ಜಾತಿ ನಿಂದನೆ ಪ್ರಕರಣ | ಆಡಿಯೋ ಕ್ಲಿಪ್ ಧ್ವನಿ ದೃಢ: ಮುನಿರತ್ನಗೆ ಸಂಕಷ್ಟ
ಗುತ್ತಿಗೆದಾರನ ವಿರುದ್ಧ ಜಾತಿನಿಂದನೆ ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರದ್ದು ಎನ್ನಲಾದ ಟೆಲಿಫೋನ್ ಸಂಭಾಷಣೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಇದೀಗ ವರದಿ ಬಂದಿದ್ದು, ಆಡಿಯೋದಲ್ಲಿರುವ ಧ್ವನಿ ಮುನಿರತ್ನ ಅವರದ್ದೇ ಎಂಬುದು ದೃಢಪಟ್ಟಿದೆ.

ಚೆಲುವರಾಜು ಎಂಬುವರ ಜೊತೆಗೆ ಮಾತನಾಡುವಾಗ ಶಾಸಕ ಮುನಿರತ್ನ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರ ವೇಲು ನಾಯ್ಕರ್ ಅವರು ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಬಳಿಕ ಮುನಿರತ್ನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಯಿತು. ಮುನಿರತ್ನ ಅವರ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪದ ಅಡಿ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಎರಡೂ ಪ್ರಕರಣದ ತನಿಖೆಯನ್ನು ಸದ್ಯ ಎಸ್‌ಐಟಿ ನಡೆಸುತ್ತಿದ್ದು, ದೂರುದಾರರು ನೀಡಿದ ಅಡಿಯೊ ಕ್ಲಿಪ್ ಅನ್ನು ಎಸ್‌ಐಟಿ ಪೊಲೀಸರು, ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದ್ದರು. ಇದೀಗ ಅದರ ವರದಿ ಬಂದಿದ್ದು, ಆಡಿಯೊದಲ್ಲಿ ಇರುವುದು ಮುನಿರತ್ನ ಅವರದ್ದೇ ಧ್ವನಿ' ಎಂದು ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ಮುನಿರತ್ನ ಅವರ ವಿಚಾರಣೆ ನಡೆಸುತ್ತಿದ್ದ ವೇಳೆ ಎಫ್‌ಎಸ್ಎಲ್ ತಜ್ಞರು ಮುನಿರತ್ನ ಅವರ ಧ್ವನಿ ಮಾದರಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ಆಡಿಯೋದ ಮೂಲ ತುಣುಕು, ದೂರುದಾರರ ಧ್ವನಿಯನ್ನು ಸಂಗ್ರಹಿಸಿ , ಎಫ್‌ಎಸ್‌ಎಲ್‌ಗೆ ರವಾನಿಸಲಾಗಿತ್ತು. ಇದೀಗ ಈ ವರದಿ ಎಸ್‌ಐಟಿ ಕೈ ಸೇರಿದೆ ಎಂದು ಮೂಲಗಳು ತಿಳಿಸಿವೆ.
ಜಾತಿನಿಂದನೆ ಪ್ರಕರಣದಲ್ಲಿ ಜೈಲು ಸೇರಿದ್ದ ಮುನಿರತ್ನ ಜಾಮೀನು ಮೂಲಕ ಹೊರಬಂದಿದ್ದರು. ಆ ಬಳಿಕ ರಾಮನಗರದ ಕಗ್ಗಲೀಪುರ ಠಾಣೆಯಲ್ಲಿ ದಾಖಲಾಗಿದ್ದ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು. ಸದ್ಯ ಈ ಪ್ರಕರಣದಲ್ಲೂ ಅವರಿಗೆ ಜಾಮೀನು ಲಭ್ಯವಾಗಿದೆ.