ಬೆಂಗಳೂರಿನ ಕೆರೆ, ಮಳೆ ನೀರು ಕಾಲುವೆ ಒತ್ತುವರಿ: ಅಧಿಕಾರಿಗಳಿಗೆ ಚಾಟಿ ಬೀಸಿದ ಹಸಿರುಪೀಠ

ಮಳೆನೀರಿನ ಚರಂಡಿಗಳು ಮತ್ತು ಕೆರೆ ಒತ್ತುವರಿ ಪ್ರಮುಖ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಮತ್ತು ಇತರ ಅಧಿಕಾರಿಗಳಿಂದ ಹಸಿರು ನ್ಯಾಯಪೀಠ ವಿವರಣೆ ಕೇಳಿ ನೋಟಿಸ್‌ ನೀಡಿದೆ.

Update: 2024-10-13 11:06 GMT

ಬೆಂಗಳೂರಿನ ವಿಭೂತಿಕೆರೆ, ದೊಡ್ಡಾನೆಕ್ಕುಂದಿ ಕೆರೆ ಒತ್ತುವರಿ ಹಾಗೂ ಮಳೆ ನೀರುಕಾಲುವೆ ಮುಚ್ಚಿರುವ ಕುರಿತು ಲೋಕಾಯುಕ್ತ ವರದಿಗೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠವು ಬಿಬಿಎಂಪಿ ಅಧಿಕಾರಿಗಳಿಗೆ ನೋಟಿಸ್‌ ನೀಡಿದೆ.

ಎರಡೂ ಕೆರೆಗಳ ವಸ್ತುಸ್ಥಿತಿ ಕುರಿತು ಲೋಕಾಯುಕ್ತ ತನಿಖೆ ಆಧರಿಸಿದ ಪತ್ರಿಕಾ ವರದಿ ಆಧಾರದ ಮೇಲೆ ಹಸಿರು ನ್ಯಾಯಪೀಠ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿದೆ.

ಮಳೆನೀರಿನ ಚರಂಡಿಗಳು ಮತ್ತು ಕೆರೆ ಒತ್ತುವರಿ ಪ್ರಮುಖ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಮತ್ತು ಇತರ ಅಧಿಕಾರಿಗಳಿಂದ ವಿವರಣೆ ಕೇಳಿ ನೋಟಿಸ್‌ ಜಾರಿ ಮಾಡಿದೆ.

ಹಸಿರು ಪೀಠದ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರು ತಮ್ಮ ಇತ್ತೀಚಿನ ಆದೇಶದಲ್ಲಿ, ವಿಭೂತಿಪುರ ಕೆರೆಯ ಪ್ರವೇಶ ದ್ವಾರದ ವಿರೂಪ, ಬೇಲಿ ಧ್ವಂಸ ಹಾಗೂ ಕೆರೆ ಆವರಣದಲ್ಲಿ ಅಕ್ರಮ ಕಟ್ಟಡ ನಿರ್ಮಾಣ, ಕೆರೆಗೆ ಹರಿಯುವ ಮಳೆ ನೀರಿನ ಕಾಲುವೆ ಹಾಗೂ ಹೊರಹರಿವಿನ ಮಾರ್ಗ ಮುಚ್ಚಿರುವ ಬಗ್ಗೆ ಪತ್ರಿಕಾ ವರದಿ ಉಲ್ಲೇಖಿಸಿದ್ದಾರೆ. ಇದೇ ರೀತಿ ದಡ್ಡಾನೆಕ್ಕುಂದಿ ಕೆರೆಯು ಸಮಸ್ಯೆ ಎದುರಿಸುತ್ತಿದೆ ಎಂದು ನ್ಯಾಯಾಂಗ ಸದಸ್ಯರಾದ ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಹಾಗೂ ತಜ್ಞ ಸದಸ್ಯರಾದ ಎ.ಸೆಂಥಿಲ್ ವೇಲ್ ಅವರನ್ನು ಒಳಗೊಂಡ ಪೀಠ ಹೇಳಿದೆ.

ಕೆರೆ ಅಧ್ಯಯನದ ವರದಿಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ ಮತ್ತು ಪರಿಸರ (ರಕ್ಷಣೆ) ಕಾಯ್ದೆಯ ನಿಬಂಧನೆಗಳ ಅನುಸರಣೆಗೆ ಸಂಬಂಧಿಸಿದ್ದಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರನ್ನು ಪ್ರತಿವಾದಿಗಳು ಮತ್ತು ಕಕ್ಷಿದಾರರನ್ನಾಗಿ ಮಾಡಲಾಗಿದೆ ಎಂದು ಹೇಳಿದೆ.

ಜಿಲ್ಲಾಧಿಕಾರಿ ಪರ ವಕೀಲರು ನ್ಯಾಯಪೀಠದ ನೋಟಿಸ್ ಸ್ವೀಕರಿಸಿ, ಪ್ರತಿಕ್ರಿಯೆ ದಾಖಲಿಸಲು ಕಾಲಾವಕಾಶ ಕೋರಿದರು. ಮುಂದಿನ ವಿಚಾರಣೆಗೆ (ನ. 5) ಕನಿಷ್ಠ ಒಂದು ವಾರ ಮುಂಚಿತವಾಗಿ ಚೆನ್ನೈನಲ್ಲಿರುವ ನ್ಯಾಯಮಂಡಳಿಯ ದಕ್ಷಿಣ ವಲಯ ಪೀಠದ ಮುಂದೆ ತಮ್ಮ ಪ್ರತಿಕ್ರಿಯೆಯನ್ನು ಅಫಿಡವಿಟ್ ಮೂಲಕ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

Tags:    

Similar News