ಯುವಕರಲ್ಲಿ ಸಾಹಿತ್ಯಾಸಕ್ತಿ ಹೆಚ್ಚಿಸಲು ಗ್ರಂಥಾಲಯಗಳಿಗೆ ಸರ್ಕಾರ ಪುಸ್ತಕ ಖರೀದಿಸಲಿ
"ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕ ಖರೀದಿ ಮಾಡುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕೂಡಲೇ ಆರಂಭಿಸಬೇಕು. ಸಾಮಾನ್ಯರು ಓದುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸರ್ಕಾರ ಭಾಷಾಭಿಮಾನ ಬೆಳೆಸುವ, ಸಾಹಿತ್ಯಾಸಕ್ತಿ ಸೃಷ್ಟಿಸುವ ಕೆಲಸ ಮಾಡಬೇಕು" ಎಂದು ಕೇಂದ್ರ ಸಚಿವ ಹೆಚ್‌ಡಿಕೆ ತಿಳಿಸಿದರು.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಯುವಜನತೆ ಮೊಬೈಲ್‌ನಲ್ಲಿ ಕಳೆದುಹೋಗುವ ಬದಲು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಸರ್ಕಾರ ಪುಸ್ತಕ ಖರೀದಿ ಮಾಡುವನ ಮೂಲಕ ಇಂತಹ ಸಂಸ್ಕೃತಿಯನ್ನು ರಾಜ್ಯ ಸರ್ಕಾರ ಉತ್ತೇಜಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಪ್ನ ಪುಸ್ತಕ ಮಳಿಗೆ ಹಮ್ಮಿಕೊಂಡಿದ್ದ ಪುಸ್ತಕ ಜಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕ ಖರೀದಿ ಮಾಡುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕೂಡಲೇ ಆರಂಭಿಸಬೇಕು. ಸಾಮಾನ್ಯರು ಓದುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸರ್ಕಾರ ಭಾಷಾಭಿಮಾನ ಬೆಳೆಸುವ, ಸಾಹಿತ್ಯಾಸಕ್ತಿ ಸೃಷ್ಟಿಸುವ ಕೆಲಸ ಮಾಡಬೇಕು" ಎಂದು ಒತ್ತಾಯಿಸಿದರು.
ನಾಲ್ಕು ವರ್ಷಗಳಿಂದ ಪುಸ್ತಕ ಖರೀದಿಸಿಲ್ಲ
ನಾಲ್ಕೈದು ವರ್ಷಗಳಿಂದ ಕನ್ನಡ ಪುಸ್ತಕಗಳ ಸಗಟು ಖರೀದಿ ಆಗಿಲ್ಲವೆಂದು ಕೇಳಿದ್ದೇನೆ. ಕನ್ನಡ ಪುಸ್ತಕಗಳನ್ನು ಖರಿಸಲಾಗದಷ್ಟು ದುಸ್ಥಿತಿಯಲ್ಲಿ ರಾಜ್ಯ ಇಲ್ಲ. ಪುಸ್ತಕ ಸಂಸ್ಕೃತಿ ಬೆಳೆದಷ್ಟು ಭಾಷೆ ಸದೃಢವಾಗಿ ಬೆಳೆಯುತ್ತದೆ. ನಮ್ಮ ಸುದೈವಕ್ಕೆ ಕನ್ನಡದಲ್ಲಿ ಅತ್ಯಂತ ವಿಪುಲ, ಶ್ರೇಷ್ಠ ಸಾಹಿತ್ಯದ ಆಗರವೇ ಇದೆ. ಅನೇಕ ಮಹಾನ್ ಸಾಹಿತಿಗಳು, ಕವಿಗಳು, ಇನ್ನಿತರ ಬರಹಗಾರರು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕನ್ನಡದಲ್ಲಿ ಶ್ರೇಷ್ಠ ಸಾಹಿತ್ಯಕ್ಕೆ ಕೊರತೆಯಿಲ್ಲ
ತರಾಸು ಅವರ 'ದುರ್ಗಾಸ್ತಮಾನ' ಕಾದಂಬರಿಯನ್ನು ಅನೇಕ ಸಲ ಓದಿದ್ದೇನೆ. ಈಗ ಮತ್ತೊಮ್ಮೆ ಓದುತ್ತಿದ್ದೇನೆ. ಎಷ್ಟು ಸಲ ಓದಿದರೂ ಮತ್ತೆ ಮತ್ತೆ ಓದಿಸಿಕೊಳ್ಳುವ ಶಕ್ತಿ ಆ ಮಹಾನ್ ಕಾದಂಬರಿಗೆ ಇದೆ. ತರಾಸು ಅವರ ಕಥನಶೈಲಿ, ಬರವಣಿಗೆಯ ಕುಸುರಿಗಾರಿಕೆ ನನ್ನನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಪ್ರತಿ ಪುಟ ಓದುವಾಗಲೂ ಮೈ ನವಿರೇಳುತ್ತದೆ. ಇಂತಹ ಸಾರ್ವಕಾಲಿಕ ಶ್ರೇಷ್ಠ ಕಾದಂಬರಿಗಳು ಕನ್ನಡಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿವೆ. ಈ ಸಾಹಿತ್ಯವನ್ನು ಕನ್ನಡಿಗರು ಓದಬೇಕಲ್ಲವೇ ಎಂದು ಹೇಳಿದರು.
ಪ್ರಕಾಶನ ಸಂಸ್ಥೆ ಕಟ್ಟಿ ಬೆಳೆಸುವುದು ಕಷ್ಟ
ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕನ್ನಡ ಸಾಹಿತ್ಯ ಸಮಗ್ರವಾಗಿ ಲಭ್ಯ ಇರಬೇಕು. ಸರ್ಕಾರ ಸಗಟು ಪುಸ್ತಕ ಖರೀದಿಯನ್ನು ಕಾಟಾಚಾರಕ್ಕೆ ಮಾಡಬಾರದು. ಮಾತೃಪ್ರೀತಿಯಿಂದ ಮಾಡಬೇಕು. 'ನಮ್ಮ ಕನ್ನಡ, ನಮ್ಮ ಸಾಹಿತ್ಯ, ನಮ್ಮ ಸಾಹಿತಿಗಳು' ಎನ್ನುವ ಅಕ್ಕರೆಯಿಂದ ಪುಸ್ತಕ ಖರೀದಿ ಮಾಡಬೇಕು. ಇವತ್ತಿನ ಕಾಲಘಟ್ಟದಲ್ಲಿ ಪ್ರಕಾಶನ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು, ಉಳಿಸಿಕೊಳ್ಳುವುದು ಕಷ್ಟದ ಕೆಲಸ. ಆದರೂ ಕರ್ನಾಟಕದಲ್ಲಿ ಅಸಂಖ್ಯಾತ ಪ್ರಕಾಶನ ಸಂಸ್ಥೆಗಳು ಕನ್ನಡದ ಮೇಲಿನ ಮಮತೆಯಿಂದ ಪ್ರಕಾಶನ ಕಾರ್ಯ ಮಾಡುತ್ತಿವೆ. ಸಪ್ನ ಪುಸ್ತಕ ಮಳಿಗೆ ಈ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ನಾನು ಕೂಡ ನಿರಂತರವಾಗಿ ಪುಸ್ತಕ ಖರೀದಿ ಮಾಡುತ್ತಿದ್ದು, ಸಪ್ನ ಮಳಿಗೆಗೆ ಕಾಯಂ ಖರೀದಿದಾರನಾಗಿದ್ದೇನೆ ಎಂದರು.