ಗ್ರೇಟರ್‌ ಬೆಂಗಳೂರು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ: ಭೋಜನ ಕೂಟದಲ್ಲಿ ಸಿಎಂ ಸೂಚನೆ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಾಧ್ಯವೇ ಇಲ್ಲವೆಂದು ಪ್ರತಿಪಕ್ಷಗಳು ಆರೋಪ ಮಾಡಿದ್ದವು, ಎರಡು ವರ್ಷಗಳೂ ಕಳೆದರೂ ಯೋಜನೆಗಳು ಮುಂದುವರೆದಿವೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Update: 2025-10-14 06:20 GMT

ಸಿಎಂ ಸಿದ್ದರಾಮಯ್ಯ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಸಚಿವರು ಪಾಲ್ಗೊಂಡಿದ್ದರು.

Click the Play button to listen to article

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ನಡೆದ ಸಚಿವರ ಭೋಜನ ಕೂಟದಲ್ಲಿ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳೂ ಸೇರಿದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಲ್ಲಾ ಸಚಿವರೂ ತಕ್ಷಣದಿಂದಲೇ ಸಂಘಟನಾ ಸಿದ್ಧತೆ ಆರಂಭಿಸಬೇಕೆಂದು ಸ್ಪಷ್ಟ ಸೂಚನೆ ನೀಡಿದರು.

ಪ್ರತಿಪಕ್ಷ ನಾಯಕರು ಸರ್ಕಾರದ ವಿರುದ್ಧ ಹಲವು ವಿಷಯಗಳಲ್ಲಿ ಆರೋಪಗಳನ್ನು ಮುಂದಿರಿಸುತ್ತಿರುವ ಪೈಕಿ, ಕೆಲವು ಸಚಿವರನ್ನು ಹೊರತುಪಡಿಸಿ ಉಳಿದವರು ಸಮರ್ಪಕವಾಗಿ ಪ್ರತಿಕ್ರಿಯೆ ನೀಡಿ ಸರ್ಕಾರವನ್ನು ಸಮರ್ಥಿಸುವಲ್ಲಿ ಮುಂದಾಗುತ್ತಿಲ್ಲವೆಂದು ಅವರು ಆತಂಕ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ವಿಪಕ್ಷ ಟೀಕೆಗೆ ಸರ್ಕಾರ ಪರವಾಗಿ ಒಗ್ಗಟ್ಟಿನ, ತ್ವರಿತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ನೀಡಬೇಕು ಎಂದು ಸಿಎಂ ಹೇಳಿದರು.

ಶಾಸಕರ ಕ್ಷೇತ್ರಗಳ ಅಭಿವೃದ್ಧಿಗಾಗಿ ಸರ್ಕಾರ ಬಿಡುಗಡೆ ಮಾಡಿದ 50 ಕೋಟಿ ರೂಪಾಯಿ ಅನುದಾನವನ್ನು ಗುರಿಯನ್ವಯ, ನಿಯಮಾನುಸಾರ ಹಾಗೂ ಫಲಿತಾಂಶಮುಖಿಯಾಗಿ ಬಳಸುವ ಜವಾಬ್ದಾರಿ ಸಂಬಂಧಿತ ಸಚಿವರು ಮತ್ತು ಇಲಾಖೆಗಳ ಮೇಲಿದೆ ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು. ಸಾರ್ವಜನಿಕ ಆಚರಣೆಗಳ ಅನುಮತಿ ಪ್ರಕ್ರಿಯೆ ಬಗ್ಗೆ ಉಲ್ಲೇಖಿಸಿದ ಅವರು, ಗಣಪತಿ ಹಬ್ಬದ ಆಚರಣೆಗೆ ನಿಯಮಾನುಸಾರ ಅನುಮತಿ ಪಡೆಯಲಾಗುತ್ತಿದೆ, ಆದರೆ ರಾಷ್ಟ್ರೀಯ ಸ್ವಯಂ ಸೇವಾ ಸಂಘ ತನ್ನ ಚಟುವಟಿಕೆಗಳಿಗೆ ಅನುಮತಿ ಪಡೆಯದ ಪ್ರಕರಣಗಳು ಎದುರಾಗುತ್ತಿವೆ ಎನ್ನುವ ವಿಷಯ ಗಮನಕ್ಕೆ ಬಂದಿದ್ದು, ಸರ್ಕಾರಿ ಸ್ಥಳಗಳಲ್ಲಿ ಇಂತಹ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ಅವಲೋಕಿಸಲು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳು ಎತ್ತಿದ್ದ ಅನುಮಾನಗಳನ್ನು ತಳ್ಳಿಹಾಕಿದ ಸಿಎಂ, ಎರಡು ವರ್ಷ ಕಳೆದರೂ ಯೋಜನೆಗಳು ಅಡಚಣೆಯಿಲ್ಲದೆ ಮುಂದುವರಿದಿವೆ, ರಾಜ್ಯದ ಅಭಿವೃದ್ಧಿ ಕೆಲಸಗಳಿಗೂ ಹಣಕಾಸಿನ ತೊಂದರೆ ಆಗಿಲ್ಲ, ಎಲ್ಲಾ ಶಾಸಕರಿಗೂ ಅನುದಾನಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. ಇದಾದರೂ ವಿರೋಧ ಪಕ್ಷಗಳು ನಿರಂತರ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಸಚಿವರು ಇನ್ನಷ್ಟು ಚುರುಕಾಗಿ ಮಾಹಿತಿಯಾಧಾರಿತ ಪ್ರತಿಕ್ರಿಯೆ ನೀಡಿ ಜನತೆಗೆ ಸರಕಾರದ ಕೆಲಸಗಳನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಸಬೇಕೆಂದು ಸಲಹೆ ನೀಡಿದರು.

ಸಂವಹನ ಮತ್ತು ಸಮನ್ವಯದ ಕೊರತೆಯನ್ನೂ ಸಿಎಂ ಉಲ್ಲೇಖಿಸಿದರು. ತಮ್ಮ ಭೇಟಿಗಳ ವೇಳೆ ಶಾಸಕರು ಸಚಿವರ ವಿರುದ್ಧ ಪದೇ ಪದೇ ಅಸಮಾಧಾನ ಹೊರ ಹಾಕುತ್ತಿರುವುದಾಗಿ ತಿಳಿಸಿ, ಶಾಸಕರ ಪತ್ರಗಳಿಗೆ ಕೂಡಲೇ ಸ್ಪಂದನೆ ನೀಡುವಂತೆ ಮತ್ತು ಕೆಲಸದ ಶೈಲಿಯಲ್ಲಿ ಅಗತ್ಯ ಬದಲಾವಣೆ ತಂದು ಕ್ಷೇತ್ರ ಮಟ್ಟದ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಬೇಕೆಂದು ಕಿವಿಮಾತು ಹೇಳಿದರು.

ಭೋಜನ ಕೂಟದಲ್ಲಿ ಬಹುತೇಕ ಎಲ್ಲಾ ಸಚಿವರು ಭಾಗಿಯಾಗಿದ್ದು, ಜಮೀರ್ ಅಹಮದ್ ಖಾನ್, ಎನ್‌.ಎಸ್‌ ಬೋಸರಾಜು, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಮಂಕಾಳ ವೈದ್ಯ ಅವರು ಮುಖ್ಯಮಂತ್ರಿಯಿಂದ ಅನುಮತಿ ಪಡೆದು ಗೈರುಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.

Tags:    

Similar News