ಷೆಂಗೆನ್ ವೀಸಾ ಬಳಕೆ| ಹಂಗರಿ ದೇಶದಲ್ಲಿ ಪ್ರಜ್ವಲ್ ಸುಳಿವು? ವಿಡಿಯೋ ಬಿಡುಗಡೆಯ ಮೊಬೈಲ್ ಐಪಿ ಪತ್ತೆ
ಪ್ರಕರಣ ಬೆಳಕಿಗೆ ಬಂದ ನಂತರ ಪ್ರಜ್ವಲ್ ವಿದೇಶಕ್ಕೆ ತೆರಳಿದಾಗ ಜರ್ಮನಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿತ್ತು. ಷೆಂಗೆನ್ ವೀಸಾ ಹೊಂದಿರುವ ಪ್ರಜ್ವಲ್, ಬಳಿಕ ಇಂಗ್ಲೆಂಡ್ ಸೇರಿದಂತೆ ಇತರೆಡೆ ರೈಲು ಪ್ರಯಾಣವನ್ನೂ ಮಾಡಿರುವ ಬಗ್ಗೆಯೂ ಮಾಹಿತಿಯಿದೆ. ಆದರೆ ಇದೀಗ ಬರೋಬ್ಬರಿ ಒಂದು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರಿಂದ ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿ ಬಯಲಾಗಿದೆ;
ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾದ ಪ್ರಕರಣದ ಪ್ರಮುಖ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸಾಗುವ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು ಎಲ್ಲಿಂದ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬೆಂಗಳೂರಿಗೆ ಬರುವುದಾಗಿ ಸೋಮವಾರವಷ್ಟೇ ಪ್ರಜ್ವಲ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಪ್ರಜ್ವಲ್ ವಿಡಿಯೋ ಮಾಡಿರುವ ಸ್ಥಳವನ್ನು ಇದೀಗ ಎಸ್ಐಟಿ ಪತ್ತೆ ಮಾಡಿದೆ.
ಪ್ರಜ್ವಲ್ ರೇವಣ್ಣ ಬಿಡುಗಡೆ ಮಾಡಿರುವ ವಿಡಿಯೋವನ್ನು ಎರಡು ದಿನಗಳ ಹಿಂದೆ ರೆಕಾರ್ಡ್ ಮಾಡಿ, ಅದನ್ನು ಯೂರೋಪ್‌ನ ಹಂಗರಿ ದೇಶದ ರಾಜಧಾನಿ ಬುಡಾಪೆಸ್ಟ್‌ನಿಂದ ಬಿಡುಗಡೆ ಮಾಡಿದ್ದಾರೆ. ವಿಡಿಯೋ ರಿಲೀಸ್ ಆದ ಮೊಬೈಲ್ ಐಪಿ ಅಡ್ರೆಸ್ ಟ್ರೇಸ್ ಮಾಡುವ ಮೂಲಕ ಎಸ್ಐಟಿಯ ಟೆಕ್ನಿಕಲ್ ಟೀಮ್ ಮಾಹಿತಿ ಕಲೆ ಹಾಕಿದೆ.
ಶುಕ್ರವಾರ ದೇಶಕ್ಕೆ ಬರುವುದಾಗಿ ಹೇಳಿರುವ ಪ್ರಜ್ವಲ್ ನನ್ನು ಅಂದು ವಿಮಾನ ನಿಲ್ದಾಣದಲ್ಲಿಯೇ ಬಂಧಿಸಲು ಎಸ್ಐಟಿ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ನಂತರ ಪ್ರಜ್ವಲ್ ವಿದೇಶಕ್ಕೆ ತೆರಳಿದಾಗ ಜರ್ಮನಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿತ್ತು. ಷೆಂಗೆನ್ ವೀಸಾ ಹೊಂದಿರುವ ಪ್ರಜ್ವಲ್, ಬಳಿಕ ಇಂಗ್ಲೆಂಡ್ ಸೇರಿದಂತೆ ಇತರೆಡೆ ರೈಲು ಪ್ರಯಾಣವನ್ನೂ ಮಾಡಿರುವ ಬಗ್ಗೆಯೂ ಮಾಹಿತಿಯಿದೆ. ಆದರೆ ಇದೀಗ ಬರೋಬ್ಬರಿ ಒಂದು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರಿಂದ ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿ ಬಯಲಾಗಿದೆ. ಪ್ರಜ್ವಲ್ ಷೆಂಗೆನ್ ವೀಸಾ (ಯುರೋಪ್ ಖಂಡದ ಸುಮಾರು ೨೬ ದೇಶಗಳಿಗೆ ತೆರಳುವ ವೀಸಾ) ಬಳಸಿರುವುದು ಇದರಿಂದ ಸಾಬೀತಾಗಿದೆ.
ಮೇ 31ರಂದು ಬೆಳಗ್ಗೆ 10.30ಕ್ಕೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ವಿಡಿಯೋ ಹೇಳಿಕೆಯಲ್ಲಿ ಪ್ರಜ್ವಲ್ ಹೇಳಿದ್ದರು. ಅಲ್ಲದೆ, ತಂದೆ- ತಾಯಿ, ತಾತನ ಕ್ಷಮೆಯಾಚಿಸಿದ್ದರು. ಅಲ್ಲದೇ ಜನರು, ಪಕ್ಷದ ಕಾರ್ಯಕರ್ತರ ಬಳಿಯೂ ಕ್ಷಮೆ ಕೋರಿದ್ದರು. ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು ಎಂದೂ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದರು.
ನಾಳೆ ಹಾಸನದಲ್ಲಿ ಬೃಹತ್ ಪ್ರತಿಭಟನೆ
ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ನಾಳೆ ಹಾಸನದಲ್ಲಿ ಜನಪರ ಸಂಘಟನೆಗಳು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಮಹಿಳಾ, ದಲಿತ, ಕಾರ್ಮಿಕ, ರೈತ, ವಿದ್ಯಾರ್ಥಿ, ಯುವಜನರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ಲಿಂಗತ್ವ ಅಲ್ಪಸಂಖ್ಯಾತರ, ಆದಿವಾಸಿಗಳ ಮತ್ತು ಇನ್ನಿತರ ಹಲವು ಸಂಘಟನೆಗಳ ಪ್ರತಿನಿಧಿಗಳು, ಹಾಗೆಯೇ ರಾಜ್ಯದ ಮತ್ತು ದೇಶದ ಕೆಲವೆಡೆಗಳಿಂದ ಚಿಂತಕರು, ಬರಹಗಾರರು, ಬುದ್ಧಿಜೀವಿಗಳು, ಕಲಾವಿದರು, ನಿವೃತ್ತ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಸೇರಿದಂತೆ ಸುಮಾರು 10,000ಕ್ಕಿಂತ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ. ಇಂದು(ಬುಧವಾರ) ಹಾಸನದ ಹೇಮಾವತಿ ಪ್ರತಿಮೆ ಬಳಿ ಪ್ರಚಾರ ಜಾಥಾ ನಡೆಯಲಿದೆ. ನಾಳೆ ನಡೆಯುವ ಪ್ರತಿಭಟನೆಗೆ ಸಹಕಾರ ಕೋರಿ ಜಾಥಾ ನಡೆಯಲಿದೆ. 113 ಸಂಘಟನೆಗಳಿಂದ ನಾಳಿನ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ.