Budget Session | ಗ್ಯಾರಂಟಿ ಯೋಜನೆ ಕುರಿತು ಸುಳ್ಳು ಆರೋಪ; ಪ್ರತಿಪಕ್ಷಗಳಿಗೆ ಸಿಎಂ ತರಾಟೆ

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿರುವಾಗ ರಾಜ್ಯದಲ್ಲಿ ಮಾತ್ರ ಅನಗತ್ಯವಾಗಿ ವಿರೋಧಿಸುತ್ತಿರುವುದು ಬಿಜೆಪಿ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.;

Update: 2025-03-17 09:37 GMT

ಸಿಎಂ ಸಿದ್ದರಾಮಯ್ಯ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಅನಗತ್ಯವಾಗಿ ಟೀಕಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (Indian institute of Public Administration) ಸಂಸ್ಥೆಯ ಅಧ್ಯಕ್ಷರಾಗಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಸಚಿವ ಜಿತೇಂದ್ರ ಸಿಂಗ್ ಅವರೇ ಗ್ಯಾರಂಟಿ ಯೋಜನೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಶಂಸಾ ವರದಿ ಸಲ್ಲಿಸಿದ್ದಾರೆ. ಹೀಗಿರುವಾಗ ರಾಜ್ಯ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆ ಕುರಿತು ಅಪಪ್ರಚಾರ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಲಾಗಿದೆ. ಯೋಜನೆಗಳನ್ನು ವಿರೋಧಿಸುವುದಾದರೆ ನಕಲು ಮಾಡಿದ್ದೇಕೆ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಅವರು, ಸತ್ಯ ಯಾವಾಗಲೂ ಕಹಿಯಾಗಿರುತ್ತದೆ ಎಂದು ತಿರುಗೇಟು ನೀಡಿದ್ದಾರೆ,

2025 ಜ.3 ರಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಕುರಿತು ಅಧ್ಯಯನ ಮಾಡಿ ಹೋಗಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಹಾಗೂ ನನ್ನನ್ನು ಸಹ ಭೇಟಿಯಾಗಿ ಚರ್ಚಿಸಿದ್ದಾರೆ. ಫೆ. 2 ರಂದು ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್ ಸರ್‌ನಾಯಕ್‌ ಅವರು ಶಕ್ತಿ ಯೋಜನೆ ಬಗ್ಗೆ ಚರ್ಚಿಸಿ ತೆರಳಿದ್ದಾರೆ. ಹಾಗಾದರೆ ಅಲ್ಲಿರುವುದು ಯಾರ ಮೈತ್ರಿಕೂಟದ ಸರ್ಕಾರ ಎಂದು ಪ್ರಶ್ನಿಸಿದ್ದಾರೆ. 

ಮಾ.5 ರಂದು ಕೇರಳದ ಸಚಿವರು ಬಂದು ಅಧ್ಯಯನ ಮಾಡಿ ಹೋಗಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಮಾಧ್ಯಮಗಳು, ಜನರು, ವಿಶ್ವವಿದ್ಯಾನಿಲಯಗಳು, ವಿದ್ವಾಂಸರು ಶ್ಲಾಘಿಸಿದ್ದಾರೆ. ಕ್ಯಾಮರೂನ್ ದೇಶದ ಸುಲೇಮಾನ್ ಹ್ಯಾಂಕ್, ವಿಶ್ವಸಂಸ್ಥೆ ಸಾಮಾನ್ಯ ಮಂಡಳಿ ಅಧ್ಯಕ್ಷರು ಕೂಡ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿಕೊಂಡಿದ್ದಾರೆ. ಹಾಗಾದರೆ, ಇವರೆಲ್ಲರು ಸುಮ್ಮನೆ ಬಂದು ಅಧ್ಯಯನ ಮಾಡಿದ್ದಾರೆಯೇ ಎಂದ ಸಿಎಂ, ಉಪರಾಷ್ಟ್ರಪತಿ ಹಾಗೂ ಕೇಂದ್ರ ಸಚಿವರು ನೀಡಿರುವ ವರದಿಗಳು ಕೇಂದ್ರ ಸರ್ಕಾರಕ್ಕೆ ಉಪಯುಕ್ತವಾಗಿದ್ದರೂ ರಾಜ್ಯ ಬಿಜೆಪಿ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ನೀವು ಎಷ್ಟೇ ಹುಡುಕಿದರೂ ಮೊಸರಲ್ಲಿ ಕಲ್ಲು ಸಿಗುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೆ ರಾಜ್ಯವು ಆರ್ಥಿಕವಾಗಿ ದಿವಾಳಿಯಾಗಲಿದೆ ಎಂದು ನೀವಷ್ಟೇ ಅಲ್ಲ, ದೇಶದ ಪ್ರಧಾನಿ ಕೂಡ ಟೀಕಿಸಿದ್ದಾರೆ. ಆದರೆ ನೀವೇ ಲೋಕಸಭಾ ಚುನಾವಣೆಯಲ್ಲಿ ʼಮೋದಿ ಕಿ ಗ್ಯಾರಂಟಿʼ ಎಂದು ಘೋಷಣೆ ಮಾಡಿದ್ದೀರಿ ಎಂದು ಕಟುವಾಗಿ ಟೀಕಿಸಿದ್ದಾರೆ.

