ರಾಜ್ಯದಲ್ಲಿ 41 ಸಾವಿರ ಆರ್‌ಟಿಐ ಅರ್ಜಿ ಬಾಕಿ; ನವೆಂಬರ್‌ಗೆ ಜಿಲ್ಲಾಮಟ್ಟದಲ್ಲೇ ಅದಾಲತ್‌

ಮಾಹಿತಿ ನೀಡದ 10,699 ಸಾರ್ವಜನಿಕ ಮಾಹಿತಿಹಕ್ಕು ಅಧಿಕಾರಿಗಳಿಗೆ ಈವರೆಗೆ 10.08 ಕೋಟಿ ರೂ. ದಂಡವನ್ನು ವಿಧಿಸಿದೆ. ಈ ಪೈಕಿ 2,119 ಅಧಿಕಾರಿಗಳು 2.45 ಕೋಟಿ ರೂ. ದಂಡ ಪಾವತಿಸಿದ್ದಾರೆ ಎಂದು ಆಯುಕ್ತ ರುದ್ರಣ್ಣ ಹರ್ತಿಕೋಟೆ ತಿಳಿಸಿದರು.

Update: 2025-09-20 13:55 GMT

ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಸಭೆ ನಡೆಸಿದರು.

Click the Play button to listen to article

ಮಾಹಿತಿ ಹಕ್ಕು ಕಾಯ್ದೆಯಡಿಯ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ತ್ವರಿತವಾಗಿ ವಿಲೆವಾರಿ ಮಾಡಿ ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಜಿಲ್ಲಾ ಮಟ್ಟದಲ್ಲಿಯೇ ಅದಾಲತ್ ನಡೆಸುವ ಚಿಂತನೆಯನ್ನು ಆಯೋಗ ಹೊಂದಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ತಿಳಿಸಿದರು.

ಶನಿವಾರ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 7 ತಿಂಗಳ ಹಿಂದೆ ರಾಜ್ಯ ಮಾಹಿತಿ ಆಯೋಗದಲ್ಲಿ ಸುಮಾರು 54 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೆವಾರಿಗೆ ಬಾಕಿ ಇದ್ದವು. ಈ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಿ ಅರ್ಜಿದಾರರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಹಲವು ಕ್ರಮಗಳನ್ನು ತೆಗೆದುಕೊಂಡು 12,896 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದರು.

ಪ್ರಸ್ತುತ 41,104ಕ್ಕೆ ಮಾಹಿತಿ ಹಕ್ಕು ಅರ್ಜಿಗಳನ್ನು ಇಳಿಸಲಾಗಿದೆ. ಈ 41,104 ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವ ಉದ್ದೇಶದಿಂದ ಮಾಹಿತಿ ಆಯುಕ್ತರೇ ಜಿಲ್ಲಾ ಮಟ್ಟಕ್ಕೆ ಆಗಮಿಸಿ ಅದಾಲತ್ ಏರ್ಪಡಿಸಿ ಸ್ಥಳದಲ್ಲೇ ಅರ್ಜಿದಾರರಿಗೆ ಮಾಹಿತಿ ತಲುಪಿಸುವ ಕಾರ್ಯ ಮುಂದಿನ ಕನ್ನಡ ರಾಜ್ಯೋತ್ಸವದ ವೇಳೆಗೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಸ್ತುತ ರಾಜ್ಯದಲ್ಲಿ ಪ್ರತಿ ತಿಂಗಳು ಸರಾಸರಿ 1,500 ಮಾಹಿತಿ ಹಕ್ಕು ಅರ್ಜಿಗಳು ಆಯೋಗಕ್ಕೆ ಸ್ವೀಕಾರವಾಗುತ್ತಿವೆ. ಈ ಅರ್ಜಿಗಳನ್ನು ಇತ್ಯರ್ಥ ಪಡಿಸುವ ಜೊತೆ ಜೊತೆಗೆ ಪ್ರಸ್ತುತ ಬಾಕಿ ಇರುವ 41,104 ಅರ್ಜಿಗಳನ್ನು ವಿಲೇವಾರಿ ಮಾಡಿ ಶೂನ್ಯಕ್ಕಿಳಿಸುವ ಮೂಲಕ ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ತರಲು ಆಯೋಗ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ 2005ರಲ್ಲಿ ಮಾಹಿತಿ ಹಕ್ಕು ಕಾಯ್ದೆಯು ಜಾರಿಗೆ ಬಂದಿರುವುದು ಭ್ರಷ್ಟಾಚಾರ ನಿವಾರಣೆಗೆ ಹೆಚ್ಚು ಸಹಕಾರಿಯಾಗಿದೆ ಎಂದರು.

