Karnataka By Election | ಬಿ ವೈ ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ; ಕ್ರಮದ ಎಚ್ಚರಿಕೆ ಕೊಟ್ಟ ರಾಜ್ಯಾಧ್ಯಕ್ಷ
ರಾಜ್ಯದಲ್ಲಿ ಇಂತಹ ಸೋಲನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಕರ್ನಾಟಕದಲ್ಲಿ ಅತ್ಯಂತ ಹೀನಾಯವಾಗಿ ಸೋತಿರುವುದಕ್ಕೆ ಪೂಜ್ಯ ತಂದೆ-ಮಗನೇ ನೇರ ಹೊಣೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹರಿಹಾಯ್ದಿದ್ದಾರೆ.;
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹೀನಾಯ ಸೋಲಿಗೆ ಪೂಜ್ಯ ತಂದೆ-ಮಗನೇ ಕಾರಣ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರೋಕ್ಷವಾಗಿ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇಂತಹ ಸೋಲನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಜಾರ್ಖಂಡ್‌ನಲ್ಲಿ ಉತ್ತಮ ಸಾಧನೆ ಮಾಡಿದೆ. ಆದರೆ, ಕರ್ನಾಟಕದಲ್ಲಿ ಅತ್ಯಂತ ಹೀನಾಯವಾಗಿ ಸೋತಿದ್ದು, ಪೂಜ್ಯ ತಂದೆ-ಮಗನೇ ನೇರ ಹೊಣೆ ಎಂದು ಹರಿಹಾಯ್ದಿದ್ದಾರೆ.
ಬಿ.ವೈ.ವಿಜಯೇಂದ್ರ ನಾಯಕತ್ವವನ್ನು ರಾಜ್ಯದ ಜನ ತಿರಸ್ಕರಿಸಿದ್ದಾರೆ. ಮೂರೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಹೀನಾಯವಾಗಿ ಸೋತಿರುವುದು ವೈಯಕ್ತಿಕವಾಗಿ ನೋವು ತಂದಿದೆ. ಚುನಾವಣೆಯಲ್ಲಿ ವಕ್ಫ್ ವಿವಾದವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ರಾಜ್ಯ ನಾಯಕತ್ವ ವಿಫಲವಾಗಿದೆ. ಮಹಾರಾಷ್ಟ್ರದಲ್ಲಿ ವಕ್ಫ್ ವಿವಾದ ವಿಚಾರವನ್ನು ಬಳಸಿಕೊಂಡಿದ್ದರಿಂದಲೇ ಅಭೂತಪೂರ್ವ ಗೆಲುವು ಸಾಧ್ಯವಾಯಿತು. ಉದ್ಧವ್ ಠಾಕ್ರೆಯವರು ಔರಂಗಜೇಬ್ ಸಮಾಧಿಗೆ ನಮಸ್ಕರಿಸಿದ್ದರಿಂದಲೂ ಜನ ಅವರನ್ನು ಮುಳುಗಹಿಸಿದರು ಎಂದು ಹೇಳಿದ್ದಾರೆ.
ಹಗುರ ಮಾತು ನಿಲ್ಲಿಸದಿದ್ದರೆ ತಕ್ಕಪಾಠ
ಪಕ್ಷ ಹಾಗೂ ನಾಯಕರ ವಿರುದ್ಧ ಯಾರೇ ಹಗುರವಾಗಿ ಮಾತನಾಡಿದರೂ ಸಹಿಸುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಸನಗೌಡ ಪಾಟೀಲ ಯತ್ನಾಳಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗುರ ಮಾತು ಮುಂದುವರಿಸಿದರೆ ಪಕ್ಷದ ಕಾರ್ಯಕರ್ತರೇ ಚಿ..ಥೂ ಎಂದು ಉಗಿಯುತ್ತಾರೆ. ಯಾರೇ ಆದರೂ ಬಿಡುವ ಪ್ರಮೇಯ ಇಲ್ಲ. ಮನಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪಕ್ಷ. ಯತ್ನಾಳ ಅವರ ಕೇಂದ್ರ ಸಚಿವರಾಗಿದ್ದವರು. ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ. ಒಳ್ಳೆಯ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.