ಗಂಗೇನಹಳ್ಳಿ ಡಿನೋಟಿಫಿಕೇಷನ್ | ಬಹುಕೋಟಿ ಮೌಲ್ಯದ ಭೂಸ್ವಾಧೀನ ಕೈಬಿಟ್ಟ ಆರೋಪ: ಬಿಎಸ್‌ವೈ ವಿಚಾರಣೆ
ಬೆಂಗಳೂರಿನ ಗಂಗೇನಹಳ್ಳಿಯ (ಈಗಿನ ಗಂಗಾನಗರ) 1 ಎಕರೆ 11 ಗುಂಟೆ ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶನಿವಾರ ವಿಚಾರಣೆಗೆ ಒಳಪಡಿಸಿದರು.;
ಬೆಂಗಳೂರಿನ ಗಂಗೇನಹಳ್ಳಿಯ (ಈಗಿನ ಗಂಗಾನಗರ) 1 ಎಕರೆ 11 ಗುಂಟೆ ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶನಿವಾರ ವಿಚಾರಣೆಗೆ ಒಳಪಡಿಸಿದರು.
2015ರಲ್ಲಿ ದಾಖಲಾಗಿದ್ದ ಈ ಪ್ರಕರಣದಲ್ಲಿ ತನಿಖೆ ಮುಂದುವರೆಸಬಹುದು ಎಂದು 2021ರಲ್ಲೇ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ, ಈಗಷ್ಟೇ ತನಿಖೆ ಚುರುಕುಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, 2007ರಿಂದ 2010ರ ನಡುವೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಆಪ್ತ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಐವರು ಅಧಿಕಾರಿಗಳ ಹೇಳಿಕೆಗಳನ್ನು ವಿಶೇಷ ನ್ಯಾಯಾಲಯವು ಗುರುವಾರ ಮತ್ತು ಶುಕ್ರವಾರ ದಾಖಲಿಸಿಕೊಂಡಿತ್ತು. ಅದರ ಬೆನ್ನಲ್ಲೇ ಯಡಿಯೂರಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಕರೆಸಿ, ವಿಚಾರಣೆ ನಡೆಸಿದರು.
'ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಬೇರೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ, ಅವರು ಶನಿವಾರವೇ ಬರುವುದಾಗಿ ತಿಳಿಸಿ, ಲೋಕಾಯುಕ್ತ ಕಚೇರಿಗೆ ಹಾಜರಾದರು' ಎಂದು ಮೂಲಗಳು ಹೇಳಿವೆ. ಪ್ರಕರಣದ ತನಿಖಾಧಿಕಾರಿ ಬಸವರಾಜ ಮಗ್ಗುಂ ಅವರ ಮುಂದೆ ಹಾಜರಾದ ಯಡಿಯೂರಪ್ಪ, ಸುಮಾರು ಎರಡೂವರೆ ಗಂಟೆ ವಿಚಾರಣೆ ಎದುರಿಸಿದರು. ಒಂಬತ್ತು ವರ್ಷಗಳಷ್ಟು ಹಳೆಯ ಪ್ರಕರಣದ ವಿಚಾರಣೆ ಈಗ ಮುನ್ನೆಲೆಗೆ ಬಂದಿದ್ದು, ರಾಜಕೀಯ ಜಟಾಪಟಿಗೂ ಕಾರಣವಾಗಿದೆ.
ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಮತ್ತು ಸಂತೋಷ್ ಲಾಡ್ ಅವರು ಗುರುವಾರವಷ್ಟೇ ಮಾಧ್ಯಮಗೋಷ್ಠಿ ನಡೆಸಿ, 'ಕುಮಾರಸ್ವಾಮಿ ಅವಧಿಯಲ್ಲಿ ಡಿನೋಟಿಫಿಕೇಷನ್‌ಗೆ ಯತ್ನ ನಡೆದಿತ್ತು. ಯಡಿಯೂರಪ್ಪ ಅವಧಿಯಲ್ಲಿ ಆ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರಿಂದ ಕುಮಾರಸ್ವಾಮಿ ಅವರ ಅತ್ತೆ ಮತ್ತು ಭಾಮೈದನಿಗೆ ಅನುಕೂಲವಾಗಿದೆ. ಈ ಬಗ್ಗೆ ಲೋಕಾಯುಕ್ತವು ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು' ಎಂದು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ ಅವರು, 'ನನ್ನ ಸಂಬಂಧಿಗಳು ಕಾನೂನುಬದ್ಧವಾಗಿಯೇ ಜಮೀನು ಖರೀದಿಸಿದ್ದಾರೆ. ನನ್ನ ಅವಧಿಯಲ್ಲಿ ಡಿನೋಟಿಫಿಕೇಷನ್ ಆಗಿದೆಯೇ? ನಾನು ಡಿನೋಟಿಫಿಕೇಷನ್ ಮಾಡಿದ್ದೇನೆಯೇ' ಎಂದು ಪ್ರಶ್ನಿಸಿದ್ದರು.
