Waqf Asset Dispute | ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ರೈತರ ಜಮೀನು, ಮಠ-ಮಂದಿರದ ಜಾಗ ಅಬಾಧಿತ

ವಕ್ಫ್‌ ಆಸ್ತಿ ವಿವಾದ ಇತ್ಯರ್ಥಕ್ಕೆ ರಾಜ್ಯ ಸರ್ಕಾರವು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸಲು ತೀರ್ಮಾನಿಸಿದೆ. ಈ ಸಮಿತಿಯು ವಕ್ಫ್‌ ಆಸ್ತಿಗಳ ಒಡೆತನ, ಖಾತೆ ವರ್ಗಾವಣೆ, ವಕ್ಫ್ ಆಸ್ತಿ ಪರಾಭಾರೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಿದೆ.

Update: 2024-12-19 07:53 GMT

ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಿನ ವಾಕ್ಸಮರ ಮುಂದುವರಿದಿರುವ ಬೆನ್ನಲ್ಲೇ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಸರ್ಕಾರ ಮುಂದಾಗಿದೆ.

ಬೆಳಗಾವಿ ಅಧಿವೇಶನದ ಒಳಗೆ ಹಾಗೂ ಹೊರಗೆ ಪ್ರತಿಪಕ್ಷಗಳು ವಕ್ಫ್ ಹೋರಾಟ ನಡೆಸಿದ್ದವು. ಇದರಿಂದ ಕಲಾಪಕ್ಕೆ ಅಡ್ಡಿಯಾಗಿತ್ತು. ವಿವಾದ ಇತ್ಯರ್ಥಕ್ಕೆ ರಾಜ್ಯ ಸರ್ಕಾರವು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸಲು ತೀರ್ಮಾನಿಸಿದೆ. ಈ ಸಮಿತಿಯು ವಕ್ಫ್ ಆಸ್ತಿಗಳ ಒಡೆತನ, ಖಾತೆ ವರ್ಗಾವಣೆ, ವಕ್ಫ್ ಆಸ್ತಿ ಪರಾಭಾರೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಿದೆ.

ಸದನದಲ್ಲಿ ಸಿಎಂ ಹೇಳಿದ್ದೇನು?

ಅಧಿವೇಶನದಲ್ಲಿ ನಿಯಮ 69ರಡಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಕ್ಫ್‌ ಮಂಡಳಿಯು ರೈತರ ಭೂಮಿ, ಮಠ-ಮಂದಿರ, ದೇವಾಲಯ ಹಾಗೂ ಪಾರಂಪರಿಕ ಸ್ಥಳಗಳ ಮೇಲೂ ಹಕ್ಕು ಸಾಧಿಸುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.

ಯಾವುದೇ ಖಾಸಗಿ ಆಸ್ತಿಗೆ ನೋಟಿಸ್, ಫಲಾನುಭವಿಗಳಿಗೆ ಮಂಜೂರಾದ ಭೂಮಿಯ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದರೆ ವಕ್ಫ್ ಮಂಡಳಿ ಕೂಡಲೇ ಕೈಬಿಡಬೇಕು. ಇನಾಂ ರದ್ದತಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಯಡಿ ಹಕ್ಕು ಮಂಡನೆಗೆ ಬಾಕಿ ಇರುವ ಪ್ರಕರಣಗಳಲ್ಲಿ ಬಾಧಿತರು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯ ಮುಂದೆ ಅರ್ಜಿ ಸಲ್ಲಿಸಬಹುದು. ವಕ್ಫ್ ವಿವಾದಕ್ಕೆ ಸಂಬಂಧಿಸಿದ ಈ ಎಲ್ಲ ಸಮಸ್ಯೆಗಳನ್ನು ಸಮಿತಿ ಪರಿಶೀಲಿಸಲಿದೆ ಎಂದು ತಿಳಿಸಿದ್ದಾರೆ.

ಜಮೀರ್ ಅಹಮದ್ ಹೇಳಿದ್ದೇನು?

ಇನಾಂ ರದ್ದತಿ ಕಾಯ್ದೆ ಮತ್ತು ಕರ್ನಾಟಕ ಭೂ ಸುಧಾರಣಾ ಕಾಯ್ದೆಯಡಿ ರೈತರಿಗೆ ಮಂಜೂರಾದ ಯಾವುದೇ ಜಮೀನಿನ ಮೇಲೆ ವಕ್ಫ್‌ ಮಂಡಳಿ ಹಕ್ಕು ಸಾಧಿಸುವುದಿಲ್ಲ. ದೇವಸ್ಥಾನ, ರುದ್ರಭೂಮಿ ಮತ್ತು ಶಾಲೆಗಳು ವಕ್ಫ್‌ ಆಸ್ತಿಯಲ್ಲಿದ್ದರೆ ಅಂತಹ ಆಸ್ತಿಗಳ ಮೇಲಿನ ಹಕ್ಕು ತ್ಯಜಿಸಲು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ವಕ್ಫ್‌ ಖಾತೆ ಸಚಿವ ಜಮೀರ್ ಅಹಮ್ಮದ್ ಖಾನ್ ತಿಳಿಸಿದ್ದಾರೆ.

ರೈತರಲ್ಲೇ ಉಳಿಯಲಿದೆ 70 ಸಾವಿರ ಎಕರೆ

ಇನಾಂ ರದ್ದತಿ ಕಾಯ್ದೆಯಡಿ ರೈತರಿಗೆ ಮಂಜೂರಾಗಿದ್ದ 47,263 ಎಕರೆ ಹಾಗೂ ಭೂ ಸುಧಾರಣಾ ಕಾಯ್ದೆಯಡಿ ಹಂಚಿಕೆ ಮಾಡಿದ್ದ 23,620 ಎಕರೆ ಜಮೀನನ್ನು ವಕ್ಫ್ ಸ್ವಾಧೀನದಿಂದ ಹಿಂಪಡೆದು, ರೈತರಿಗೇ ಮರಳಿ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಇನ್ನು 17,969 ಎಕರೆ ವಕ್ಫ್ ಮಂಡಳಿ ಭೂಮಿ ಒತ್ತುವರಿಯಾಗಿದ್ದು, ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಒತ್ತುವರಿ ಜಾಗದಲ್ಲಿರುವ ಮಸೀದಿ, ದರ್ಗಾ, ಈದ್ಗಾ ಮೈದಾನ, ಮದರಸಾ ಮತ್ತು ಖಬರಸ್ಥಾನಗಳ ಆಸ್ತಿ ದಾಖಲೆಗಳನ್ನು ವಕ್ಫ್‌ ಮಂಡಳಿ ಹೆಸರಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.

Tags:    

Similar News