ಚಿನ್ನ ವಂಚನೆ ಪ್ರಕರಣ | ರಾಜಕಾರಣಿಗಳ ಜತೆ ಐಶ್ವರ್ಯ ಗೌಡ ನಂಟು - ಇ.ಡಿ
ಕೆಲ ರಾಜಕಾರಣಿಗಳ ಜತೆ ಐಶ್ವರ್ಯ ಸಂಪರ್ಕದಲ್ಲಿ ಇದ್ದುದಕ್ಕೆ ಮತ್ತು ಅವರೊಂದಿಗೆ ಹಣಕಾಸು ವ್ಯವಹಾರ ನಡೆಸಿರುವುದಕ್ಕೂ ಸಾಕ್ಷ್ಯಗಳು ದೊರೆತಿವೆ ಇ.ಡಿ ಮೂಲಗಳು ತಿಳಿಸಿವೆ.;
ಕೋಟ್ಯಂತರ ರೂ. ಚಿನ್ನಾಭರಣ ವಂಚನೆ ಪ್ರಕರಣದ ಆರೋಪಿ ಐಶ್ವರ್ಯಗೌಡ ರಾಜ್ಯದ ಹಲವು ಪ್ರಭಾವಿಗಳ ಜತೆ ಹಣಕಾಸು ವ್ಯವಹಾರ ನಡೆಸಿರುವ ಸಂಗತಿ ಜಾರಿ ನಿರ್ದೇಶನಾಲಯದ ತನಿಖೆಯಿಂದ ತಿಳಿದು ಬಂದಿದೆ.
ನಾವು ಹೇಳಿದಂತೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಕೊಡಿಸುತ್ತೇವೆ ಎಂದು ಐಶ್ವರ್ಯ ಗೌಡ ಹಾಗೂ ಆಕೆಯ ಪತಿ ಹರೀಶ್ ಕೆ.ಎನ್. ಹಲವು ಉದ್ಯಮಿಗಳಿಗೆ ವಂಚಿಸಿದ್ದಾರೆ ಎಂದು ಇ.ಡಿ ಹೇಳಿದೆ.
ಐಶ್ವರ್ಯಗೌಡ ಮಾತು ನಂಬಿದ ಉದ್ಯಮಿಗಳು ಚಿನ್ನ, ನಗದು ನೀಡಿದ್ದರು. ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾವಣೆ ಮಾಡಿದ್ದರು. ವಂಚನೆಗೆ ಯಾರೆಲ್ಲಾ ಒಳಗಾಗಿದ್ದಾರೆ ಎಂಬ ದಿಕ್ಕಿನಲ್ಲಿ ತನಿಖೆ ನಡೆಸಲಾಗುತ್ತಿದೆ.
ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಐಶ್ವರ್ಯ ಗೌಡ, ಹರೀಶ್ ಅವರ ಮನೆಗಳು ಮತ್ತು ಅವರ ಸಂಪರ್ಕದಲ್ಲಿ ಇದ್ದ ಕೆಲ ಪ್ರಭಾವಿಗಳ ಮನೆಯೂ ಸೇರಿ 14 ಕಡೆ ಎರಡು ದಿನ ಸತತ ತಪಾಸಣೆ ನಡೆಸಿದ್ದೇವೆ. ಈ ವೇಳೆ ಬ್ಯಾಂಕ್ ಖಾತೆ ವಹಿವಾಟು ದಾಖಲೆಗಳು, ಹೂಡಿಕೆ ಪತ್ರಗಳು, 2.25 ಕೋಟಿ ರೂ.ನಗದು ಮತ್ತು ಹಲವು ದುಬಾರಿ ಬೆಲೆಯ ಚರಾಸ್ತಿಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಇ. ಡಿ. ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.
ಹೂಡಿಕೆ ಮಾಡಿದವರು ಹಣವನ್ನು ವಾಪಸ್ ಕೇಳಿದಾಗ ಐಶ್ವರ್ಯ ಅವರು ರಾಜ್ಯದ ಕೆಲ ಪ್ರಭಾವಿ ರಾಜಕಾರಣಿಗಳ ಹೆಸರು ಬಳಸಿಕೊಂಡು ಬೆದರಿಕೆ ಹಾಕಿದ್ದಾರೆ. ಕೆಲ ರಾಜಕಾರಣಿಗಳ ಜತೆ ಐಶ್ವರ್ಯ ಸಂಪರ್ಕದಲ್ಲಿ ಇದ್ದುದಕ್ಕೆ ಮತ್ತು ಅವರೊಂದಿಗೆ ಹಣಕಾಸು ವ್ಯವಹಾರ ನಡೆಸಿರುವುದಕ್ಕೂ ಸಾಕ್ಷ್ಯಗಳು ದೊರೆತಿವೆ ಇ.ಡಿ ಮೂಲಗಳು ತಿಳಿಸಿವೆ.
ನನ್ನ ವಿರುದ್ಧ ಷಡ್ಯಂತ್ರ: ವಿನಯ್ ಕುಲಕರ್ಣಿ
ಐಶ್ವರ್ಯ ಗೌಡ ಪ್ರಕರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಹೀಗೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೂರಿದ್ದಾರೆ.
ಐಶ್ವರ್ಯಗೌಡ ಪ್ರಕರಣ ಸಂಬಂಧ ವಿನಯ್ ಕುಲಕರ್ಣಿ ಮನೆಯಲ್ಲಿಯೂ ಇ.ಡಿ ಅಧಿಕಾರಿಗಳು ಗುರುವಾರ ತಪಾಸಣೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಿನಯ್ ಕುಲಕರ್ಣಿ 'ತನಿಖೆಯ ಹೆಸರಿನಲ್ಲಿ ಒಂದು ತಿಂಗಳಿಂದ ನನಗೆ ಹಿಂಸೆ ನೀಡಲಾಗುತ್ತಿದೆ. ಐಶ್ವರ್ಯ ಜತೆಗೆ ನನ್ನ ಆರ್ಥಿಕ ವ್ಯವಹಾರ ಇದ್ದರೆ ಅದನ್ನು ಸುಲಭವಾಗಿ ಪತ್ತೆ ಮಾಡಬಹುದಿತ್ತು. ಆದರೆ ಅಂಥದ್ದೇನೂ ಇಲ್ಲ. ಹೀಗಾಗಿಯೇ ಅನಗತ್ಯವಾಗಿ ಹಿಂಸೆ ನೀಡುತ್ತಿದ್ದಾರೆ' ಎಂಡು ಆರೋಪಿಸಿದ್ದಾರೆ.