ಉದ್ಯಾನದಲ್ಲಿ ಸ್ನೇಹಿತೆ ಜೊತೆಗಿದ್ದ ವಿಡಿಯೊ ವೈರಲ್; ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

ಸ್ನೇಹಿತೆಯ ಜೊತೆಗಿದ್ದ ವಿಡಿಯೊ ವೈರಲ್‌ ಆಗಿದ್ದರಿಂದ ಮನನೊಂದ ಪವನ್ ಎಂಬ ವಿದ್ಯಾರ್ಥಿ ಶುಕ್ರವಾರ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಘಟನೆಯ ಬಗ್ಗೆ ಕುಟುಂಬ ಸದಸ್ಯರು ಗೊರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

Update: 2025-09-20 07:15 GMT

ಸಾಂದರ್ಭಿಕ ಚಿತ್ರ

Click the Play button to listen to article

ಸ್ನೇಹಿತೆಯ ಜೊತೆಗಿದ್ದ ವಿಡಿಯೊ ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದರಿಂದ ಮನನೊಂದು, ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. 

ಹಾಸನದ ಕಲ್ಲಹಳ್ಳಿ ಗ್ರಾಮದ 21 ವರ್ಷದ ಪವನ್ ಕೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮೊಸಳೆ ಹೊಸಳ್ಳಿ ಪದವಿ ಕಾಲೇಜಿನಲ್ಲಿ ಬಿ.ಎ.ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಈತ  ಸೆ.17ರಂದು ತನ್ನ ಸ್ನೇಹಿತರ ಜೊತೆ ಹಾಸನದ ಉದ್ಯಾನಕ್ಕೆ ಹೋಗಿದ್ದ. ಅಲ್ಲಿ ಆತನ ಸ್ನೇಹಿತೆಯ ಕೈ ಹಿಡಿದು ಮಾತನಾಡುವ ವಿಡಿಯೊವನ್ನು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು ಎನ್ನಲಾಗಿದೆ. 

‘ಹಾಯ್ ಫ್ರೆಂಡ್ಸ್, ಮಕ್ಕಳು ಆಟವಾಡುವ ಜಾಗದಲ್ಲಿ ಇವರು ಇಂತಹ ಕರ್ಮಕಾಂಡ ಮಾಡುತ್ತಿದ್ದಾರಲ್ಲ, ಒಂದು ಹೆಣ್ಣು -ಗಂಡು ಹೇಗಿರಬೇಕು ಎನ್ನುವುದು ಗೊತ್ತಿಲ್ಲವೇ?, ಸಾರ್ವಜನಿಕ ಸ್ಥಳದಲ್ಲಿ ಹೀಗೆ ಮಾಡೋರಿಗೆ ಏನು ಮಾಡಬೇಕು?, ಅಪ್ಪ-ಅಮ್ಮ ಏಕೆ ಇವರನ್ನು ಓದಲು ಕಳುಹಿಸುತ್ತಾರೆ? ಎಂದು ಪ್ರಶ್ನಿಸಿದ ಸಂದೇಶದೊಂದಿಗೆ ವಿಡಿಯೊವನ್ನು chinnivasi8 ಎನ್ನುವ ಇನ್‌ಸ್ಟಾಗ್ರಾಂ ಪೇಜ್‌ನಿಂದ ಅಪ್‌ಲೋಡ್‌ ಮಾಡಲಾಗಿತ್ತು. ಈ ವಿಡಿಯೊ ಸಾಕಷ್ಟು ವೈರಲ್‌ ಆಗಿತ್ತು. ಕೂಡಲೇ ಪವನ್ ಆ ವಿಡಿಯೊ ಡಿಲೀಟ್ ಮಾಡಿಸಲು ಪ್ರಯತ್ನಿಸಿದ್ದ, ಆದರೂ ಅದು ಹೆಚ್ಚು ವೈರಲ್‌ ಆಗುತ್ತಿತ್ತು. ಇದರಿಂದ ಮನನೊಂದ ಪವನ್ ಶುಕ್ರವಾರ ಕಾಲೇಜು ಮುಗಿಸಿ ಮನೆಗೆ ಬಂದವನೇ ನೇಣಿಗೆ ಶರಣಾಗಿದ್ದಾನೆ.

ಘಟನೆ ಬಗ್ಗೆ ಕುಟುಂಬದ ಸದಸ್ಯರು ಗೊರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು,  ಇನ್‌ಸ್ಟಾಗ್ರಾಂ ಪೇಜ್‌ ಮಾಲೀಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

.. (ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ: 1ಲೈಫ್‌: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

Tags:    

Similar News