ಮುಡಾ ಪ್ರಕರಣ ನೋಟಿಸ್ ವಿವಾದ | ರಾಜ್ಯಪಾಲರು ಬಿಜೆಪಿ-ಜೆಡಿಎಸ್ ಕೈಗೊಂಬೆ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
"ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ, ನನಗೆ ನೀಡಿರುವ ನೋಟಿಸ್ ಕಾನೂನುಬಾಹಿರ. ಜೆಡಿಎಸ್, ಬಿಜೆಪಿ ಕೈಗೊಂಬೆಯಾಗಿ ವರ್ತಿಸುತ್ತಿರುವ ಅವರ ಕ್ರಮ ಸಂವಿಧಾನದ ಕಗ್ಗೊಲೆ ಹಾಗೂ ಪ್ರಜಾಪ್ರಭುತ್ವದ ಮೇಲಿನ ದಾಳಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಡಾ ಪ್ರಕರಣದಲ್ಲಿ ತಮಗೆ ನೋಟಿಸ್ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.;
"ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ, ನನಗೆ ನೀಡಿರುವ ನೋಟಿಸ್ ಕಾನೂನುಬಾಹಿರ. ಜೆಡಿಎಸ್, ಬಿಜೆಪಿ ಕೈಗೊಂಬೆಯಾಗಿ ವರ್ತಿಸುತ್ತಿರುವ ಅವರ ಕ್ರಮ ಸಂವಿಧಾನದ ಕಗ್ಗೊಲೆ ಹಾಗೂ ಪ್ರಜಾಪ್ರಭುತ್ವದ ಮೇಲಿನ ದಾಳಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಡಾ ಪ್ರಕರಣದಲ್ಲಿ ತಮಗೆ ನೋಟಿಸ್ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ. ಅದರೂ ಅನಗತ್ಯವಾಗಿ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆʼʼ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಶುಕ್ರವಾರ (ಆ.2) ಹೇಳಿದ್ದಾರೆ.
ʻʻಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದೆʼʼ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ʻʻ136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರುವವನು ನಾನು. ಆದರೆ ಮುಡಾ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲದಿದ್ದರೂ ಸರ್ಕಾರ ಅಸ್ಥಿರಗೊಳಿಸಲು ಈ ಪ್ರಕರಣ ಬಳಸಿಕೊಂಡು ರಾಜ್ಯಪಾಲರ ಮೂಲಕ ಯತ್ನಿಸಿದ್ದಾರೆ. ರಾಜ್ಯಪಾಲರಿಗೆ ಸಲಹೆ ನೀಡುವವರು ಯಾರು? ಮಂತ್ರಿ ಪರಿಷತ್ತು. ನಾವು ಸಲಹೆ ನೀಡಿದ್ದೇವೆಯೇ? ನಮ್ಮನ್ನು ಕೇಳಿದ್ದಾರೆಯೇ? ಮುಖ್ಯ ಕಾರ್ಯದರ್ಶಿಯೂ ವಿವರವಾದ ಪತ್ರವನ್ನು ಜುಲೈ 26ರಂದು ಸಂಜೆ 6.30ಕ್ಕೆ ಬರೆದಿದ್ದಾರೆ. ಅದನ್ನೂ ರಾಜ್ಯಪಾಲರು ನೋಡಿಲ್ಲ. ತನಿಖಾ ಆಯೋಗ ರಚಿಸಿದ್ದು, ಅದರ ವರದಿ ಬರಬೇಕಲ್ಲವೇ? ವರದಿ ಕೇಳಿರುವುದನ್ನೂ ಪರಿಗಣಿಸಿಲ್ಲ" ಎಂದು ಆರೋಪಿಸಿದರು.
ನೋಟಿಸ್ ವಾಪಸ್ ತೆಗೆದುಕೊಳ್ಳಿ
"ನನಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆದುಕೊಳ್ಳಬೇಕುʼʼ ಎಂದು ರಾಜ್ಯಪಾಲರಿಗೆ ಒತ್ತಾಯಿಸಿದ ಸಿಎಂ, "ಇದಕ್ಕೆಲ್ಲ ನಾನು ಹೆದರುವುದಿಲ್ಲ, ನಾವು ಇದನ್ನೆಲ್ಲ ಎದುರಿಸಲು ಸಿದ್ಧರಾಗಿದ್ದೇವೆ. ತಪ್ಪು ಮಾಡಿದ್ದರೆ ತಾನೇ ಹೆದರುವುದು. ರಾಜ್ಯಪಾಲರ ನೋಟಿಸ್ ಗೆ ನಾನ್ಯಾಕೆ ಹೆದರಲಿ. ಟಿ.ಜೆ.ಅಬ್ರಹಾಂ ಒಬ್ಬ ಬ್ಲಾಕ್ ಮೇಲರ್. ಜು.26 ಕ್ಕೆ ಬೆಳಿಗ್ಗೆ 11:30 ಕ್ಕೆ ಆತ ದೂರು ಕೊಡುತ್ತಾನೆ. ಆ ದೂರಿನ ಪರಾಮರ್ಶೆ ಮಾಡದೆ ಆ ದಿನ ಸಂಜೆಯೇ ಶೋಕಾಸ್ ನೋಟಿಸ್ ರೆಡಿ ಇದೆ ಬಂದು ಪಡೆದುಕೊಳ್ಳಿ ಎಂದು ನಮ್ಮ ಅಧಿಕಾರಿ ಎಲ್ ಕೆ ಅತೀಕ್ ಗೆ ರಾಜ್ಯಪಾಲರು ಹೇಳುತ್ತಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜರ್ನಾರ್ದನ ರೆಡ್ಡಿ ವಿರುದ್ಧ ಕೂಡ ದೂರುಗಳು ಸಲ್ಲಿಕೆಯಾಗಿದ್ದವು. ಆದರೆ, ದೂರುಗಳು ಇನ್ನೂ ಹಾಗೆಯೇ ಇವೆ. ಅವರಿಗೆ ಶೋಕಾಸ್ ನೋಟಿಸ್ ಕೊಟ್ಟಿಲ್ಲ. ನನಗೆ ಯಾಕೆ ರಾಜ್ಯಪಾಲರು ತರಾತುರಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ?ʼʼ ಎಂದು ಪ್ರಶ್ನಿಸಿದರು.
ಸಚಿವ ಸಂಪುಟ ಸಲಹೆ ನೀಡಿದೆ
ʻʻಕೆಟ್ಟ ಸಂಪ್ರದಾಯ ಆಗಬಾರದೆಂದು ನಾನು ಸಚಿವ ಸಂಪುಟ ಸಭೆಗೆ ಹೋಗಿರಲಿಲ್ಲ. ಸಭೆ ನಡೆಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೇಳಿದ್ದೆ. ರಾಜ್ಯಪಾಲರು ನೋಟಿಸ್ ಜಾರಿಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಸುದೀರ್ಘವಾಗಿ ಚರ್ಚಿಸಿದ ಸಚಿವ ಸಂಪುಟ, ನೋಟಿಸ್ ಕೊಟ್ಟಿರುವುದು ಕಾನೂನು ಬಾಹಿರವಾಗಿದ್ದು, ಅದನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ರಾಜ್ಯಪಾಲರಿಗೆ ಸಲಹೆ ನೀಡಿದೆʼʼ ಎಂದು ತಿಳಿಸಿದರು.
ಕುಮಾರಸ್ವಾಮಿ ಬಿಜೆಪಿ ಪಾದಯಾತ್ರೆಗೆ ಬೆಂಬಲ ವಿಚಾರವಾಗಿ ಮಾತನಾಡಿ, ʻʻಕುಮಾರಸ್ವಾಮಿ ಕೇಂದ್ರದ ಮಂತ್ರಿ, ಜೆಡಿಎಸ್ ನಾಯಕ. ಈ ಕೇಸ್ ನಲ್ಲಿ ಏನು ಇಲ್ಲ ಪಾದಯಾತ್ರೆ ಬೇಡ ಎಂದರು. ಮಳೆ ಜಾಸ್ತಿಯಾಗಿ ಪ್ರವಾಹ ಬಂದಿದೆ ಅದರ ಕಡೆ ಗಮನ ಕೊಡಬೇಕು ಎಂದರು. ಈಗ ಪ್ರವಾಹ ಎಲ್ಲಾ ಹೋಗಿದೆಯಾ? ಕುಮಾರಸ್ವಾಮಿ ಇದನ್ನು ಸ್ವಇಚ್ಛೆಯಿಂದ ಮಾಡುತ್ತಿಲ್ಲ ಎಂಬುದಕ್ಕೆ ಅವರ ಈ ಯೂಟರ್ನ್ ಸಾಕ್ಷಿಯಲ್ಲವೇ? ಇದನ್ನೆಲ್ಲಾ ನಾವು ಎದುರಿಸಲು ಸಿದ್ಧರಿದ್ದೇವೆʼʼ ಎಂದು ಸಿದ್ದರಾಮಯ್ಯ ಹೇಳಿದರು.