ಸಾಲದ ಕಂತು ಬಾಕಿ | ಬ್ಯಾಂಕ್ ಸಿಬ್ಬಂದಿಯಿಂದ ರೈತನ ಮೇಲೆ ಹಲ್ಲೆ

ರೈತರೊಬ್ಬರು ಪಡೆದಿದ್ದ ಸಾಲಕ್ಕೆ ಕಂತು ಕಟ್ಟಿಲ್ಲ ಎಂದು ಆರೋಪಿಸಿ ಬ್ಯಾಂಕ್‌ ಸಿಬ್ಬಂದಿ ಜಮೀನಿನಲ್ಲಿ ನೇಗಿಲು ಹೊಡೆಯುತ್ತಿದ್ದ ರೈತನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಣ ಕಟ್ಟುತ್ತೇನೆ ಎಂದರೂ ಬ್ಯಾಂಕ್‌ ಸಿಬ್ಬಂದಿ ಕಟ್ಟಿಗೆಗಳಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.;

Update: 2025-04-18 08:06 GMT

ಸಾಂದ್ರರ್ಬಿಕ ಚಿತ್ರ

ಕೇವಲ ಮೂರು ಕಂತು ಸಾಲದ ಬಾಕಿ ಉಳಿಸಿಕೊಂಡ ಕಾರಣಕ್ಕೆ ರೈತರೊಬ್ಬರ ಮೇಲೆ ಬ್ಯಾಂಕ್ ಸಿಬ್ಬಂದಿ ಅಮಾನುಷವಾಗಿ ಥಳಿಸಿರುವ ಘಟನೆ ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನ ಕೇಸರಜವಳಗಾ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

ರಾಜಕುಮಾರ್ ನಾಗಪ್ಪ ಮಟ್ಟೆ ಹಲ್ಲೆಗೊಳಗಾದ ರೈತ. ರಾಜಕುಮಾರ್ ಅವರು ಭಾಲ್ಕಿಯಲ್ಲಿರುವ ಸಿದ್ಧಶ್ರೀ ಬ್ಯಾಂಕ್‌ನಲ್ಲಿ 39 ಸಾವಿರ ರೂ. ಸಾಲ ಪಡೆದಿದ್ದರು. ಇಲ್ಲಿಯವರೆಗೆ ಪ್ರತಿ ವಾರ 835 ರೂ. ಕಂತಿನಂತೆ 36 ರಿಂದ 37 ಸಾವಿರ ಸಾಲ ಮರು ಪಾವತಿ ಮಾಡಿದ್ದರು. ಇನ್ನು ಉಳಿದ ಮೂರು ಕಂತನ್ನು ಪಾವತಿಸಿರಲಿಲ್ಲ. ಬ್ಯಾಂಕ್‌ ಸಿಬ್ಬಂದಿ ಹಣ ರಿಕವರಿಗೆ ಬಂದಾಗ ರೈತ ಹಣ ಪಾವತಿಸಲು ಸಮಯ ಕೇಳಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ಬ್ಯಾಂಕ್‌ ಸಿಬ್ಬಂದಿ ಕಟ್ಟಿಗೆಗಳಿಂದ ಹೊಲದಲ್ಲೇ ಮನಸೋ ಇಚ್ಛೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗುರುವಾರ ಸಂಜೆ ರೈತ ರಾಜಕುಮಾರ್‌ ಅವರು ಜಮೀನಿನಲ್ಲಿ ನೇಗಿಲು ಹೊಡೆಯುತ್ತಿದ್ದಾಗ  ಈ ಘಟನೆ ಸಂಭವಿಸಿದೆ.  ನಾಲ್ವರು ಸಿಬ್ಬಂದಿ ಕಟ್ಟಿಗೆಗಳಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ರೈತ ಆರೋಪಿಸಿದ್ದಾರೆ. 

ಗಂಭೀರವಾಗಿ ಗಾಯಗೊಂಡಿರುವ ರೈತ ರಾಜಕುಮಾರ್ ಅವರು ಇದೀಗ ಹುಲಸೂರು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Similar News