ಮಳೆಯಿಂದ ರಕ್ಷಣೆಗಾಗಿ ದೇವಸ್ಥಾನದ ಆಶ್ರಯ ಪಡೆದ ನಾಲ್ಕು ಮಂದಿ ರೈತರು ಸಿಡಿಲು ಬಡಿದು ಸಾವನ್ನಪ್ಪಿರುವ ಹಾಗೂ ಮೂವರು ಗಾಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಜಿನಕೇರಾ ತಾಂಡಾದಲ್ಲಿ ಸೋಮವಾರ ಸಂಜೆ ನಡೆದಿದೆ.
ಕಿಶನ್ ನಾಮಣ್ಣ ಜಾಧವ (33), ಚನ್ನಪ್ಪ ನಾಮಣ್ಣ ಜಾಧವ (24), ಸುನಿಬಾಯಿ ರಾಠೋಡ (30), ನೇನು ನಿಂಗಪ‍್ಪ ಜಾಧವ (18) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೂವರು ಸ್ಥಳದಲ್ಲೇ ಅಸುನೀಗಿದರೆ, ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿನಕೇರಾ ತಾಂಡದ ಬಳಿ ಹೊಲದಲ್ಲಿ ಈರುಳ್ಳಿ ಸಸಿ ನಾಟಿ ಮಾಡುತ್ತಿರುವ ವೇಳೆ ಸಿಡಿಲು ಸಹಿತ ಮಳೆ ಬಂದಾಗ, ಮಂದಿ ಹತ್ತಿರದಲ್ಲಿದ್ದ ದುರುಗಮ್ಮ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾರೆ. ಈ ವೇಳೆ ದುರ್ಘಟನೆ ನಡೆದಿದೆ. ಸಿಡಿಲು ಬಡಿದು ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಒಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ ಮೌನೇಶ ಉನ್ನಪ್ಪ, ಗಣೇಶ ಮೌನೇಶ, ದರ್ಶನ ಕಿಶನ್ ಗಾಯಗೊಂಡಿದ್ದು, ಯಾದಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.