ಸಾರಿಗೆ ನೌಕರರ ಮುಷ್ಕರದ ವಿರುದ್ಧ ಎಸ್ಮಾ ಬ್ರೇಕ್: ಸರ್ಕಾರದಿಂದ ಕಠಿಣ ಎಚ್ಚರಿಕೆ
ರಾಜ್ಯದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು ಮುಷ್ಕರಕ್ಕೆ ಸಜ್ಜಾಗಿದ್ದರು. ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಆಗಸ್ಟ್ 5 ರಂದು ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು.;
ಸಾರಿಗೆ ನೌಕರರು ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ.
ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 5 ರಿಂದ ಮುಷ್ಕರ ನಡೆಸಲು ಮುಂದಾಗಿದ್ದ ರಾಜ್ಯದ ಸಾರಿಗೆ ನೌಕರರಿಗೆ ಸರ್ಕಾರ ಕಠಿಣ ಎಚ್ಚರಿಕೆ ನೀಡಿದೆ. ಮುಷ್ಕರಕ್ಕೆ ಕರೆ ನೀಡಿದ ಬೆನ್ನಲ್ಲೇ ಸರ್ಕಾರವು ಎಸ್ಮಾ (ಅತ್ಯಗತ್ಯ ಸೇವೆಗಳ ನಿರ್ವಹಣಾ ಕಾಯಿದೆ) ಜಾರಿಗೊಳಿಸಿದ್ದು, ಮುಂದಿನ ಆರು ತಿಂಗಳ ಕಾಲ ಯಾವುದೇ ರೀತಿಯ ಮುಷ್ಕರ ನಡೆಸುವುದನ್ನು ನಿಷೇಧಿಸಲಾಗಿದೆ.
ರಾಜ್ಯದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು ಮುಷ್ಕರಕ್ಕೆ ಸಜ್ಜಾಗಿದ್ದರು. ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಆಗಸ್ಟ್ 5 ರಂದು ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು. ಸಾರ್ವಜನಿಕ ಸೇವೆಗಳಿಗೆ ಇದರಿಂದ ಭಾರಿ ಅಡಚಣೆಯಾಗುವ ಸಾಧ್ಯತೆಯಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸರ್ಕಾರ, ತಕ್ಷಣವೇ ಎಸ್ಮಾ ಅಸ್ತ್ರವನ್ನು ಪ್ರಯೋಗಿಸಿದೆ.
ಏನಿದು ಎಸ್ಮಾ?
ಅತ್ಯಗತ್ಯ ಸೇವೆಗಳ ನಿರ್ವಹಣಾ ಕಾಯಿದೆ (Essential Services Maintenance Act) ಎಂಬುದರ ಸಂಕ್ಷಿಪ್ತ ರೂಪವೇ ಎಸ್ಮಾ. ಸರ್ಕಾರಿ ನೌಕರರು ಸಾಮೂಹಿಕ ಪ್ರತಿಭಟನೆಗಳನ್ನು ನಡೆಸಿ ಪರಿಸ್ಥಿತಿಯು ನಿಯಂತ್ರಣ ತಪ್ಪುತ್ತಿದೆ ಎಂದು ಸರ್ಕಾರದ ಗಮನಕ್ಕೆ ಬಂದಾಗ ಈ ಕಾಯಿದೆಯನ್ನು ಜಾರಿಗೊಳಿಸಲಾಗುತ್ತದೆ. ಆಹಾರ, ಭದ್ರತೆ, ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆ ಮುಂತಾದ ಮೂಲಸೌಕರ್ಯ ಮತ್ತು ಅಗತ್ಯ ಸೇವೆಗಳಿಗೆ ಧಕ್ಕೆ ಬರುವ ಹಂತಕ್ಕೆ ಪ್ರತಿಭಟನೆಗಳು ತಲುಪಿದಾಗ, ಸರ್ಕಾರಕ್ಕೆ ಎಸ್ಮಾ ಜಾರಿ ಮಾಡುವ ಅಧಿಕಾರವಿದೆ.
ಎಸ್ಮಾ ಉಲ್ಲಂಘಿಸಿದರೆ ಪರಿಣಾಮಗಳು
ಎಸ್ಮಾ ಜಾರಿಯಲ್ಲಿರುವಾಗ ಅದನ್ನು ಧಿಕ್ಕರಿಸಿ ಯಾವುದೇ ಉದ್ಯೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ, ಆತನಿಗೆ ಕಠಿಣ ಪರಿಣಾಮಗಳು ಎದುರಾಗುತ್ತವೆ. ವೇತನ, ಭತ್ಯೆ, ಬಡ್ತಿ ಹಾಗೂ ಇತರೆ ಸವಲತ್ತುಗಳ ಮೇಲೆ ಇದು ನೇರವಾಗಿ ಪರಿಣಾಮ ಬೀರುತ್ತದೆ. ಸರ್ಕಾರದ ಈ ನಿರ್ಧಾರದಿಂದ ಸಾರಿಗೆ ನೌಕರರ ಮುಷ್ಕರದ ಯೋಜನೆಗೆ ಹಿನ್ನಡೆಯಾದಂತಾಗಿದೆ.