ಪ್ರತಿಭಟನಾ ನಿರತ ಬಿಜೆಪಿ ಮುಖಂಡ ಬಾನುಪ್ರಕಾಶ್ ಹೃದಯಾಘಾತ ನಿಧನ
ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ನಾಯಕ ಎಂ. ಬಿ. ಭಾನುಪ್ರಕಾಶ್ ಅವರು ಸೋಮವಾರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.;
ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ನಾಯಕ ಎಂ. ಬಿ. ಭಾನುಪ್ರಕಾಶ್ ಅವರು ಸೋಮವಾರ ( ಜೂನ್ 17) ಪೆಟ್ರೋಲ್ ದರ ಏರಿಕೆ ಸಂಬಂಧ ಸರ್ಕಾರದ ವಿರುದ್ಧ ಪ್ರತಿಭಟನಾ ನಿರತರಾಗಿದ್ದಾಗಲೇ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಇಂದು ಬೆಳಿಗ್ಗೆ 11-15 ರ ವೇಳೆಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಶಿವಮೊಗ್ಗದ ಗೋಪಿ ವೃತ್ತದ ಬಳಿ ಪೆಟ್ರೋಲ್ ಡೀಸೇಲ್ ದರ ಏರಿಕೆ ವಿರೋಧಿಸಿ ಸೋಮವಾರ (ಜೂನ್ 17) ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕರು ಸರ್ಕಾರದ ವಿರುದ್ಧ ಪ್ರತಿಭಟನಾ ಭಾಷಣವನ್ನೂ ಮಾಡಿದ್ದರು. ಪ್ರತಿಭಟನೆ ನಡೆಸುವಾಗಲೇ ಎಂ. ಬಿ. ಭಾನುಪ್ರಕಾಶ್ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಭಾನುಪ್ರಕಾಶ್ ವಿಧಿವಶರಾಗಿದ್ದಾರೆ.
ರಾಷ್ಟೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿದ್ದ ಎಂ. ಬಿ. ಭಾನುಪ್ರಕಾಶ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಬಿಜೆಪಿ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿಯೂ ನೇಮಕ ಮಾಡಿತ್ತು.
ಎಂ. ಬಿ. ಭಾನುಪ್ರಕಾಶ್ ನಿಧನಕ್ಕೆ ಹಲವಾರು ನಾಯಕರು ಸಂತಾಪ ಸೂಚಿಸಿದ್ದಾರೆ. ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, 'ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರು, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರು, ರಾಜ್ಯ ಪ್ರಕೋಷ್ಠಗಳ ಸಂಯೋಜಕರಾಗಿ ಪಕ್ಷವನ್ನು ಶಿಸ್ತು ಬದ್ಧವಾಗಿ ಸಂಘಟಿಸುವಲ್ಲಿ ಅವಿರತ ಶ್ರಮಿಸಿದ ಪ್ರಮುಖರು, ಮಾಜಿ ವಿಧಾನ ಪರಿಷತ್ ಸದಸ್ಯರು, ನನ್ನ ರಾಜಕೀಯ ಮಾರ್ಗದರ್ಶಕರಾಗಿ ಸಲಹೆ ನೀಡಿ ಹರಸಿದ ಶ್ರೀ ಭಾನುಪ್ರಕಾಶ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ, ಕುಟುಂಬ ಸದಸ್ಯರಿಗೆ ದುಃಖ ಸಹಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಸಂತಾಪ ಸೂಚಿಸಿದ್ದಾರೆ.