ರಾಜಕೀಯಪ್ರೇರಿತ ಟೀಕೆ

ರಾಜ್ಯ ಬಿಜೆಪಿ ನಾಯಕರು ರಾಜಕೀಯ ಪ್ರೇರಿತವಾಗಿ ಟೀಕಿಸುತ್ತಿರುವುದು ಸರಿಯಲ್ಲ. ಈಗಲಾದರೂ ಗ್ಯಾರಂಟಿ ಯೋಜನೆಗಳ ಕುರಿತು ಸಕಾರಾತ್ಮಕವಾಗಿ ಟೀಕೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಯೋಜನೆಗಳಲ್ಲಿ ತಪ್ಪುಗಳಿದ್ದರೆ ಅಥವಾ ಸರ್ಕಾರದ ಖಜಾನೆಗೆ ತೊಂದರೆಯಾದರೆ ಅದನ್ನು ಸರ್ಕಾರದ ಗಮನಕ್ಕೆ ತರುವುದು ವಿರೋಧಪಕ್ಷದ ಕೆಲಸ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಫೆಬ್ರವರಿವರೆಗೆ ಬರೋಬ್ಬರಿ 76,509 ಕೋಟಿ ರೂ. ನೀಡಿದೆ. ಇದು ಸತ್ಯ ಎನ್ನುವುದು ಸದನದಲ್ಲಿರುವ ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ಗೊತ್ತಿದೆ. ಸರ್ಕಾರ ದಿವಾಳಿಯಾಗಿದ್ದರೆ 76,509 ಕೋಟಿ ಕೊಡಲು ಸಾಧ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ.

ಸುಳ್ಳು ಆರೋಪ, ಅಪಪ್ರಚಾರ ನಿಲ್ಲಿಸಿ

ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ನಿಲ್ಲಿಸಲಿದೆ ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಿದಿರಿ. ಆದರೆ, ನಾವು ನಿಲ್ಲಿಸಿಲ್ಲ. ಜನರಿಗೆ ಈ ಕಾರ್ಯಕ್ರಮಗಳ ಸತ್ಯಾಸತ್ಯತೆ ಗೊತ್ತಿದೆ. ಸಾಕಷ್ಟು ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಿದೆ. 2023 ಜೂನ್ 11 ರಿಂದ 410 ಕೋಟಿ ಜನರು ಶಕ್ತಿ ಯೋಜನೆಯಡಿ ಪ್ರಯಾಣಿಸಿದ್ದಾರೆ. ನೀವು ಸುಳ್ಳು ಪ್ರಚಾರ ಮಾಡಿದ್ದರಿಂದಲೇ ಉಪಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಸೋತಿದ್ದೀರಿ. ಮೂರೂ ಕಡೆ ಮಕಾಡೆ ಮಲಗಿರುವ ನೀವು ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿದರೆ ಅದು ಸಾಧ್ಯವಿಲ್ಲ ಎಂದಿದ್ದಾರೆ.

ಆಪರೇಷನ್ ಕಮಲದಿಂದ ಗೆದ್ದಿದ್ದೀರಿ

ರಾಜ್ಯದಲ್ಲಿ ಎರಡು ಬಾರಿ ಅಧಿಕಾರ ಮಾಡಿರುವ ಬಿಜೆಪಿ, ಜನರ ಆಶೀರ್ವಾದದಿಂದ ಗೆದ್ದಿಲ್ಲ. ಬದಲಿಗೆ ಆಪರೇಶನ್ ಕಮಲ ಮಾಡಿ 18 ಕ್ಷೇತ್ರಗಳನ್ನು ಗೆದ್ದಿದೆ ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ.

