ಎಸ್ಎಸ್ಎಲ್‌ಸಿ ಪರೀಕ್ಷೆಗೆ ಬಂದವರು, ಚಾಕು ಇರಿದುಕೊಂಡರು !
ಪರೀಕ್ಷಾ ದಿನವೇ ಅವಘಡ ಸಂಭವಿಸಿದ್ದು ದೂರು ದಾಖಲಾಗಿದೆ;
ಎಸ್ಎಸ್ಎಲ್ಸಿ (SSLC) ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಮೂವರಿಗೆ ಚಾಕು ಇರಿತದಲ್ಲಿ ಕೊನೆಯಾಗಿದೆ.
ಬೆಂಗಳೂರಿನ ರಾಗಿಗುಡ್ಡದ ಖಾಸಗಿ ಶಾಲೆಯ ಬಳಿ ಈ ಅವಘಡ ಸಂಭವಿಸಿದೆ. ಬುಧವಾರ (ಮಾರ್ಚ್27) ಎಸ್ಎಸ್ಎಲ್‌ಸಿ(SSLC) ಪರೀಕ್ಷೆ ನಡೆಯುವ ಸಮಯದಲ್ಲಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ಮೂವರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಚುಚ್ಚಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎಸ್ಎಸ್ಎಲ್‌ಸಿ ಪರೀಕ್ಷೆಗೆ ಸಾಮಾನ್ಯವಾಗಿ ಹಲವು ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ಪರೀಕ್ಷಾ ಕೇಂದ್ರ ಮಾಡಲಾಗುತ್ತದೆ. ಬುಧವಾರವೂ ಸಹ ರಾಗಿಗುಡ್ಡದ ಪರೀಕ್ಷಾ ಕೇಂದ್ರವಾಗಿರುವ ಖಾಸಗಿ ಶಾಲೆಗೆ ವಿವಿಧ ಶಾಲೆಗಳಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯುವುದಕ್ಕೆ ವಿದ್ಯಾರ್ಥಿಗಳು ಆಗಮಿಸಿದ್ದರು.
ಪರೀಕ್ಷೆ ದಿನವೇ ಸಣ್ಣ ವಿಚಾರಕ್ಕೆ ರಾಗಿಗುಡ್ಡ ಮತ್ತು ಸಾರಕ್ಕಿ ಪ್ರದೇಶದ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿದೆ. ಪರೀಕ್ಷೆ ಮುಗಿದ ನಂತರ ಈ ವಿಚಾರ ವಿಕೋಪಕ್ಕೆ ತಿರುಗಿದ್ದು, ಜಗಳ ನಡೆಯುವಾಗ ಸಾರಕ್ಕಿಯಿಂದ ಬಂದಿದ್ದ ಮೂವರು ವಿದ್ಯಾರ್ಥಿಗಳಿಗೆ ರಾಗಿಗುಡ್ಡದ ವಿದ್ಯಾರ್ಥಿಗಳು ಚಾಕುವಿನಿಂದ ಇರಿದಿದ್ದಾರೆ. ಈ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.