ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ಅಪಘಾತದ ತೀವ್ರತೆಗೆ ಆಂಬುಲೆನ್ಸ್ ಚಾಲಕ ವಿಕ್ರಮ್ ಪಾಲ್ ಮತ್ತು ಟೆಂಪೋ ಚಾಲಕ ಶಿವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟೆಂಪೋದಲ್ಲಿ ಬೆಂಗಳೂರಿನ ಕ್ಯಾಟರಿಂಗ್ ಸೇವೆಗೆ ಸೇರಿದ 15 ಮಂದಿ ಪ್ರಯಾಣಿಸುತ್ತಿದ್ದರು.
ಸಾಂದರ್ಭಿಕ ಚಿತ್ರ
ಇನ್ನೂ ಭಾಗಶಃ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ಸೋಮವಾರ ಸಂಜೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ಮತ್ತು ಟೆಂಪೋ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ.
ಅಪಘಾತದ ತೀವ್ರತೆಗೆ ಆಂಬುಲೆನ್ಸ್ ಚಾಲಕ ವಿಕ್ರಮ್ ಪಾಲ್ ಮತ್ತು ಟೆಂಪೋ ಚಾಲಕ ಶಿವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟೆಂಪೋದಲ್ಲಿ ಬೆಂಗಳೂರಿನ ಕ್ಯಾಟರಿಂಗ್ ಸೇವೆಗೆ ಸೇರಿದ 15 ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಬಂಗಾರಪೇಟೆ, ಕೆಜಿಎಫ್ ಮತ್ತು ಕೋಲಾರದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಈ ಹೆದ್ದಾರಿಯಲ್ಲಿ ಇತ್ತೀಚೆಗೆ ಮಾರಣಾಂತಿಕ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕೆಲವು ತಿಂಗಳ ಹಿಂದೆ ಕೋಲಾರ ಜಿಲ್ಲಾ ಪೊಲೀಸರು ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಮತ್ತು ಟ್ರ್ಯಾಕ್ಟರ್‌ಗಳ ಸಂಚಾರವನ್ನು ನಿಷೇಧಿಸಿದ್ದರು. ಕಳೆದ ಕೆಲವು ತಿಂಗಳುಗಳಲ್ಲಿ ನಡೆದ 10ಕ್ಕೂ ಹೆಚ್ಚು ಅಪಘಾತಗಳಲ್ಲಿ 15ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿರುವುದು ವರದಿಯಾಗಿದೆ.