The Federal Exclusive | ಸೋನು ನಿಗಮ್‌ಗೆ ಕ್ಷಮೆ ಇಲ್ಲ; ದಕ್ಷಿಣ ಭಾರತೀಯ ಚಿತ್ರರಂಗದಿಂದಲೂ ನಿರ್ಬಂಧ?
ಸೋನು ನಿಗಮ್ ಕ್ಷಮೆ ಕೋರಿದರೂ ಒಪ್ಪುವುದಿಲ್ಲ. ದಕ್ಷಿಣ ಭಾರತೀಯ ಚಿತ್ರರಂಗದಿಂದಲೂ ನಿಗಮ್ ಅವರನ್ನು ನಿರ್ಬಂಧಿಸಲು ಒತ್ತಡ ಹೇರಲಾಗುವುದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಹೇಳಿದ್ದಾರೆ.;
ಕನ್ನಡದ ಅಭಿಮಾನವನ್ನು ಪಹಲ್ಗಾಮ್ ದಾಳಿಗೆ ಹೋಲಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಗಾಯಕ ಸೋನು ನಿಗಮ್ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದೆ.
ಸೋನು ನಿಗಮ್ ತಮ್ಮ ಹೇಳಿಕೆಗೆ ವಿಷಾಧ ವ್ಯಕ್ತಪಡಿಸಿ ಕ್ಷಮೆ ಕೋರಿದರೂ ಅದನ್ನು ಒಪ್ಪುವುದಿಲ್ಲ. ದಕ್ಷಿಣ ಭಾರತೀಯ ಚಿತ್ರರಂಗದಿಂದಲೂ ಸೋನು ನಿಗಮ್ ಅವರನ್ನು ನಿರ್ಬಂಧಿಸಲು ಒತ್ತಡ ಹೇರಲಾಗುವುದು ಎಂದು ಹೇಳಿದ್ದಾರೆ.
ಮಂಗಳವಾರ ಸೋನು ನಿಗಮ್ ವಿವಾದ ಕುರಿತಂತೆ ʼದ ಫೆಡರಲ್ ಕರ್ನಾಟಕʼಕ್ಕೆ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿದ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ (ಎಸ್ಐಎಫ್‌ಸಿಸಿ) ಉಪಾಧ್ಯಕ್ಷರೂ ಆಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರು ಕಠಿಣ ಕ್ರಮಗಳ ಎಚ್ಚರಿಕೆ ನೀಡಿದ್ದಾರೆ.
ಸೋನು ನಿಗಮ್ ಅವರು ಕರ್ನಾಟಕಕ್ಕೆ ಮಾಡಿರುವ ಅವಮಾನದ ಬಗ್ಗೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಈ ಮಂಡಳಿ ವ್ಯಾಪ್ತಿಗೆ ಕರ್ನಾಟಕ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ಚಲನಚಿತ್ರ ವಾಣಿಜ್ಯ ಮಂಡಳಿಗಳೂ ಬರಲಿವೆ. ಈ ಎಲ್ಲಾ ರಾಜ್ಯಗಳಲ್ಲಿ ಸೋನು ನಿಗಮ್ ಅವರ ಹಾಡುಗಳಿಗೆ ಅವಕಾಶ ನೀಡದಂತೆ ಎಸ್ಐಎಫ್‌ಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈಚೆಗೆ ನಡೆದಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಅವರು ಅಭಿಮಾನಿಯೊಬ್ಬ ಕನ್ನಡ ಹಾಡಿಗೆ ಪದೇ ಪದೇ ಒತ್ತಾಯಿಸಿದ್ದಕ್ಕೆ ಇಂತದ್ದರಿಂದಲೇ ಪಹಲ್ಗಾಮ್ ದಾಳಿಯಾಯಿತು ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಗಾಯಕ ಸೋನು ನಿಗಮ್ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿ, ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಬೆಂಗಳೂರಿನ ಆವಲಹಳ್ಳಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಸೋನು ನಿಗಮ್ ವಿರುದ್ಧ ದೂರು ದಾಖಲಾಗಿದ್ದವು. ಈ ಸಂಬಂಧ ಪೊಲೀಸರು ನೋಟಿಸ್ ನೀಡಿದ್ದರು.
ವಿವಾದ ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ಸೋಮವಾರ ಮಹತ್ವದ ಸಭೆ ನಡೆಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರು ಇನ್ನು ಮುಂದೆ ಕನ್ನಡದ ಯಾವುದೇ ಚಿತ್ರಗಳಿಗೆ ಸೋನು ನಿಗಮ್ ಅವರಿಂದ ಹಾಡಿಸಬಾರದು. ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಅವರನ್ನು ಸಂಪೂರ್ಣ ನಿರ್ಬಂಧಿಸಲು ನಿರ್ಣಯ ಕೈಗೊಳ್ಳಲಾಗಿತ್ತು.
ಕನ್ನಡ ಚಿತ್ರರಂಗದ ನಿರ್ಣಯ ಸ್ವಾಗತಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು, ಇನ್ನು ಮುಂದೆ ನಟ-ನಟಿಯರು ಕನ್ನಡಕ್ಕೆ ಅಪಮಾನ ಮಾಡಿದರೆ ಸಹಿಸಲ್ಲ. ಸೋನು ನಿಗಮ್ ವಿರುದ್ಧ ಕನ್ನಡ ಚಿತ್ರರಂಗ ತೆಗೆದುಕೊಂಡಿರುವ ನಿರ್ಣಯವನ್ನು ಸ್ವಾಗತಿಸುವುದಾಗಿ ಹೇಳಿದ್ದರು.