ಪ್ರಾಣಿ ವಿನಿಮಯ ಯೋಜನೆಯಡಿ ಬನ್ನೆರುಘಟ್ಟದಿಂದ ಜಪಾನ್‌ಗೆ ಆನೆಗಳ ರವಾನೆ
ಈ ಯೋಜನೆಯಡಿ ಒಂದು ಗಂಡು ಹಾಗೂ ಮೂರು ಹೆಣ್ಣಾನೆ ತೆರಳಲಿವೆ. ಪ್ರತಿಯಾಗಿ ಜಪಾನ್‌ನಿಂದ ಮೂರು ಚಿಂಪಾಂಜಿ, ನಾಲ್ಕು ಚೀತಾ, ನಾಲ್ಕು ಪೂಮಾ (ಪರ್ವತ ಸಿಂಹ), ಎಂಟು ಕ್ಯಾಪುಚಿನ್ ಕೋತಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಬರಲಿವೆ.;
ಸಾಂದರ್ಭಿಕ ಚಿತ್ರ
ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆಯಡಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ ನಾಲ್ಕು ಆನೆಗಳು ಗುರುವಾರ (ಜು. 24) ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಜಪಾನ್‌ಗೆ ಪ್ರಯಾಣ ಮಾಡಲಿವೆ.
ಈ ಯೋಜನೆಯಡಿ ಒಂದು ಗಂಡು ಹಾಗೂ ಮೂರು ಹೆಣ್ಣಾನೆ ತೆರಳಲಿವೆ. ಪ್ರತಿಯಾಗಿ ಜಪಾನ್‌ನಿಂದ ಮೂರು ಚಿಂಪಾಂಜಿ, ನಾಲ್ಕು ಚೀತಾ, ನಾಲ್ಕು ಪೂಮಾ (ಪರ್ವತ ಸಿಂಹ), ಎಂಟು ಕ್ಯಾಪುಚಿನ್ ಕೋತಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಬರಲಿವೆ.
ವಿಮಾನದ ವಿನ್ಯಾಸ ಬದಲು
ಉದ್ಯಾನದಲ್ಲಿರುವ ಆನೆಗಳ ಪೈಕಿ ಸುರೇಶ್ (8), ಗೌರಿ (9), ಶ್ರುತಿ (7) ಹಾಗೂ ತುಳಸಿ (5) ಕತಾರ್ ಏರ್‌ವೇಸ್ ಸರಕು ಸಾಗಣೆ ವಿಮಾನ ಏರಲಿದ್ದು, ಆನೆಗಳಿಗಾಗಿಯೇ ವಿಮಾನದ ಒಳಗಡೆ ವಿನ್ಯಾಸ ಬದಲಾವಣೆ ಮಾಡಲಾಗಿದೆ.
ಎಂಟು ಗಂಟೆ ಪ್ರಯಾಣ
ಎಂಟು ಗಂಟೆ ಪ್ರಯಾಣದ ನಂತರ ಜಪಾನ್‌ನ ಒಸಾಕಾದ ಕನ್ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದು ಅಲ್ಲಿಂದ ಹಿಮೇಜಿ ಸೆಂಟ್ರಲ್ ಪಾರ್ಕ್‌ಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನೆಗಳಿಗೆ ಸೂಕ್ತ ತರಬೇತಿ
ವಿಮಾನ ಪ್ರಯಾಣ, ಆಹಾರ, ಹೊಸ ಪರಿಸರಕ್ಕೆ ಹೊಂದಾಣಿಕೆ ಕುರಿತು ಆನೆಗಳಿಗೆ ಆರು ತಿಂಗಳಿನಿಂದ ಬನ್ನೇರುಘಟ್ಟ ಉದ್ಯಾನದಲ್ಲಿ ತರಬೇತಿಯನ್ನು ನೀಡಲಾಗಿದೆ. ನಾಲ್ಕೂ ಆನೆಗಳು ಆರೋಗ್ಯದಿಂದ ಇದ್ದು, ಬೀಳ್ಕೊಡುಗೆಗೆ ಉದ್ಯಾನದ ಸಿಬ್ಬಂದಿಗಳು ಸಿದ್ದತೆ ನಡೆಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಾಣಿ ವಿನಿಮಯ ಯೋಜನೆಯಡಿ 2021ರಲ್ಲಿಯೂ ಮೈಸೂರು ಮೃಗಾಲಯದ ಮೂರು ಆನೆಗಳನ್ನು ಜಪಾನ್‌ನ ಟೊಯೊಹಾಶಿ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.