ರೈತರ ಬಿಕ್ಕಟ್ಟು ಪರಿಹಾರಕ್ಕೆ ಒಗ್ಗಟ್ಟಿನ ಹೋರಾಟ: ರೈತ ಸಂಘಟನೆಗಳ ನಿರ್ಣಯ

ಶಿವಮೊಗ್ಗ, ರಾಯಚೂರು, ವಿಜಯಪುರ, ಬೆಳಗಾವಿ, ಮಂಡ್ಯ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ವಿವಿಧ ರೈತ ಸಂಘಟನೆಗಳ ರಾಜ್ಯ ಘಟಕಗಳ ಅಧ್ಯಕ್ಷರು ಬೆಂಗಳೂರಿನಲ್ಲಿ ಸಭೆ ನಡೆಸಿ, ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಒಗ್ಗೂಡಿ ಹೋರಾಟ ನಡೆಸುವ ನಿರ್ಣಯ ಕೈಗೊಂಡರು.;

Update: 2024-11-13 12:20 GMT
ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಒಗ್ಗೂಡಿ ಹೋರಾಟ ನಡೆಸುವ ನಿರ್ಣಯ ಕೈಗೊಂಡರು.

ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ರಾಜ್ಯದ ಎಲ್ಲ ರೈತ ಸಂಘಟನೆಗಳನ್ನು ಒಗ್ಗೂಡಿಸುವ ನಿರ್ಣಯವನ್ನು ಬೆಂಗಳೂರಿನಲ್ಲಿ ಮಂಗಳವಾರ ನಡೆದ 'ಕರ್ನಾಟಕ ರಾಜ್ಯ ರೈತ ಸಂಘಗಳ ಏಕೀಕರಣ' ಸಭೆಯಲ್ಲಿ ಕೈಗೊಳ್ಳಲಾಗಿದೆ.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ರೈತ ಚಳವಳಿಯ ರೂವಾರಿ ಪ್ರೊ.ಎಂ.ಡಿ. ನಂಜುಂಡ ಸ್ವಾಮಿ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಗಾಂಧಿಭವನದಲ್ಲಿ ಮಂಗಳವಾರ ಸಭೆ ನಡೆಯಿತು. 

ಸಭೆಯಲ್ಲಿ ಭಾಗವಹಿಸಿದ್ದ ಶಿವಮೊಗ್ಗ, ರಾಯಚೂರು, ವಿಜಯಪುರ, ಬೆಳಗಾವಿ, ಮಂಡ್ಯ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ವಿವಿಧ ರೈತ ಸಂಘಟನೆಗಳ ರಾಜ್ಯ ಘಟಕಗಳ ಅಧ್ಯಕ್ಷರು, ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಒಗ್ಗೂಡಿ ಹೋರಾಟ ನಡೆಸುವ ನಿರ್ಣಯ ಕೈಗೊಂಡರು.

ರೈತ ಮುಖಂಡರ ಪರವಾಗಿ ಮಾತನಾಡಿದ ಚುನ್ನಪ್ಪ ಪೂಜಾರಿ, 'ಎಲ್ಲ ಭಾಗದ ರೈತರ ಸಮಸ್ಯೆಗಳು ಒಂದೇ ಆಗಿವೆ. ರೈತ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಿದರೆ, ಒಂದಷ್ಟು ಪರಿಹಾರ ಸಿಗುತ್ತದೆ. ಈ ಬಾರಿಯ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ರೈತರ ಶಕ್ತಿ ಪ್ರದರ್ಶಿಸಬೇಕಿದೆ' ಎಂದು ಅಭಿಪ್ರಾಯಪಟ್ಟರು.

ಪಚ್ಚೆ ನಂಜುಂಡಸ್ವಾಮಿ ಮಾತನಾಡಿ, 'ರೈತ ಸಂಘಗಳನ್ನು ಒಗ್ಗೂಡಿಸುವ ಮುನ್ನುಡಿಯ ಸಭೆ ಇದು. ಇಲ್ಲಿಂದ ಹಂತ ಹಂತವಾಗಿ ಸಭೆಗಳನ್ನು ನಡೆಸುತ್ತಾ ಸಂಘಗಳ ಏಕೀಕರಣಕ್ಕೆ ಪ್ರಯತ್ನಿಸಲಾಗುವುದು. ಇಲ್ಲಿ ಹತ್ತು ಸಂಘಟನೆಗಳನ್ನು ಒಂದೇ ವೇದಿಕೆಗೆ ತರಲಾಗಿದೆ. ಮುಂದೆ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲೂ ಈ ಕೆಲಸ ನಡೆಯಲಿದೆ' ಎಂದರು.

'ಬೆಳಗಾವಿಯ ಅಧಿವೇಶನದ ವೇಳೆಯಲ್ಲಿ, ರಾಜ್ಯವ್ಯಾಪಿ ಸುಮಾರು 1 ಲಕ್ಷ ರೈತರನ್ನು ಸೇರಿಸಲಾಗುವುದು. ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಲಾಗುವುದು' ಎಂದರು.

ವಿವಿಧ ರೈತ ಸಂಘಟನೆಗಳ ಮುಖಂಡರಾದ ಮಂಜೇಶ್ ಗೌಡ, ಜಿ.ಜಿ.ಹಳ್ಳಿ ನಾರಾಯಣಸ್ವಾಮಿ, ಅರಳಾಪುರ ಮಂಜೇಗೌಡ, ನಾರಾಯಣ ರೆಡ್ಡಿ, ಲಕ್ಷ್ಮಿನಾರಾಯಣ ಗೌಡ, ಶರಣಪ್ಪ ದೊಡ್ಡಮನಿ, ಶಿವಮೊಗ್ಗದ ದಿನೇಶ ಶಿರವಾಳ, ರಾಜೂ ಪವಾ‌ರ್, ಮಹೇಶ್ ಸುಬೇದಾರ್, ರೈತ ಹೋರಾಟಗಾರ್ತಿ ನಂದಿನಿ ಜಯರಾಂ ಸೇರಿದಂತೆ ವಿವಿಧ ಜಿಲ್ಲೆಗಳ ರೈತ ಮುಖಂಡರು ಸಭೆಯಲ್ಲಿ ಇದ್ದರು.

Tags:    

Similar News