ಬಲೂನ್ ಮಾರುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ,ಕೊಲೆ; ಆರೋಪಿ ಕಾಲಿಗೆ ಗುಂಡೇಟು
ಮೇಟಗಳ್ಳಿ ಬಳಿ ಪೊಲೀಸರು ಆತನನ್ನು ಬಂಧಿಸಲು ಯತ್ನಿಸಿದ ವೇಳೆ ಕಾನ್ಸ್‌ಟೇಬಲ್ ವೆಂಕಟೇಶ್ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದಾನೆ. ಈ ವೇಳೆ ಸಬ್ ಇನ್ಸ್‌ಪೆಕ್ಟರ್ ಜೈಕೀರ್ತಿ ಅವರು ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ.
ಅತ್ಯಾಚಾರ ಆರೋಪಿಯನ್ನು ಗುಂಡು ಹಾರಿಸಿ ಬಂಧಿಸಿದ ಪೊಲೀಸರು
ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿಗೆ ಬಲೂನ್‌ಗಳನ್ನು ಮಾರಾಟ ಮಾಡಲು ತನ್ನ ಹೆತ್ತವರೊಂದಿಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಗುರುವಾರ ಮುಂಜಾನೆ ನಡೆದಿದ್ದು, ಇದೀಗ ಆರೋಪಿಯನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಆರೋಪಿಯನ್ನು ಮೈಸೂರಿನ ಸಿದ್ದಲಿಂಗಪುರ ನಿವಾಸಿ ಕಾರ್ತಿಕ್ ಎಂದು ಗುರುತಿಸಲಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಂದ ಬಳಿಕ ಆತ ಬಸ್‌ನಲ್ಲಿ ಕೊಳ್ಳೇಗಾಲಕ್ಕೆ ಪರಾರಿಯಾಗಿದ್ದ. ಮೇಟಗಳ್ಳಿ ಬಳಿ ಪೊಲೀಸರು ಆತನನ್ನು ಬಂಧಿಸಲು ಯತ್ನಿಸಿದ ವೇಳೆ ಕಾನ್ಸ್‌ಟೇಬಲ್ ವೆಂಕಟೇಶ್ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದಾನೆ. ಈ ವೇಳೆ ಸಬ್ ಇನ್ಸ್‌ಪೆಕ್ಟರ್ ಜೈಕೀರ್ತಿ ಅವರು ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಸದ್ಯ ಆರೋಪಿ ಕಾರ್ತಿಕ್ ನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಗುತ್ತಿದ್ದು, ಆಸ್ಪತ್ರೆಗೆ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಭೇಟಿ ಮಾಹಿತಿ ಪಡೆದುಕೊಂಡರು.
ಘಟನೆ ಏನು?
ಕಲಬುರಗಿಯ ಮೂಲದ ದಂಪತಿಗಳ ನಾಲ್ವರು ಮಕ್ಕಳಲ್ಲಿ ಈ ಬಾಲಕಿಯೂ ಒಬ್ಬಳಾಗಿದ್ದಳು. ಕುಟುಂಬವು ದಸರಾ ವೇಳೆ ಬಲೂನ್ ಮಾರಾಟಕ್ಕಾಗಿ ಮೈಸೂರಿಗೆ ಬಂದಿತ್ತು. ಮಗು ತನ್ನ ಕುಟುಂಬದವರೊಂದಿಗೆ ತಾತ್ಕಾಲಿಕ ಶೆಡ್‌ನಲ್ಲಿ ಮಲಗಿತ್ತು. ಬೆಳಿಗ್ಗೆ ಸುಮಾರು 4 ಗಂಟೆಗೆ ಮಳೆ ಬರುವಾಗ ತಾಯಿ ಎಚ್ಚರಗೊಂಡು ತನ್ನ ಮಕ್ಕಳಲ್ಲಿ ಒಬ್ಬಳು ಕಾಣೆಯಾಗಿರುವುದನ್ನು ಗಮನಿಸಿದರು. ಈ ವೇಳೆ ಮಗುವಿಗಾಗಿ ಹುಡುಕಾಟ ನಡೆಸಿದಾಗ ಶೆಡ್‌ನಿಂದ ಸುಮಾರು 50 ಮೀಟರ್ ದೂರದಲ್ಲಿ ಬಾಲಕಿಯ ಶವ ಪತ್ತೆಯಾಯಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ವೇಳೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಶಂಕಿತನ ಗುರುತು ಪತ್ತೆಯಾದ್ದರಿಂದ ಪೊಲೀಸರು ಕೊಳ್ಳೇಗಾಲದಲ್ಲಿ ಆತನನ್ನು ಬಂಧಿಸಿದ್ದಾರೆ. ಬುಧವಾರ ಚಾಮುಂಡೇಶ್ವರಿ ದೇವಿ ತೆಪ್ಪೋತ್ಸವ ಮುಗಿದ ನಂತರ ಈ ಕುಟುಂಬವು ಕಲಬುರಗಿಗೆ ಮರಳಲು ಸಿದ್ದತೆ ನಡೆಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಕಾರ್ತಿಕ್ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಯತ್ನ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿದ್ದ. ಎರಡು ವರ್ಷಗಳ ಕಾಲ ಜೈಲಿನಲ್ಲಿ ಇದ್ದು, ನಾಲ್ಕು ತಿಂಗಳ ಹಿಂದೆ ಬಿಡುಗಡೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆ ನಜರ್‌ಬಾದ್ ಪೊಲೀಸ್ ಠಾಣೆ ನಡೆಸುತ್ತಿದ್ದು, ಆರೋಪಿಯನ್ನು ಶುಕ್ರವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.