಿಕಾರ, ಪಾಲಿಕೆ ಹಾಗೂ ವಾರ್ಡ್ಗಳೆಂಬ ಮೂರು ಹಂತದಲ್ಲಿ ಆಡಳಿತ ವ್ಯವಸ್ಥೆ ಇರಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯನ್ನು ಗ್ರೇಟರ್ ಬೆಂಗಳೂರು ಎಂದು ಕರೆಯಲಾಗುತ್ತದೆ.
- ಗ್ರೇಟರ್ ಬೆಂಗಳೂರು ಪ್ರಾಧಿಕಾರ’ಕ್ಕೆ ಮುಖ್ಯಮಂತ್ರಿಯವರು ಅಧ್ಯಕ್ಷರಾಗಲಿದ್ದು, ಬೆಂಗಳೂರು ಅಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಗೃಹ, ನಗರಾಭಿವೃದ್ಧಿ, ಸಾರಿಗೆ, ಇಂಧನ ಸಚಿವರು ಹಾಗೂ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಶಾಸಕರು, ಮುಖ್ಯ ಆಯುಕ್ತರು, ಪಾಲಿಕೆಗಳ ಮೇಯರ್ಗಳು, ಪ್ರತಿ ಪಾಲಿಕೆಯಿಂದ ನಾಮನಿರ್ದೇಶನಗೊಳ್ಳುವ ಇಬ್ಬರು ಸದಸ್ಯರು, ಬಿಡಿಎ, ಜಲಮಂಡಳಿ, ಬಿಎಂಟಿಸಿ, ಬಿಎಂಆರ್ಸಿಎಲ್, ಬೆಸ್ಕಾಂ, ನಗರ ಪೊಲೀಸ್ ಕಮಿಷನರ್, ಬಿಎಂಎಲ್ಟಿಎ ಸಿಇಒ, ಬಿಎಸ್ಡಬ್ಲ್ಯುಎಂಎಲ್ ಎಂಡಿ, ಗ್ರೇಟರ್ ಬೆಂಗಳೂರು ನಗರ ಯೋಜನೆಯ ಮುಖ್ಯ ನಗರ ಯೋಜಕ, ಗ್ರೇಟರ್ ಬೆಂಗಳೂರಿನ ಪ್ರಧಾನ ಎಂಜಿನಿಯರ್, ಅಗ್ನಿಶಾಮಕ ದಳದ ನಿರ್ದೇಶಕರು ಸದಸ್ಯರಾಗಿರುತ್ತಾರೆ.
- ರಾಜ್ಯ ಸರ್ಕಾರದ ಅನುದಾನವನ್ನು ಪಾಲಿಕೆಗಳಿಗೆ ಹಂಚುವ ಜವಾಬ್ದಾರಿ ಪ್ರಾಧಿಕಾರದ್ದಾಗಿದ್ದು,
- ಗ್ರೇಟರ್ ಬೆಂಗಳೂರು ವ್ಯಾಪ್ತಿಯನ್ನು ರಾಜ್ಯ ಸರ್ಕಾರ ಅಧಿಸೂಚನೆ ಮೂಲಕ ಕಾಲಕಾಲಕ್ಕೆ ನಿರ್ಧರಿಸಬಹುದಾಗಿದೆ.
- ನಗರ ಪಾಲಿಕೆಗಳಲ್ಲಿ ಮೇಯರ್, ಉಪ ಮೇಯರ್, ಜಂಟಿ ಆಯುಕ್ತರು, ಸ್ಥಾಯಿ ಸಮಿತಿ, ವಲಯ ಸಮಿತಿ, ವಾರ್ಡ್ ಸಮಿತಿಗಳು ಮತ್ತು ಪ್ರದೇಶ ಸಭಾಗಳು ಇರಲಿವೆ.
- ಪ್ರತಿ ವಾರ್ಡ್ಗೆ ಒಂದು ಸಮಿತಿ ರಚನೆಯಾಗಲಿದ್ದು, ಆಯಾ ಕಾರ್ಪೊರೇಟರ್ ಅದಕ್ಕೆ ಅಧ್ಯಕ್ಷರಾಗಿರುತ್ತಾರೆ. ಸಮಿತಿಯಲ್ಲಿ ಆಯಾ ವಾರ್ಡ್ಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳ ಕ್ರಿಯಾಯೋಜನೆಯನ್ನು ಪಾಲಿಕೆಗೆ ಸಲ್ಲಿಸಲಿವೆ.
ಮಸೂದೆಯ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ
file:///C:/Users/FEDLAP21/Downloads/GBA 22.07.2024(Final).pdf