́ಎನಿವೇರ್ ನೋಂದಣಿʼ ವ್ಯವಸ್ಥೆ ಜಿಲ್ಲೆಗಳಿಗೂ ವಿಸ್ತರಣೆ : ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಮೊದಲು ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ, ಬಸವನಗುಡಿ, ಜಯನಗರ, ಶಿವಾಜಿನಗರ ಹಾಗೂ ರಾಜಾಜಿನಗರ ಜಿಲ್ಲಾ ನೋಂದಣಿ ಕಚೇರಿಯ ವ್ಯಾಪ್ತಿಯ ಉಪನೋಂದಣಿ ಕಚೇರಿಗಳಲ್ಲಿ ಜಾರಿಗೆ ತರಲಾಗಿತ್ತು.

Update: 2024-07-16 13:39 GMT
ಸಚಿವ ಕೃಷ್ಣ ಬೈರೇಗೌಡ
Click the Play button to listen to article

ಬೆಂಗಳೂರು: ನೋಂದಣಿ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಹಾಗೂ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ʼಎನಿವೇರ್ ನೋಂದಣಿʼ ವ್ಯವಸ್ಥೆಯನ್ನು ಆಗಸ್ಟ್‌ ತಿಂಗಳಿನಿಂದ ಪ್ರತಿಯೊಂದು ಜಿಲ್ಲೆಗಳಿಗೂ ವಿಸ್ತರಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನಸಭಾ ಅಧಿವೇಶನದ ನಡುವೆ ಮಂಗಳವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸಂಬಂಧಿತ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಚನೆ ನೀಡಿದ ಅವರು,”ಉಪ ನೋಂದಣಾಧಿಕಾರಿ ಕಚೇರಿ ಎಂದರೆ ಜನದಟ್ಟಣೆ ಸಾಮಾನ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸಾಮಾನ್ಯರನ್ನು ಸರಕಾರಿ ಕಚೇರಿಗಳಲ್ಲಿ ಕಾಯಿಸುವುದೂ ಒಂದು ರೀತಿಯ ಶೋಷಣೆ ಎಂಬುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಈಗಾಗಲೇ “ಎನಿವೇರ್ ನೋಂದಣಿ” ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಆದರೆ, ಈ ವ್ಯವಸ್ಥೆ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ಆಗಸ್ಟ್‌ ತಿಂಗಳಿನಿಂದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂದು ಸಮಯದ ಗಡುವು ನೀಡಿದರು.

ಪ್ರಾಯೋಗಿಕವಾಗಿ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇದೇ ವರ್ಷ ಮಾ.14 ರಿಂದ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ಪರಿಚಯಿಸಿದ್ದು, ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹೀಗಾಗಿ ಮುಂದಿನ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ತಲಾ 4 ಜಿಲ್ಲೆಗಳಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಿ. ನಂತರದ ತಿಂಗಳಲ್ಲಿ ಈ ಸಂಖ್ಯೆಯನ್ನು 8 ಕ್ಕೆ ಏರಿಸಿ. ಈ ವರ್ಷಾಂತ್ಯದೊಳಗೆ ಎಲ್ಲಾ ಜಿಲ್ಲೆಗಳಲ್ಲೂ ಎನಿವೇರ್‌ ರಿಜಿಸ್ಟ್ರೇಷನ್‌ ಲಭ್ಯವಾಗುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಏನಿದು ಏನಿವೇರ್‌ ರಿಜಿಸ್ಟ್ರೇಷನ್?

