ವಿಧಾನಮಂಡಲ ಅಧಿವೇಶನ ಆರಂಭ: 18ಕ್ಕೂ ಹೆಚ್ಚು ವಿಧೇಯಕಗಳ ಮಂಡನೆಗೆ ವೇದಿಕೆ ಸಿದ್ಧ
ಕಲಾಪ ಆರಂಭವಾಗುತ್ತಿದ್ದಂತೆ, ಸ್ಪೀಕರ್ ಅವರು ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಮಂಡಿಸಲಿದ್ದಾರೆ.;
ವಿಧಾನಸೌಧ
ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಟಾಪಟಿಗೆ ಸಾಕ್ಷಿಯಾಗಲಿರುವ ಒಂಬತ್ತು ದಿನಗಳ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ಇಂದು ಚಾಲನೆ ದೊರೆಯಲಿದೆ. ಬೆಳಗ್ಗೆ 11 ಗಂಟೆಗೆ ವಿಧಾನಸಭಾ ಕಲಾಪ ಆರಂಭವಾಗಲಿದ್ದು, ಮೊದಲ ದಿನವೇ ಹಲವು ಮಹತ್ವದ ಕಾರ್ಯಕಲಾಪಗಳಿಗೆ ಸದನ ಸಾಕ್ಷಿಯಾಗಲಿದೆ.
ಕಲಾಪ ಆರಂಭವಾಗುತ್ತಿದ್ದಂತೆ, ಸ್ಪೀಕರ್ ಅವರು ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಮಂಡಿಸಲಿದ್ದಾರೆ. ಹಿರಿಯ ಸಾಹಿತಿಗಳಾದ ಎಚ್.ಎಸ್. ವೆಂಕಟೇಶಮೂರ್ತಿ, ಜಿ.ಎಸ್. ಸಿದ್ದಲಿಂಗಯ್ಯ, ಪೋಪ್ ಫ್ರಾನ್ಸಿಸ್ ಹಾಗೂ ಹಿರಿಯ ರಾಜಕಾರಣಿ ಡಾ. ಎನ್. ತಿಪ್ಪಣ್ಣ ಸೇರಿದಂತೆ ಹಲವು ಗಣ್ಯರಿಗೆ ಸದನ ಶ್ರದ್ಧಾಂಜಲಿ ಸಲ್ಲಿಸಲಿದೆ.
ಬಳಿಕ, ಕಳೆದ ಬಜೆಟ್ ಅಧಿವೇಶನದಲ್ಲಿ ನಡೆದ ಗದ್ದಲದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ 18 ಬಿಜೆಪಿ ಶಾಸಕರ ಅಮಾನತು ನಿರ್ಣಯದ ಸ್ಥಿರೀಕರಣ ಪ್ರಸ್ತಾವವನ್ನು ಮಂಡಿಸಲಾಗುತ್ತದೆ. ಈ ಹಿಂದೆ ಶಾಸಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು, ಆದರೆ ನಂತರ ಸ್ಪೀಕರ್ ಅವರು ನಿರ್ಣಯವನ್ನು ಮೇ 25ರಿಂದ ಜಾರಿಗೆ ಬರುವಂತೆ ಹಿಂಪಡೆದಿದ್ದರು. ಆ ಕುರಿತ ಸ್ಥಿರೀಕರಣ ಪ್ರಕ್ರಿಯೆ ಇಂದು ಪೂರ್ಣಗೊಳ್ಳಲಿದೆ. ನಂತರ, ಪ್ರಶೋತ್ತರ ಹಾಗೂ ಗಮನ ಸೆಳೆಯುವ ಸೂಚನೆ ಕಲಾಪಗಳು ನಡೆಯಲಿದ್ದು, ಎತ್ತಿನಹೊಳೆ ಯೋಜನೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆಗುತ್ತಿರುವ ಅನ್ಯಾಯ ಹಾಗೂ ಯೋಜನೆ ವಿಳಂಬದ ಕುರಿತು ತೀವ್ರ ಚರ್ಚೆ ನಡೆಯುವ ಸಾಧ್ಯತೆಯಿದೆ.
ಅಧಿವೇಶನದಲ್ಲಿ ಮಂಡನೆಯಾಗಲಿರುವ ಪ್ರಮುಖ ವಿಧೇಯಕಗಳು
ಈ ಬಾರಿಯ ಅಧಿವೇಶನದಲ್ಲಿ 18ಕ್ಕೂ ಹೆಚ್ಚು ವಿಧೇಯಕಗಳು ಮಂಡನೆಯಾಗಲಿದ್ದು, ಅವುಗಳಲ್ಲಿ ಕೆಲವು ಪ್ರಮುಖವಾದವುಗಳೆಂದರೆ:
* ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ, 2025
* ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2025
* ಕರ್ನಾಟಕ ಪುರಸಭೆಗಳ ಹಾಗೂ ಇತರೆ ಕಾನೂನುಗಳ (ತಿದ್ದುಪಡಿ) ಮಸೂದೆ, 2025
* ಕರ್ನಾಟಕ ಭೂ ಸುಧಾರಣೆಗಳು ಮತ್ತು ಇತರೆ ಕಾನೂನು (ತಿದ್ದುಪಡಿ) ಮಸೂದೆ, 2025
* ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ಮಸೂದೆ, 2025
* ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ, ನಿಯಂತ್ರಣ) (ತಿದ್ದುಪಡಿ) ಮಸೂದೆ, 2025
* ಕರ್ನಾಟಕ ರಾಜ್ಯ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ, 2024