ನೂರು ಸಿದ್ದರಾಮಯ್ಯ ಬಂದರೂ ನನ್ನ ಬಂಧನ ಸಾಧ್ಯವಿಲ್ಲ: ಸಿಎಂಗೆ ಎಚ್‌ಡಿಕೆ ಸವಾಲು

Update: 2024-08-21 11:41 GMT

ʻʻಸಿದ್ದರಾಮಯ್ಯನಂಥವರು ನೂರು ಜನ ಬಂದರೂ ನನ್ನನ್ನು ಬಂಧಿಸಲು ಸಾಧ್ಯವಿಲ್ಲʼʼ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಅವರನ್ನು ಬಂಧಿಸುವ ಸಂದರ್ಭ ಬಂದರೆ ಯಾವುದೇ ಮುಲಾಜಿಲ್ಲದೇ ಬಂಧಿಸುತ್ತೇವೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕುಮಾರಸ್ವಾಮಿ ಈ ತಿರುಗೇಟು ನೀಡಿದ್ದು, ʻʻನನ್ನ ಬಂಧನ ಮಾಡೋಕೆ ನೂರು ಜನ ಸಿದ್ದರಾಮಯ್ಯ ಬಂದರೂ ಆಗಲ್ಲ. ನನಗೆ ಭಯ ಶುರುವಾಗಿದೆ ಎಂದು ಸಿಎಂ ಹೇಳುತ್ತಾರೆ. ನನಗೆ ಭಯ ಶುರುವಾಗಿದೆಯಾ? ನನ್ನನ್ನ ನೋಡಿದರೆ ಹಾಗೆ ಅನ್ನಿಸುತ್ತಾ?" ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ʻʻಸಿದ್ದರಾಮಯ್ಯ ಅವರು ಕಳೆದ ಒಂದು ವಾರದಿಂದ ಹೇಗೆ ನಡೆದುಕೊಂಡಿದ್ದಾರೆ ಎಂದು ಜನ ನೋಡಿದ್ದಾರೆ. ಮೈಸೂರಿನ ದಾಖಲೆಗಳೇ ಇವೆಯಲ್ಲ. ಮುಡಾ ಆಸ್ತಿ ತಮ್ಮ ಆಸ್ತಿ ಎಂದು ಹೇಳಿದ್ದಾರೆ. ಇಂತಹ ಭಂಡತನದ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ" ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ʻʻಹಗರಣ ಹೊರಬಂದಾಗಿನಿಂದ ಎಷ್ಟು ಸುಳ್ಳು ಹೇಳಿಕೊಂಡು ಬಂದರು ಎಂದು ಎಲ್ಲರೂ ನೋಡಿದ್ದಾರೆ. ಡಿನೋಟಿಫಿಕೇಷನ್ ಮಾಡೋದಾದರೆ ಮಗನ ಹೆಸರಲ್ಲಿ ಮಾಡಬೇಕಿತ್ತು. ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲೇ ಆಸ್ತಿ ಇದೆ. ನಿಮ್ಮ ಬಾಮೈದ ಅಷ್ಟೊಂದು ದಡ್ಡನಾ ಸಿದ್ದರಾಮಯ್ಯ ಅವರೇ? 2010ರಲ್ಲಿ ದಾನ ಮಾಡಿದಾಗ ಯಾವ ಆಸ್ತಿ ಎಂದು ಗೊತ್ತಾಗಲಿಲ್ವಾ?" ಎಂದು ಪ್ರಶ್ನಿಸಿದರು.

ಅಲ್ಲದೆ, ತಮ್ಮ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, "ಸಾಯಿ ಮಿನರಲ್ಸ್ ವಿಚಾರದಲ್ಲಿ ನಾನು ಕಾನೂನು ಹೋರಾಟ ಮಾಡುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ನಾನು ಕಾನೂನು ಮೊರೆ ಹೋಗಲೇಬೇಕುʼʼ ಎಂದು ಹೇಳುವ ಮೂಲಕ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ಪಡೆಯಲು ನ್ಯಾಯಾಲಯದ ಮೊರೆ ಹೋಗುವ ಸೂಚನೆ ನೀಡಿದರು.

Tags:    

Similar News