ಜಾತಿ ಗಣತಿ: ಧರ್ಮ ಹಿಂದೂ, ಜಾತಿ ಒಕ್ಕಲಿಗ ಎಂದು ನಮೂದಿಸಲು ಒಕ್ಕಲಿಗ ಸಮುದಾಯದ ನಿರ್ಣಯ
ಉಪಜಾತಿ ಬೇಕಾದರೆ ಕುಂಚಿಟಿಗ, ಮರಸು, ಸರ್ಪ, ಹಳ್ಳಿಕಾರ್ ಒಕ್ಕಲಿಗ ಎಂದು ನಮೂದಿಸಬಹುದು. ಆದರೆ ಜಾತಿ ಕಾಲಂನಲ್ಲಿ ಕೇವಲ ಒಕ್ಕಲಿಗ ಎಂದೇ ಬರೆಯಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.
ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ನೇತೃದಲ್ಲಿ ಸಭೆ ನಡೆಯಿತು.
ರಾಜ್ಯದಲ್ಲಿ ನಡೆಯಲಿರುವ ಜಾತಿ ಗಣತಿ ಹಿನ್ನೆಲೆಯಲ್ಲಿ, ಒಕ್ಕಲಿಗ ಸಮುದಾಯದ ನಾಯಕರು ಮತ್ತು ಮಠಾಧೀಶರು ಶನಿವಾರ ಬೆಂಗಳೂರಿನ ಆದಿಚುಂಚನಗಿರಿ ಮಠದಲ್ಲಿ ಮಹತ್ವದ ಸಭೆ ನಡೆಸಿ, ಗಣತಿಯಲ್ಲಿ ಸಮುದಾಯದ ಮಾಹಿತಿಯನ್ನು ದಾಖಲಿಸುವ ಕುರಿತು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ನಾಯಕರು ಭಾಗವಹಿಸಿದ್ದರು.
ಸಭೆಯ ಪ್ರಮುಖ ತೀರ್ಮಾನವನ್ನು ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಪ್ರಕಟಿಸಿದರು. "ಜಾತಿ ಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಮತ್ತು ಜಾತಿಯ ಕಾಲಂನಲ್ಲಿ ಒಕ್ಕಲಿಗ ಎಂದು ಸ್ಪಷ್ಟವಾಗಿ ಬರೆಸಬೇಕು. ಉಪಜಾತಿಗಳನ್ನು ನಮೂದಿಸಬೇಕಾದಲ್ಲಿ ಕುಂಚಿಟಿಗ, ಮರಸು, ಸರ್ಪ, ಹಳ್ಳಿಕಾರ್ ಒಕ್ಕಲಿಗ ಎಂದು ಪ್ರತ್ಯೇಕವಾಗಿ ನಮೂದಿಸಬಹುದೇ ವಿನಃ, ಮುಖ್ಯ ಜಾತಿಯ ಕಾಲಂನಲ್ಲಿ ಕೇವಲ ‘ಒಕ್ಕಲಿಗ’ ಎಂದೇ ಬರೆಯಬೇಕು" ಎಂದು ನಿರ್ಣಯಿಸಲಾಯಿತು.
ಈ ನಿರ್ಣಯಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸೇರಿದಂತೆ ಸಭೆಯಲ್ಲಿದ್ದ ಎಲ್ಲಾ ನಾಯಕರು ಅನುಮೋದನೆ ನೀಡಿದರು.
ಸಭೆಯಲ್ಲಿ ವ್ಯಕ್ತವಾದ ಪ್ರಮುಖ ಅಭಿಪ್ರಾಯಗಳು
ಸಭೆಯಲ್ಲಿ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು, "ಕೇವಲ 15 ದಿನಗಳಲ್ಲಿ ಸಮೀಕ್ಷೆ ನಡೆಸುವುದು ಅವೈಜ್ಞಾನಿಕ. ಈ ಅವಧಿಯಲ್ಲಿ ನವರಾತ್ರಿ ಹಬ್ಬ, ರಜೆಗಳಿರುವುದರಿಂದ ಅನೇಕರು ಪ್ರವಾಸದಲ್ಲಿರುತ್ತಾರೆ. ಅರ್ಥಪೂರ್ಣ ಸಮೀಕ್ಷೆ ನಡೆಸಲು ಸರ್ಕಾರ ಹೆಚ್ಚಿನ ಸಮಯ ನೀಡಬೇಕು. 'ಒಕ್ಕಲಿಗ ಕ್ರಿಶ್ಚಿಯನ್', 'ಒಕ್ಕಲಿಗ ಬ್ರಾಹ್ಮಣ' ಎಂದು ಸೇರಿಸಿರುವುದು ಸರಿಯಲ್ಲ. ಎಲ್ಲಾ ಸಮುದಾಯದವರು ಜಾತಿ ಕೋಡ್ '1541' ಅನ್ನು ನಮೂದಿಸಬೇಕು," ಎಂದು ಸಲಹೆ ನೀಡಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, "ಕೇಂದ್ರ ಸರ್ಕಾರವೇ ಜಾತಿ ಗಣತಿ ನಡೆಸುತ್ತಿರುವಾಗ, ರಾಜ್ಯದಲ್ಲಿ ಪ್ರತ್ಯೇಕವಾಗಿ ಗಣತಿ ನಡೆಸುವ ಅವಶ್ಯಕತೆ ಏನಿದೆ? ಆದರೂ, ನಾವೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಈ ಹಿಂದೆ ಕಾಂತರಾಜ ಆಯೋಗದ ವರದಿಯನ್ನು ಮೂಲೆಗುಂಪು ಮಾಡಲಾಗಿತ್ತು," ಎಂದರು. ಇದೇ ವೇಳೆ, ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದನ್ನು ಸ್ವಾಗತಿಸುವುದಾಗಿ ಕುಮಾರಸ್ವಾಮಿ ಹೇಳಿದಾಗ, ಸಭೆಯಲ್ಲಿದ್ದ ಎಲ್ಲಾ ನಾಯಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು.
