ಕಾಂಗ್ರೆಸ್ ವಿರುದ್ಧ ಫೇಕ್ ನ್ಯೂಸ್: ಚುನಾವಣಾ ಆಯುಕ್ತರಿಗೆ ದೂರು
ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದೆ.;
"ಭಾರತೀಯ ಜನತಾ ಪಕ್ಷವು ದಿನಪತ್ರಿಕೆಯನ್ನು ಹೋಲುವ ನಕಲಿ ಸುದ್ದಿ ತುಣುಕೊಂದನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ" ಎಂದು ಆರೋಪಿಸಿರುವ ಕಾಂಗ್ರೆಸ್, ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದೆ.
ಚುನಾವಣೆಯ ಸಂದರ್ಭದಲ್ಲಿ ಮತದಾರರ ಕೋಮು ಭಾವನೆಗಳನ್ನು ಕೆರಳಿಸುವ ಸುದ್ದಿಯನ್ನು ತುಂಬಿ ಬಿಜೆಪಿಯು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿನಯ್ ಮತಿಕಟ್ಟಿ ಹಾಗೂ ಕೆಪಿಸಿಸಿ ಕಾನೂನು ವಿಭಾಗದ ಮುಖ್ಯಸ್ಥರಾದ ದಿವಾಕರ್ ನಾರಾಯಣ ಸ್ವಾಮಿ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವಾರ್ತಾ ಪತ್ರಿಕೆಯನ್ನೇ ಹೋಲುವ ನಕಲಿ ಸುದ್ದಿ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಆರೋಪದ ಮೇಲೆ, ಪ್ರಭಾಕರ ರೆಡ್ಟಿ, ವಸಂತ್ ಗಿಳಿಯಾರ್, ವಿಜಯ್ ಹೆರಗು ಅವರುಗಳ ಮೇಲೆ ದೂರು ದಾಖಲಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಈ ಪ್ರಕರಣದ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ಫೇಕ್ ನ್ಯೂಸ್ ಗಳ ಸೃಷ್ಟಿ, ಮತ್ತು ಹರಡುವಿಕೆಯನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಯಾರೂ ಕೂಡ ಇಂಥ ಕಾನೂನು ಬಾಹಿರ ಕೃತ್ಯಕ್ಕೆ ಕೈಹಾಕಬಾರದು ಎಂದು ಹಲವು ಬಾರಿ ಎಚ್ಚರಿಕೆ ನೀಡಿದ್ದೆವು. ಆದರೂ ನನ್ನ ವಿರುದ್ಧವೇ ಸುಳ್ಳು ಸುದ್ದಿ ಸೃಷ್ಟಿಸಿ ಜನರ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಕಾನೂನಿನ ಮೂಲಕ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ" ಎಂದು ಸಿದ್ದರಾಮಯ್ಯ ತಮ್ಮ x ಖಾತೆಯಲ್ಲಿ ಹೇಳಿದ್ದಾರೆ.