ನಮ್ಮ ಸರ್ಕಾರ ಜನರ ಆಶೀರ್ವಾದದಿಂದ 2023 ಮೇ 22 ರಂದು ಅಧಿಕಾರಕ್ಕೆ ಬಂದಿತು. ನಮ್ಮ ಪಕ್ಷ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದು 2 ವರ್ಷಗಾಳಾಗುತ್ತಿದೆ. ಇದು ಸರ್ಕಾರ ಬಂದ ನಂತರ ರಾಜ್ಯಪಾಲರ ಎರಡನೇ ಭಾಷಣ. ಅಧಿಕಾರಕ್ಕಾಗಿ ಅಧಿಕಾರ ಮಾಡುವುದಲ್ಲ. ಜನರ ಕಲ್ಯಾಣಕ್ಕೆ ಅಧಿಕಾರ ಬಳಕೆಯಾಗಬೇಕು ಎನ್ನುವ ಕಾಳಜಿಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇವೆಲ್ಲವೂ ವಾಸ್ತವ ಕಾರ್ಯಕ್ರಮಗಳಾಗಿರುವುದರಿಂದ ರಾಜ್ಯಪಾಲರು ಶ್ಲಾಘಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಕೀಳು ಅಭಿರುಚಿಯ ಪದ ಬಳಕೆ

ಸದನದ ಚರ್ಚೆಗಳು ಬಸವಣ್ಣನವರು ಹೇಳಿದಂತೆ ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನುವಂತಿರಬೇಕು. ಆದರೆ, ಬಿಜೆಪಿ ಹಿರಿಯ ನಾಯಕರಾದ ಅಶೋಕ್ ಹಾಗೂ ಸುನೀಲ್ ಕುಮಾರ್ ಅವರು ʼಕರಿಮಣಿ ಮಾಲೀಕʼ ಯಾರು ಎಂದು ಪ್ರಶ್ನಿಸಿದ್ದಾರೆ.

ನನ್ನ ಹಾಗೂ ಬಹುತೇಕ ಸದಸ್ಯರ ಪ್ರಕಾರ ಇವು ಅರ್ಥಹೀನ ಮಾತುಗಳು. ನಾನು ಬಿಜೆಪಿಯ ಹಿರಿಯ ಸದಸ್ಯರಿಂದ ಇಂಥ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ.ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕರಿಮಣಿ ಮಾಲೀಕ ಯಾರು ಎನ್ನುವುದು ಕೀಳು ಅಭಿರುಚಿಯ ಪ್ರಯೋಗ ಎಂದು ಸಿಎಂ ಟೀಕಿಸಿದ್ದಾರೆ.

ಅಸಂಬದ್ಧ ಮಾಹಿತಿಗೆ ಕಿಡಿ

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸದನಕ್ಕೆ ದೊಡ್ಡ ಸುಳ್ಳು ಹೇಳಿದ್ದಾರೆ. ಆರ್.ಎಸ್.ಎಸ್ ಬೈಠಕ್ ನಲ್ಲಿದ್ದಾರೋ, ಸದನದಲ್ಲಿದ್ದಾರೋ ಗೊತ್ತಿಲ್ಲ. ಕೃಷ್ಣ ಭಾಗ್ಯ ಜಲ ನಿಗಮಕ್ಕೆ ಕೇಂದ್ರ ಸರ್ಕಾರ 2 ಸಾವಿರ ಕೋಟಿ ರೂ. ಕೊಟ್ಟಿದೆ. ಕರ್ನಾಟಕ ನೀರಾವರಿ ನಿಗಮಕ್ಕೆ 3300 ಕೋಟಿ, ವಿಶ್ವೇಶ್ವರ ಜಲನಿಗಮ ಸೇರಿ ಕರ್ನಾಟಕ ನೀರಾವರಿಗೆ ಒಟ್ಟು 10 ಸಾವಿರ ಕೋಟಿ ರೂ. ಕೊಟ್ಟಿದೆ ಎಂದು ಹೇಳಿದ್ದಾರೆ. ಮಾಹಿತಿ ಕೊರತೆಯಿಂದಲೋ, ಉದ್ದೇಶಪೂರ್ವಕವಾಗಿ ಹೇಳಿದ್ದಾರೋ ಗೊತ್ತಿಲ್ಲ. ವಾಸ್ತವವಾಗಿ 2025 ಜ. 24 ರಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸ್ಕೀಂ ಆಫ್ ಸ್ಪೆಷಲ್ ಅಸಿಸ್ಟೆನ್ಸ್ ನೀಡಿದೆ. 50 ವರ್ಷಗಳ ಕಾಲ ಬಡ್ಡಿ ರಹಿತವಾಗಿ ವಿಶೇಷ ನೆರವು ನೀಡಿದೆ. ಮುಳವಾಡ ಏತ ನೀರಾವರಿಗೆ 200 ಕೋಟಿ ರೂ., ಮಹಾಲಕ್ಷ್ಮಿ ಮಲಪ್ರಭಾ ಯೋಜನೆಗೆ 200 ಕೋಟಿ ರೂ., ಭ್ರದಾ ಮೇಲ್ದಂಡೆಗೆ 300 ಕೋಟಿ ರೂ. ಸೇರಿ ಒಟ್ಟು 1030 ಕೋಟಿ ರೂ. ನೀಡಲಾಗಿದೆ ಎಂದು ವಿವರಿಸಿದ್ದಾರೆ.

Tags:    

Similar News