10 ಕೋಟಿ ರೂ. ದಂಡ

ರಾಜ್ಯದಲ್ಲಿ ಸರಿಯಾಗಿ ಮಾಹಿತಿ ನೀಡದ 10,699 ಸಾರ್ವಜನಿಕ ಮಾಹಿತಿಹಕ್ಕು ಅಧಿಕಾರಿಗಳಿಗೆ ಈವರೆಗೆ 10,08,46,450 ರೂ. ದಂಡವನ್ನು ಆಯೋಗ ವಿಧಿಸಿದೆ. ಈ ಪೈಕಿ 2,119 ಅಧಿಕಾರಿಗಳು 2.45 ಕೋಟಿ ರೂ. ದಂಡ ಪಾವತಿಸಿದ್ದು, ಉಳಿದ ಅಧಿಕಾರಿಗಳು ದಂಡ ಪಾವತಿ ಮಾಡುವಂತೆ ಸೂಚಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದರು.

772 ಅರ್ಜಿ ಬಾಕಿ

ಮಾಹಿತಿ ಆಯುಕ್ತ ಎಸ್‌. ರಾಜಶೇಖರ ಮಾತನಾಡಿ, ಜಿಲ್ಲೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳ ವಿಲೆವಾರಿ ಉತ್ತಮವಾಗಿದೆ. ಕಳೆದ ಏಪ್ರಿಲ್‌ನಿಂದ ಇಲ್ಲಿಯವರೆಗೆ 10,777 ಮಾಹಿತಿ ಹಕ್ಕು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 9,837 ರಷ್ಟು ಅರ್ಜಿಗಳು ವಿಲೆವಾರಿಯಾಗಿ 772 ಅರ್ಜಿಗಳು ಮಾತ್ರ ಬಾಕಿ ಇವೆ. ಜಿಲ್ಲೆಯಲ್ಲಿ ಸ್ವೀಕಾರಗೊಂಡಿರುವ ಮಾಹಿತಿ ಅರ್ಜಿಗಳ ಪೈಕಿ ಪಂಚಾಯತ್ ರಾಜ್  368, ಕಂದಾಯ 212, ಸಮಾಜ ಕಲ್ಯಾಣ ಇಲಾಖೆ 33, ನಗರಾಭಿವೃದ್ಧಿ  31, ಜಲ ಸಂಪನ್ಮೂಲ  21, ಕೃಷಿ  19, ಅರಣ್ಯ 18 ಹಾಗೂ ಲೋಕೋಪಯೋಗಿ ಇಲಾಖೆಯಡಿ 17 ಅರ್ಜಿಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದರು.

ಚಿಕ್ಕಬಳ್ಳಾಪುರದಲ್ಲಿ 28,7 ಲಕ್ಷ ದಂಡ

ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಬೇಕಾದ ಮಾಹಿತಿಗಳನ್ನು ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದ್ದು. ಸಾರ್ವಜನಿಕರು ಕೇಳಿದ ಸಾರ್ವಜನಿಕ ಹಿತಾಸಕ್ತಿಯುಳ್ಳ ಮಾಹಿತಿಯನ್ನು ನೀಡಲು ಅಧಿಕಾರಿಗಳು ನಿರಾಕರಿಸಿದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ ಆಯೋಗ ದಂಡ ವಿಧಿಸಲಿದೆ. ಜಿಲ್ಲೆಯಲ್ಲಿ ಸರಿಯಾಗಿ ಮಾಹಿತಿ ನೀಡದ 287 ಅಧಿಕಾರಿಗಳಿಗೆ 28,70,000 ರೂ. ದಂಡ ವಿಧಿಸಲಾಗಿದ್ದು, ಈ ಪೈಕಿ 69 ಅಧಿಕಾರಿಗಳು 6,90,000 ರೂ. ದಂಡ ಪಾವತಿಸಿದ್ದಾರೆ ಎಂದರು.

Tags:    

Similar News