ಗೋಶಾಲೆ ಆರಂಭದ ನಿರ್ಧಾರ ಹಿಂಪಡೆದ ಸರ್ಕಾರ; ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಯೋಜನೆ ನಿರ್ಧಾರ ಹಿಂಪಡೆದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.;
ಜಿಲ್ಲೆಗೊಂದು ಗೋಶಾಲೆ ಆರಂಭಿಸುವ ನಿರ್ಧಾರವನ್ನು ಹಿಂಪಡೆದ ರಾಜ್ಯ ಸರ್ಕಾರದ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಗೋಶಾಲೆ ಆರಂಭಿಸುವ ಬದಲು ಗೋಹತ್ಯೆಗೆ ಪ್ರಚೋದನೆ ನೀಡುವ ನಿರ್ಧಾರ ಕೈಗೊಂಡಿದೆ ಎಂದು ಬಿಜೆಪಿ ಆರೋಪಿಸಿದೆ.
ಈಗಾಗಲೇ ಹಲವು ವಿಚಾರಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರತಿಪಕ್ಷ ಬಿಜೆಪಿ, ಈಗ ಗೋಶಾಲೆ ವಿಚಾರವನ್ನು ಮುನ್ನೆಲೆಗೆ ತಂದಿದ್ದು, ಸರ್ಕಾರದ ನಿರ್ಧಾರವನ್ನು ಖಂಡಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೊಂದು ಗೋಶಾಲೆ ನಿರ್ಮಾಣದ ನಿರ್ಧಾರವನ್ನು ಕೈಗೊಂಡು, ಅಗತ್ಯ ಹಣಕಾಸು ಅನುದಾನ ಘೋಷಿಸಲಾಗಿತ್ತು.
ಸರ್ಕಾರದ ನಿರ್ಧಾರ ಏನು?
ರಾಜ್ಯದಲ್ಲಿ ಆರಂಭಿಸಿರುವ ಗೋಶಾಲೆಗಳಿಗೆ ಜಾನುವಾರುಗಳೇ ಬರುತ್ತಿಲ್ಲ. ಆ ಹಿನ್ನೆಲೆಯಲ್ಲಿ ಹೊಸ ಗೋಶಾಲೆ ಆರಂಭಿಸುವ ಬದಲು ಹಾಲಿ ಇರುವ ಗೋಶಾಲೆಗಳನ್ನೇ ಬಲವರ್ಧನೆಗೊಳಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿತ್ತು.
ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ್ದ ಜಿಲ್ಲೆಗೊಂದು ಗೋಶಾಲೆ ಆರಂಭಿಸುವ ನಿರ್ಧಾರವನ್ನು ಹಿಂಪಡೆದು, ಸರ್ಕಾರದ ಅಡಿಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ 14 ಗೋಶಾಲೆಗಳನ್ನು ಬಲವರ್ಧನೆಗೊಳಿಸಲು ನಿರ್ಧರಿಸಿದೆ. ಅಲ್ಲದೇ ಗೋಶಾಲೆ ಸ್ಥಾಪನೆಗಾಗಿ ಮೀಸಲಿರಿಸಿದ್ದ ಅನುದಾನದ ಪೈಕಿ ಉಳಿದಿರುವ 10.50 ಕೋಟಿ ರೂ.ಗಳನ್ನು ಹಳೆಯ ಗೋಶಾಲೆಗಳಿಗೆ ವಿನಿಯೋಗಿಸಲು ಸಂಪುಟ ಒಪ್ಪಿಗೆ ನೀಡಿತ್ತು.
