ರಾಜ್ಯಪಾಲರ ನಡೆ ಅಕ್ಷಮ್ಯ ಅಪರಾಧ: ಸಚಿವ ದಿನೇಶ್ ಗುಂಡೂರಾವ್‌

Update: 2024-08-17 08:21 GMT

ರಾಜ್ಯಪಾಲರ ನಡೆ ಹಿಂದೆ ಒಂದು ಷಡ್ಯಂತ್ರ ನಡೆಯುತ್ತದೆ ಎನ್ನುವುದು ನಮಗೆ ಮೊದಲೇ ಗೊತ್ತಿತ್ತು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ಸಂವಿಧಾನಿಕ ಹುದ್ದೆಗಳನ್ನು ಸರ್ವನಾಶ ಮಾಡುತ್ತಿದೆʼʼ ಎಂದು ಕೇಂದ್ರದ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಧಾವರ್ ಚಂದ್ ಗೆಹ್ಲೋಟ್‌ ಅವರು ಅನುಮತಿ ನೀಡಿದ್ದರ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಇದೊಂದು ಷಡ್ಯಂತ್ರವಾಗಿದೆ. ರಾಜ್ಯಪಾಲರ ನಡೆ ಅಕ್ಷಮ್ಯ ಅಪರಾಧವಾಗಿದೆʼʼ ಎಂದು ಹೇಳಿದರು.

ʻʻಇದು ಒಂದು ಷಡ್ಯಂತ್ರ ಅನ್ನೋದು ನಮಗೆ ಮೊದಲೇ ಗೊತ್ತಿತ್ತು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ಸಂವಿಧಾನಿಕ ಹುದ್ದೆಗಳನ್ನು ಸರ್ವನಾಶ ಮಾಡುತ್ತಿದೆ. ಇಡಿ, ಐಟಿ, ಸಿಬಿಐ ಎಲ್ಲವನ್ನೂ ದುರುಪಯೋಗ ಮಾಡಿಕೊಂಡಿದೆ. ರಾಜ್ಯಪಾಲರ ಕಚೇರಿಯೂ ಈಗ ಬಿಜೆಪಿ ಕಚೇರಿ ಆಗಿದೆ.

ರಾಜ್ಯಪಾಲರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಅನ್ನುವನ್ನು ತೋರಿಸುತ್ತದೆ. ಅವರು ಬಿಜೆಪಿಯ ಕೈಗೊಂಬೆಯಂತೆ ಮಾಡುತ್ತಿದ್ದಾರೆ. ನಾವು ಕಾನೂನಿನ ಹೋರಾಟ ಮಾಡುತ್ತಿದ್ದೇವೆ. ಸಿಎಂ ಜಗ್ಗುವುದೂ ಇಲ್ಲ. ಬಗ್ಗುವುದೂ ಇಲ್ಲʼʼ ಎಂದು ಹೇಳಿದರು.

ʻʻಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಸಂತೋಷ ಹೆಗ್ಡೆ ಅವರೇ ವರದಿ ಕೊಟ್ಟಿದ್ದರು. ಆದರೆ ಆಗ ರಾಜ್ಯಪಾಲರು ಕೂಲಂಕಷ ಯೋಚಿಸಿ ಪ್ಯಾಷಿಕ್ಯೂಷನ್ ಅನುಮತಿ ಕೊಟ್ಟಿದ್ದರು. ಆ ಪ್ರಕರಣಕ್ಕೂ ಈಗಿನ ವಿಚಾರಕ್ಕೂ ಹೋಲಿಕೆ ಮಾಡಲು ಆಗದುʼʼ ಎಂದರು.

ʻʻನಾವು ಇದನ್ನು ಎದುರಿಸಿ ಗೆಲ್ಲುತ್ತೇವೆ. ಕಾಂಗ್ರೆಸ್ ಗೆ ಶಕ್ತಿ ಕೊಡುವ ಕೆಲಸ ಮಾಡುತ್ತೇವೆʼʼ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Tags:    

Similar News