ಮಾಡಿದ್ದು ನಾನೇ ಎಂದ ಯಡಿಯೂರಪ್ಪ
'ಡಿನೋಟಿಫಿಕೇಷನ್ ಮಾಡಿದ್ದು ನಾನೇ. ಎಚ್.ಡಿ.ಕುಮಾರಸ್ವಾಮಿ ಅಥವಾ ಯಾರದೇ ಒತ್ತಡಕ್ಕೆ ಮಣಿದು ಅದನ್ನು ಮಾಡಿಲ್ಲ ಎಂದು ಯಡಿಯೂರಪ್ಪ ಅವರು ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ' ಎಂದು ಮೂಲಗಳು ತಿಳಿಸಿವೆ. 'ಅದು ರೈತರ ಜಮೀನಾಗಿತ್ತು. ಭೂಸ್ವಾಧೀನದಿಂದ ಕೈಬಿಡುವಂತೆ ನನ್ನ ಮುಂದೆ ಅರ್ಜಿ ಬಂದಿತ್ತು. ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಡಿನೋಟಿಫಿಕೇಷನ್ ಮಾಡುವಂತೆ ಆದೇಶ ಬರೆದೆ. ಇದರಲ್ಲಿ ನನಗೆ ಯಾವುದೇ ಹಿತಾಸಕ್ತಿ ಇರಲಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ' ಎಂದು ತಿಳಿಸಿವೆ.
ಗಂಗೇನಹಳ್ಳಿ ಪ್ರಕರಣವೇನು?
ಮಠದಹಳ್ಳಿ ವಿಸ್ತರಿತ ಬಡಾವಣೆಯಲ್ಲಿ ವಸತಿ ಸಮುಚ್ಚಯ ನಿರ್ಮಿಸಲು ಗಂಗೇನಹಳ್ಳಿಯಲ್ಲಿ 1976ರಲ್ಲಿ ಭೂಸ್ವಾಧೀನಕ್ಕೆ ಪ್ರಾಥಮಿಕ 1977ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಈ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಂತೆ ರಾಜಶೇಖರಯ್ಯ ಎಂಬುವವರು 2007ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದರು. ಡಿನೋಟಿಫಿಕೇಷನ್ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ 2010ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಡಿನೋಟಿಫಿಕೇಷನ್ ಮಾಡಿದ್ದರು.
ಈ ಸಂಬಂಧ 2015ರಲ್ಲಿ ಜಯಕುಮಾರ್ ಹಿರೇಮಠ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. 'ಡಿನೋಟಿಫಿಕೇಷನ್ ಆಗುವ ಮುನ್ನವೇ ಕುಮಾರಸ್ವಾಮಿ ಅವರ ಅತ್ತೆ ವಿಮಲಾ (ಪತ್ನಿಯ ಅಮ್ಮ) ಜಮೀನನ್ನು ಜಿಪಿಎ ಮಾಡಿಸಿಕೊಂಡಿದ್ದರು. ಅಧಿಕಾರಿಗಳು ಬೇಡವೆಂದರೂ ಯಡಿಯೂರಪ್ಪ ಡಿನೋಟಿಫಿಕೇಷನ್ ಮಾಡಿದ್ದಾರೆ. ಅನಂತರ ಕುಮಾರಸ್ವಾಮಿ ಅವರ ಅತ್ತೆ ತಮ್ಮ ಮಗ ಚನ್ನಪ್ಪ ಅವರಿಗೆ (ಅನಿತಾ ಕುಮಾರಸ್ವಾಮಿ ಅವರ ಸೋದರ) ಜಮೀನು ಮಾರಿದ್ದಾರೆ' ಎಂದು ಆರೋಪಿಸಿದ್ದರು. ಈ ದೂರಿನ ಆಧಾರದಲ್ಲಿ ದಾಖಲಾದ ಎಫ್‌ಐಆರ್ ರದ್ದುಪಡಿಸುವಂತೆ ಯಡಿಯೂರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ 'ಮೇಲ್ನೋಟಕ್ಕೆ ಅಕ್ರಮ ನಡೆದಂತೆ ಕಾಣುತ್ತದೆ. ಈ ಬಗ್ಗೆ ತನಿಖೆಯಾಗುವುದು ಸೂಕ್ತ' ಎಂದು ಹೇಳಿತ್ತು. ಯಡಿಯೂರಪ್ಪಗೆ ₹25000 ದಂಡವನ್ನೂ ವಿಧಿಸಿತ್ತು.