ಯಾವುದೇ ವ್ಯಕ್ತಿಯು ನೋಂದಣಿ ದಸ್ತಾವೇಜನ್ನು ಜನ ಸಂದಣಿ ಇಲ್ಲದ ಜಿಲ್ಲೆಯ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ತಮ್ಮ ಆಸ್ತಿ ದಸ್ತಾವೇಜನ್ನು ನೋಂದಾಯಿಸಿಕೊಳ್ಳಲು “ಎನಿವೇರ್‌ ರಿಜಿಸ್ಟ್ರೇಷನ್” ವ್ಯವಸ್ಥೆಯ ಅಡಿಯಲ್ಲಿ ಸರ್ಕಾರ/ಕಂದಾಯ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

ದಸ್ತಾವೇಜುಗಳ ನೋಂದಣಿಗಳಲ್ಲಿನ ವಿಳಂಬ ತಡೆಗಟ್ಟಿ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸುವ, ಸಬ್‌ ರಿಜಿಸ್ಟ್ರಾರ್‌ ಕಚೇರಿ ಎದುರು ಜನರಿಗೆ ಕಾಯುವ ಶೋಷಣೆಯಿಂದ ಮುಕ್ತಿ ನೀಡುವ ಹಾಗೂ ಕಚೇರಿ ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಎನಿವೇರ್‌ ರಿಜಿಸ್ಟ್ರೇಷನ್‌ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಮೊದಲು ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ, ಬಸವನಗುಡಿ, ಜಯನಗರ, ಶಿವಾಜಿನಗರ ಹಾಗೂ ರಾಜಾಜಿನಗರ ಜಿಲ್ಲಾ ನೋಂದಣಿ ಕಚೇರಿಯ ವ್ಯಾಪ್ತಿಯ ಉಪನೋಂದಣಿ ಕಚೇರಿಗಳಲ್ಲಿ ಜಾರಿಗೆ ತರಲಾಗಿತ್ತು.

ಈ ಯೋಜನೆಯ ಮೂಲಕ ಆಸ್ತಿ ನೋಂದಣಿ ಸಮಯದಲ್ಲಿ ಜನಸಾಮಾನ್ಯರು ಬೆಂಗಳೂರು ನಗರದ ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳಲು ನೋಂದಣಿ ಕಾಯ್ದೆ-1908ರ ಕಲಂ (5) ಹಾಗೂ ಕಲಂ (6) ರಡಿಯಲ್ಲಿ ಅನುವು ಮಾಡಿಕೊಡಲಾಗಿತ್ತು.

ಎನಿವೇರ್ ನೋಂದಣಿ ವ್ಯವಸ್ಥೆಯು ಬೆಂಗಳೂರು ನಗರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಜನ ಸಾಮಾನ್ಯರಿಗೆ ನೋಂದಣಿ ವಿಚಾರದಲ್ಲಿ ತ್ವರಿತ ಸೇವೆ ನೀಡಲು ಈ ಯೋಜನೆ ಸಹಕಾರಿಯಾಗಿದೆ. ಜನರೂ ಇದರ ಉಪಯೋಗವನ್ನು ಬಳಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಈ ಯೋಜನೆಯನ್ನು ಇದೀಗ ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಈ ನೂತನ ಯೋಜನೆಯು ಸಾರ್ವಜನಿಕರಿಗೆ ಉಪಯುಕ್ತ ವ್ಯವಸ್ಥೆಯಾಗಿರಲಿದೆ. ದಸ್ತಾವೇಜಿನ ನೋಂದಣಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವನ್ನು ತಡೆಗಟ್ಟಿ ಸಾರ್ವಜನಿಕರ ಸಮಯ ಉಳಿಸಿ ಕಚೇರಿಯ ಜನದಟ್ಟಣೆಯನ್ನು ನಿಯಂತ್ರಿಸುತ್ತದೆ. ಅಲ್ಲದೆ, ಕಚೇರಿ ನೋಂದಣಿ ಕೆಲಸವನ್ನೂ ಜಿಲ್ಲೆಯಾದ್ಯಂತ ಎಲ್ಲ ಕಚೇರಿಗಳಿಗೂ ಸಮಾನವಾಗಿ ಹಂಚಿಕೆ ಮಾಡಲು ಈ ಯೋಜನೆ ಸಹಕಾರಿಯಾಗಿರಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಸಭೆಯಲ್ಲಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್‌, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಭಾರ ಮಹಾ ನಿರೀಕ್ಷಕರಾದ ದಯಾನಂದ ಕೆ.ಎ ಉಪಸ್ಥಿತರಿದ್ದರು.

Tags:    

Similar News