ಗೋವಾ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಮಹದಾಯಿ ವಿಚಾರದಲ್ಲಿ ಡಿಕೆಶಿ ಕಿಡಿ

ಮಹದಾಯಿ ಯೋಜನೆಯನ್ನು ಅನುಷ್ಠಾನಗೊಳಿಸುವುದು ಸ್ವಾಭಿಮಾನದ ಪ್ರಶ್ನೆಯಾಗಿದ್ದು, ರಾಜ್ಯದ ಎಲ್ಲಾ ಸಂಸದರನ್ನು ಒಗ್ಗೂಡಿಸಿ, ಪ್ರಧಾನ ಮಂತ್ರಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರ ಬಳಿಗೆ ನಿಯೋಗ ಕೊಂಡೊಯ್ಯುವುದಾಗಿ ಸ್ಪಷ್ಟಪಡಿಸಿದರು.;

Update: 2025-07-24 07:10 GMT

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಗೋವಾ ಸಿಎಂ ಪ್ರಮೋದ್‌ ಸಾವಂತ್‌

ಮಹದಾಯಿ ಯೋಜನೆಗೆ ಗೋವಾ ಸರ್ಕಾರವು ಪದೇ ಪದೇ ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಗೋವಾ ಮುಖ್ಯಮಂತ್ರಿಗಳು ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ, ಅವರಿಗೆ ಒಕ್ಕೂಟ ವ್ಯವಸ್ಥೆಯ (Federal Structure) ಬಗ್ಗೆಯೇ ತಿಳಿದಿಲ್ಲ," ಎಂದು ಏಕವಚನದಲ್ಲೇ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆಯನ್ನು ಅನುಷ್ಠಾನಗೊಳಿಸುವುದು ಕರ್ನಾಟಕದ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ಈ ವಿಚಾರದಲ್ಲಿ ರಾಜ್ಯದ ಎಲ್ಲಾ ಸಂಸದರನ್ನು ಒಗ್ಗೂಡಿಸಿ, ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರ ಬಳಿಗೆ ನಿಯೋಗ ಕೊಂಡೊಯ್ಯುವುದಾಗಿ ಸ್ಪಷ್ಟಪಡಿಸಿದರು.

"ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಮಂಡಳಿಯ ತೀರ್ಪು ಬಂದಿದೆ, ಟೆಂಡರ್ ಕೂಡ ಕರೆಯಲಾಗಿದೆ. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಇದು ನಮ್ಮ ಹಕ್ಕು ಮತ್ತು ನಮ್ಮ ಸ್ವಾಭಿಮಾನದ ಪ್ರಶ್ನೆ," ಎಂದು ಡಿ.ಕೆ. ಶಿವಕುಮಾರ್ ಗುಡುಗಿದರು.

ಈ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದ ಅವರು, "ನಾನು ರಾಜ್ಯದ 28 ಲೋಕಸಭಾ ಮತ್ತು 12 ರಾಜ್ಯಸಭಾ ಸದಸ್ಯರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಈ ವಿಚಾರವಾಗಿ ಎಲ್ಲಾ ಸಂಸದರೂ ಧ್ವನಿ ಎತ್ತಬೇಕು. ಇದು ಎಲ್ಲರ ಸ್ವಾಭಿಮಾನದ ಪ್ರಶ್ನೆ. ಒಂದು ಸಂಸದ ಸ್ಥಾನಕ್ಕಾಗಿ ಸುಮ್ಮನೆ ಕೂರುವುದು ಸರಿಯಲ್ಲ," ಎಂದು ಪರೋಕ್ಷವಾಗಿ ಕೆಲ ಸಂಸದರ ಮೌನವನ್ನು ಪ್ರಶ್ನಿಸಿದರು.

"ನಮ್ಮ ಕೆಲಸವನ್ನು ಮಾಡಲು ನಾವು ಏನು ಬೇಕಾದರೂ ಮಾಡುತ್ತೇವೆ. ರಾಜ್ಯದ ಹಕ್ಕನ್ನು ಪಡೆದೇ ತೀರುತ್ತೇವೆ. ಶೀಘ್ರದಲ್ಲೇ ಎಲ್ಲಾ ಸಂಸದರ ನಿಯೋಗವನ್ನು ದೆಹಲಿಗೆ ಕರೆದೊಯ್ದು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು," ಎಂದು ಅವರು ತಿಳಿಸಿದರು.

Tags:    

Similar News