ಹೊಸ ಗೋಶಾಲೆ ನಿರ್ಮಿಸುವ ಬದಲು ಈಗಾಗಲೇ ದಕ್ಷಿಣಕನ್ನಡ, ಉಡುಪಿಯಲ್ಲಿರುವ ತಲಾ ಎರಡು ಗೋಶಾಲೆ ಹಾಗೂ ಕಾರವಾರ, ಹಾಸನ, ಬೆಂಗಳೂರು ನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಧಾರವಾಡ, ಮೈಸೂರು, ತುಮಕೂರು, ಬೀದರ್, ಬೆಳಗಾವಿಯಲ್ಲಿರುವ ತಲಾ 1 ಗೋಶಾಲೆಗೆ ತಲಾ 2.50 ಕೋಟಿ ರೂ.ನಂತೆ ಅನುದಾನ ಹಂಚಿಕೆ ಮಾಡಲು ನಿರ್ಣಯಿಸಿತ್ತು.
ಬಿಜೆಪಿ ಸರ್ಕಾರದ ಯೋಜನೆ ಏನಿತ್ತು?
2022-23ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಬಿಜೆಪಿ ನೇತೃತ್ವದ ಸರ್ಕಾರ ಪ್ರತಿ ಜಿಲ್ಲೆಗೊಂದರಂತೆ ಒಟ್ಟು 35 ಗೋಶಾಲೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿತ್ತು. ಇದರ ಭಾಗವಾಗಿ ಕಾರವಾರ, ಹಾಸನ, ಬೆಂಗಳೂರು ನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಧಾರವಾಡ, ಉಡುಪಿ, ಮೈಸೂರು, ತುಮಕೂರು, ಉಡುಪಿ, ಬೀದರ್, ದಕ್ಷಿಣ ಕನ್ನಡ, ಬೆಳಗಾವಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ನಿರ್ಮಿಸಿತ್ತು. ಉಳಿದೆಡೆ ಗೋಶಾಲೆ ಇನ್ನೂ ನಿರ್ಮಿಸಿರಲಿಲ್ಲ. ಹೊಸ 21ಗೋಶಾಲೆ ನಿರ್ಮಿಸುವ ಬಿಜೆಪಿ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಹಿಂಪಡೆದಿದೆ.
2021-22 ರಲ್ಲಿ ಬಿಜೆಪಿ ಸರ್ಕಾರ ಪ್ರತಿ ಜಿಲ್ಲೆಗೊಂದು ಸರ್ಕಾರಿ ಗೋಶಾಲೆ ನಿರ್ಮಿಸುವ ಘೋಷಣೆ ಮಾಡಿತ್ತು. 16 ಜಿಲ್ಲೆಗಳಲ್ಲಿ ಗೋಶಾಲೆ ನಿರ್ವಹಣೆ ಆರಂಭಿಸಿ, ನಿರ್ವಹಣೆ ಮಾಡುತ್ತಿತ್ತು. 2022-23ರ ಬಜೆಟ್‌ನಲ್ಲಿ ಮತ್ತೆ 35 ಗೋಶಾಲೆಗಳ ಸ್ಥಾಪನೆಗೆ ನಿರ್ಧರಿಸಿ, 14 ಗೋಶಾಲೆಗಳನ್ನು ತೆರೆದಿತ್ತು.
ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
ಗೋಶಾಲೆ ನಿರ್ಮಿಸುವ ಯೋಜನೆ ಕೈ ಬಿಟ್ಟಿರುವುದನ್ನು ಬಿಜೆಪಿ ಖಂಡಿಸಿದೆ. ಪುಣ್ಯಕೋಟಿ ಕಥೆಯನ್ನು ಜಗತ್ತಿಗೆ ಸಾರಿದ ಕರುನಾಡು ನಮ್ಮದು. ಗೋವುಗಳ ಸಂರಕ್ಷಣೆ ಈ ನೆಲದ ಸಂಸ್ಕೃತಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೊಂದು ಗೋ ಶಾಲೆ ತೆರೆಯುವ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕೈ ಬಿಟ್ಟಿರುವುದು ಅದರ ‘ಗೋಮುಖ ವ್ಯಾಘ್ರತನ’ವನ್ನು ಅನಾವರಣ ಮಾಡಿದೆ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದ ʼಎಕ್ಸ್ʼನಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ಗೋವುಗಳು ಗೋ ಶಾಲೆಗೆ ಬರುತ್ತಿಲ್ಲ ಎನ್ನುವುದು ನೆಪವಷ್ಟೇ. ಇಚ್ಚಾಶಕ್ತಿ ಪ್ರಾಮಾಣಿಕ ಇದ್ದರೆ ಗೋ ಶಾಲೆಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತವೆ. ಗೋ ಮಾಂಸ ಭಕ್ಷಕರ ಪರವಾಗಿ ಸದಾ ಚಿಂತಿಸುವ ಕಾಂಗ್ರೆಸ್ ಸರ್ಕಾರದಿಂದ ಗೋ ಶಾಲೆ ಉಳಿಸಿ-ಬೆಳೆಸುವ ಬದ್ಧತೆ ನಿರೀಕ್ಷಿಸಲು ಹೇಗೆ ಸಾಧ್ಯ? ಎಂದು ಕಿಡಿ ಕಾರಿದ್ದಾರೆ.
ರಾಜ್ಯ ಸರ್ಕಾರದ ಈ ನಿರ್ಧಾರ ಖಂಡನೀಯ. ಗೋವನ್ನು ಪೂಜಿಸುವ ಕೋಟ್ಯಂತರ ಜನರ ಭಾವನೆಯನ್ನು ಸರ್ಕಾರ ಘಾಸಿಗೊಳಿಸಿದೆ ಎಂದು ಹೇಳಿದ್ದಾರೆ.
ಪಶು ಸಂಗೋಪನೆ ಇಲಾಖೆ ಮಾಜಿ ಸಚಿವ, ಔರಾದ್ ಶಾಸಕ ಪ್ರಭು ಚವ್ಹಾಣ್ ಪ್ರತಿಕ್ರಿಯಿಸಿ, ಗೋಹತ್ಯೆಗೆ ಪ್ರಚೋದನೆ ನೀಡಲು ಗೋಶಾಲೆಗಳನ್ನು ಮುಚ್ಚಲಾಗುತ್ತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಭರ್ತಿಯಾಗಿದ್ದ ಗೋಶಾಲೆಗಳು ಕಾಂಗ್ರೆಸ್ ಸರ್ಕಾರದಲ್ಲಿ ಏಕೆ ಖಾಲಿಯಾಗಿವೆ, ಗೋಶಾಲೆಗಳನ್ನು ಮುಚ್ಚುವುದರ ಮೂಲಕ ಕಾಂಗ್ರೆಸ್ ಸರ್ಕಾರ ಗೋಹತ್ಯೆಗೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಗೋಶಾಲೆ ಕುರಿತು ಹೈಕೋರ್ಟ್ ಏನು ಹೇಳಿತ್ತು?
ರಾಜ್ಯದಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2022 ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪ್ರತಿ ಜಿಲ್ಲೆಗೊಂದು ಗೋಶಾಲೆ ತೆರೆಯುವುದಾಗಿ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ಅಂದಿನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ತಾಲ್ಲೂಕು ಮತ್ತು ಪ್ರತಿ ಗ್ರಾಮ ಮಟ್ಟದಲ್ಲೂ ಒಂದು ಗೋಶಾಲೆ ತೆರೆಯಬೇಕು. ಗೋಶಾಲೆಗಳ ಆರಂಭ ಹಾಗೂ ನಿರ್ವಹಣೆ ಕುರಿತ ಮಾರ್ಗಸೂಚಿಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು. ಬೀಡಾಡಿ ಪ್ರಾಣಿಗಳ ಕಲ್ಯಾಣಕ್ಕೆ ಯೋಜನೆ ರೂಪಿಸಿದ್ದರೆ ವಿವರಣೆ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿತ್ತು.