ಕಲಬುರಗಿಯಲ್ಲಿ ರೇವಣ್ಣ ಜತೆ ಸೆಲ್ಫಿಗೆ ಮುಗಿಬಿದ್ದ ಮಹಿಳಾ ಫ್ಯಾನ್ಸ್!
ಹೆಚ್ ಡಿ ರೇವಣ್ಣ ಅವರು ಕಲಬುರಗಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಅನೇಕ ಮಹಿಳೆಯರು, ಸಾರ್ವಜನಿಕರು ಅವರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಘಟನೆ ನಡೆದಿದೆ;
ಪ್ರಜ್ವಲ್ ರೇವಣ್ಣ ಪೆನ್‌ಡೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ಅಪಹರಣ ಹಾಗೂ ಲೈಂಗಿಕ ಕಿರುಕುಳ ಆರೋಪ ಕೇಸ್ನಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಟೆಂಪಲ್ ರನ್ ಮುಂದುವರೆದಿದೆ.
ದೈವ ಶಕ್ತಿ ಮೇಲೆ ಅಪಾರ ನಂಬಿಕೆಯುಳ್ಳ ಎಚ್.ಡಿ. ರೇವಣ್ಣ ಅವರು ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರಕ್ಕೆ ಭೇಟಿ ನೀಡಿದ್ದು, ದತ್ತಾತ್ರೇಯನ ದರ್ಶನ ಪಡೆದು, ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ಅವರು ಕಲಬುರಗಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಅನೇಕ ಮಹಿಳೆಯರು, ಸಾರ್ವಜನಿಕರು ಅವರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ.
ಇನ್ನು ತಮಗೆ ಬಂದಿರುವ ಸಂಕಷ್ಟಗಳನ್ನು ನಿವಾರಣೆ ಮಾಡುವ ಸಲುವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಸಲುವಾಗಿ ರೇವಣ್ಣ ಅವರು ತಮ್ಮ ಜತೆಯಲ್ಲಿಯೇ ಪುರೋಹಿತರನ್ನು ಕರೆದುಕೊಂಡು ಬಂದಿದ್ದರು. ಸುಮಾರು ಒಂದು ಗಂಟೆಗಳ ಕಾಲ ದತ್ತಾತ್ರೇಯ ದೇವಸ್ಥಾನದಲ್ಲಿ ರೇವಣ್ಣ ಪೂಜೆ ಸಲ್ಲಿಸಿದ್ದಾರೆ.
ದೇವರ ಮೇಲೆ ಅಪಾರ ನಂಬಿಕೆಯುಳ್ಳ ರೇವಣ್ಣನವರು ಈ ಹಿಂದೆಯೂ ಅನೇಕ ಬಾರಿ ಸಂಕಷ್ಟ ಎದುರಾಗಿದ್ದಾಗ ಗಾಣಗಾಪುರದ ದತ್ತಾತ್ರೇಯನ ಸನ್ನಿಧಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದರು.
ಇನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 4ರಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಮೇ 13ರಂದು ಅವರು ಜಾಮೀನಿನ ಮೂಲಕ ಪರಪ್ಪನ ಅಗ್ರಹಾರದಿಂದ ಹೊರಬಂದಿದ್ದು, ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ತೆರಳಿದ್ದರು. ಬಳಿಕ ಅಲ್ಲಿಂದ ಬೆಂಗಳೂರಿನ ಜೆಪಿ ನಗರ, ಚಾಮರಾಜಪೇಟೆ, ಜಯನಗರ ಮುಂತಾದ ಕಡೆ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.