ಕುಂಚಿಟಿಗ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗಳು, "60 ಪ್ರಶ್ನೆಗಳಿಗೆ 15 ದಿನಗಳಲ್ಲಿ ಉತ್ತರ ನೀಡುವುದು ಕಷ್ಟ. ಸಮೀಕ್ಷೆಯನ್ನು ಮುಂದೂಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ," ಎಂದರು.
ಪ್ರತಿಪಕ್ಷ ನಾಯಕ ಆರ್. ಅಶೋಕ್, "ಸಮೀಕ್ಷೆಯಿಂದ ದೊಡ್ಡ ಸಮುದಾಯ ಯಾವುದು, ಸಣ್ಣ ಸಮುದಾಯ ಯಾವುದು ಎಂಬುದು ತಿಳಿಯುತ್ತದೆ. ಸಮೀಕ್ಷೆ ತಪ್ಪಾದರೆ ನಮ್ಮ ಭವಿಷ್ಯ ಹಾಳಾಗುತ್ತದೆ. ಮೊದಲಿನಿಂದಲೂ ಒಕ್ಕಲಿಗರಿಗೆ ಎರಡನೇ ಸ್ಥಾನವಿತ್ತು, ಅದನ್ನು ಕಾಪಾಡಿಕೊಳ್ಳಬೇಕು," ಎಂದು ಸಮುದಾಯದ ಒಗ್ಗಟ್ಟಿನ ಮಹತ್ವವನ್ನು ಒತ್ತಿ ಹೇಳಿದರು.
ಕೃಷಿ ಸಚಿವ ಚಲುವರಾಯಸ್ವಾಮಿ, "ಚುನಾವಣಾ ರಾಜಕೀಯ ಬೇರೆ, ಆದರೆ ಸಮಾಜದ ವಿಚಾರದಲ್ಲಿ ಸ್ವಾಮೀಜಿಗಳ ತೀರ್ಮಾನವೇ ಅಂತಿಮ. ಅವರ ಸೂಚನೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು," ಎಂದರು.
ಪಟ್ಟನಾಯಕನಹಳ್ಳಿ ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, "ಕಾಂತರಾಜು ವರದಿ ಸ್ವೀಕರಿಸಿದ್ದರೆ ನಮ್ಮ ಸಮುದಾಯದ ಸಂಖ್ಯೆ ಕಡಿಮೆಯಾಗುತ್ತಿತ್ತು. ವೀರಶೈವ-ಲಿಂಗಾಯತರಿಗೆ ಆದ ಪರಿಸ್ಥಿತಿ ನಮಗೆ ಬರಬಾರದು. ನವರಾತ್ರಿ, ಪಿತೃಪಕ್ಷ ಇರುವುದರಿಂದ ಸಮೀಕ್ಷೆಯನ್ನು ಮುಂದೂಡಬೇಕು," ಎಂದು ಒತ್ತಾಯಿಸಿದರು.
ಸಭೆಯ ಪ್ರಮುಖ ನಿರ್ಣಯಗಳು
* ಜಾತಿ ಕಾಲಂನಲ್ಲಿ ಕೇವಲ ‘ಒಕ್ಕಲಿಗ’ ಎಂದೇ ಬರೆಸಬೇಕು.
* ಉಪಜಾತಿಗಳನ್ನು ಪ್ರತ್ಯೇಕವಾಗಿ ನಮೂದಿಸಬಹುದು.
* ಸಮೀಕ್ಷೆಯನ್ನು ಮುಂದೂಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
* ಸಮುದಾಯದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿರಬೇಕು.