ಸಿಎಂಗೆ ʼಫೈರ್‌ʼ ಒತ್ತಾಯ | ಕನ್ನಡ ಚಿತ್ರರಂಗಕ್ಕೂ ನ್ಯಾ. ಹೇಮಾ ಮಾದರಿ ಕಮಿಟಿ ರಚಿಸಿ

ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಸೇರಿದಂತೆ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯ ಕುರಿತು ಅಧ್ಯಯನಕ್ಕೆ ಕೇರಳದ ನ್ಯಾಯಮೂರ್ತಿ ಹೇಮಾ ಸಮಿತಿಯ ಮಾದರಿಯಲ್ಲಿ ರಾಜ್ಯಲ್ಲಿಯೂ ಸಮಿತಿ ನೇಮಕ ಮಾಡುವಂತೆ ʼಫೈರ್ʼ ಸಂಸ್ಥೆಯ ಪ್ರಮುಖರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ

Update: 2024-09-05 07:16 GMT

ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಸೇರಿದಂತೆ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯ ಕುರಿತು ಅಧ್ಯಯನಕ್ಕೆ ಕೇರಳದ ನ್ಯಾಯಮೂರ್ತಿ ಹೇಮಾ ಸಮಿತಿಯ ಮಾದರಿಯಲ್ಲಿ ರಾಜ್ಯಲ್ಲಿಯೂ ಸಮಿತಿ ನೇಮಕ ಮಾಡುವಂತೆ ಫೈರ್ (ಫಿಲಂ ಇಂಡಸ್ಟ್ರಿ ರೈಟ್ಸ್ ಅಂಡ್ ಈಕ್ವಾಲಿಟಿ (ಫೈರ್) ಸಂಸ್ಥೆಯ ಪ್ರಮುಖರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.

ಮುಖ್ಯಮಂತ್ರಿಗಳನ್ನು ಖುದ್ದು ಭೇಟಿಯಾದ ಹಿರಿಯ ಲೇಖಕಿ, ಪತ್ರಕರ್ತೆ ವಿಜಯಮ್ಮ, ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್, ನಟಿಯರಾದ ಶೃತಿ ಹರಿಹರನ್, ನೀತೂ ಅವರನ್ನೊಳಗೊಂಡ ಫೈರ್ ತಂಡ, ಕನ್ನಡ ಚಿತ್ರರಂಗದಲ್ಲಿಯೂ ಸ್ತ್ರೀ ಶೋಷಣೆ ಮುಂದುವರಿದಿದೆ. ರಂಗದಲ್ಲಿ ಮಹಿಳಾ ಸುರಕ್ಷೆ ಮತ್ತು ಘನತೆ ಖಾತರಿಪಡಿಸಲು ನ್ಯಾ. ಹೇಮಾ ಕಮಿಟಿಯ ಮಾದರಿಯಲ್ಲಿ ಕಮಿಟಿಯೊಂದನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದೆ.

ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ʼಫೈರ್ʼ ಸಂಘಟನೆ ಬುಧವಾರ ತಾನೇ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ಬರೆದಿತ್ತು. ಆ ಪತ್ರಕ್ಕೆ ನಿರ್ದೇಶಕಿ ಕವಿತಾ ಲಂಕೇಶ್, ನಟ ಚೇತನ್, ನಟಿ ಶೃತಿ ಹರಿಹರನ್ ಸೇರಿದಂತೆ 130ಕ್ಕೂ ಹೆಚ್ಚು ಮಂದಿ ಸಿನಿಮಾ ರಂಗದ ಕಲಾವಿದರು, ತಂತ್ರಜ್ಞರು ಸಹಿ ಮಾಡಿದ್ದರು.

ಕನ್ನಡ ಚಿತ್ರರಂಗದಲ್ಲಿ ಕೂಡ ನಟಿಯರು, ಕಲಾವಿದರ ಲೈಂಗಿಕ ಶೋಷಣೆ, ಕಿರುಕುಳ, ದಬ್ಬಾಳಿಕೆಯಂತಹ ಅನಿಷ್ಟಗಳು ಚಾಲ್ತಿಯಲ್ಲಿವೆ. ಮಹಿಳೆಯರಿಗೆ ಸರಿಯಾದ ಸೌಕರ್ಯ ಮತ್ತು ಸೌಲಭ್ಯಗಳೂ ಇಲ್ಲ. ಮಹಿಳಾ ಸುರಕ್ಷೆ ಮತ್ತು ಘನತೆಯನ್ನು ಖಾತರಿಪಡಿಸಲು ಸರ್ಕಾರ ಕೂಡಲೇ ಆ ಕುರಿತ ಅಧ್ಯಯನಕ್ಕೆ ಸಮಿತಿ ನೇಮಕ ಮಾಡಬೇಕು ಎಂದು ʼಫೈರ್ʼ ಒತ್ತಾಯಿಸಿದೆ.

ಏನಿದು ʼಫೈರ್ʼ ಸಂಘಟನೆ?

ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ಹಾಗೂ ಇತರ ಸಮಸ್ಯೆಗಳು ಎದುರಾದರೆ, ಅದರ ವಿರುದ್ಧ ಹೋರಾಡುವ ಒಂದು ಸಂಘಟನೆಯೇ ʼಫೈರ್‌ʼ. ಇದನ್ನು 2017ರಲ್ಲಿ ಸ್ಥಾಪನೆ ಮಾಡಲಾಗಿತ್ತು. ಕೆಲವು ವರ್ಷಗಳ ಕಾಲ ಈ ಸಮಿತಿ ಮೌನವಾಗಿತ್ತು. ಇದೀಗ ಮಲಯಾಳಂ ಚಿತ್ರರಂಗದಲ್ಲಿ ನ್ಯಾ. ಹೇಮಾ ಕಮಿಟಿ ವರದಿ ಸಂಚಲನ ಸೃಷ್ಟಿಸಿದ ಬಳಿಕ ಮತ್ತೆ ಕಾರ್ಯೋನ್ಮುಖವಾಗಿದೆ.

ನ್ಯಾ.ಹೇಮಾ ಆಯೋಗದ ವರದಿಯಲ್ಲಿ ಏನಿದೆ?

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲು 2017ರಲ್ಲಿ ಕೇರಳ ಸರ್ಕಾರ ರಚಿಸಿದ್ದ ನ್ಯಾ.ಹೇಮಾ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯಲ್ಲಿ ಮಲಯಾಳಂ ಚಿತ್ರರಂಗದ ಕರಾಳ ಮುಖವನ್ನು ಅನಾವರಣವಾಗಿದೆ. 

ಹೊಂದಾಣಿಕೆ ಮತ್ತು ರಾಜಿ ಎಂಬ ಪದಗಳು ಈ ಚಿತ್ರರಂಗದಲ್ಲಿ ಚಿರಪರಿಚಿತವಾಗಿದ್ದು, ಸಿನಿಮಾ ಅಥವಾ ಸೀರಿಯಲ್‌ ಮತ್ತಿತರ ಅಭಿನಯ ಪ್ರವೃತ್ತಿಯಲ್ಲಿಅವಕಾಶ ಪಡೆಯಲು ನಟಿಯರು ಲೈಂಗಿಕ ಬೇಡಿಕೆ ಈಡೇರಿಸಬೇಕಾದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ನ್ಯಾ. ಹೇಮಾ ಆಯೋಗ ನೀಡಿದ ವರದಿಯಲ್ಲಿ ಬಯಲಾಗಿದೆ.

ಕೇರಳ ಸಿನಿಮಾ ರಂಗದಲ್ಲಿ ನಟಿಯರು ಸೇರಿದಂತೆ ಕಲಾವಿದೆಯರು, ತಂತ್ರಜ್ಞರ ಮೇಲೆ ನಡೆಯುತ್ತಿದ್ದ ನಿರಂತರ ಲೈಂಗಿಕ ಶೋಷಣೆ ಕುರಿತ ವ್ಯಾಪಕ ದೂರುಗಳು ಮತ್ತು ನಟಿಯೊಬ್ಬರ ಮೇಲೆ ನಟ ಮತ್ತು ಆತನ ಸಹಚರರು ನಡೆಸಿದ ಭೀಕರ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಬಳಿಕ ಅಲ್ಲಿನ ಸರ್ಕಾರ, ನ್ಯಾಯಮೂರ್ತಿ ಹೇಮಾ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಿತ್ತು. ನ್ಯಾ. ಹೇಮಾ ಸಮಿತಿ ಕಳೆದ ವಾರ ಅಲ್ಲಿನ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿ, ಮಲೆಯಾಳಂ ಚಿತ್ರರಂಗದಲ್ಲಿ ನಟಿಯರು ಮತ್ತು ಮಹಿಳಾ ತಂತ್ರಜ್ಞರ ಮೇಲೆ ವ್ಯಾಪಕ ಶೋಷಣೆ ಇರುವ ಬಗ್ಗೆ ದಾಖಲೆ ಮತ್ತು ಹೇಳಿಕೆಗಳನ್ನು ಉಲ್ಲೇಖಿಸಿತ್ತು.

Tags:    

Similar News