ಮಂಡ್ಯ ಸರ್ಕಾರಿ ಶಾಲೆಯಲ್ಲಿ 'ಮೊಟ್ಟೆ' ವಿವಾದ |ಮಕ್ಕಳ ವರ್ಗಾವಣೆ ಪತ್ರಕ್ಕೆ ಪೋಷಕರ ಪಟ್ಟು, ಅಧಿಕಾರಿಗಳ ಮನವೊಲಿಕೆ

ಪರಿಶಿಷ್ಟ ಜಾತಿಯ ಪೋಷಕರು ತಮ್ಮ ಮಕ್ಕಳಿಗೆ ಶಾಲೆಯಲ್ಲೇ ಮೊಟ್ಟೆ ನೀಡಬೇಕೆಂದು ಒತ್ತಾಯಿಸುತ್ತಿದ್ದರೆ, ಪ್ರಬಲ ಜಾತಿಗಳಿಗೆ ಸೇರಿದ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.;

Update: 2025-07-25 05:12 GMT

ಸಾಂದರ್ಭಿಕ ಚಿತ್ರ

ಮಂಡ್ಯ ತಾಲೂಕಿನ ಅಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ವಿಚಾರವು ಇದೀಗ ಪೋಷಕರ ನಡುವೆ ವೈಮನಸ್ಸಿಗೆ ಕಾರಣವಾಗಿದ್ದು, ಕೆಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಲು ವರ್ಗಾವಣೆ ಪತ್ರಕ್ಕಾಗಿ (ಟಿಸಿ) ಪಟ್ಟು ಹಿಡಿದಿದ್ದಾರೆ.

ಅಲಕೆರೆ ಗ್ರಾಮದ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 124 ಮಕ್ಕಳು ಹಾಗೂ ಎಲ್‌ಕೆಜಿ ಮತ್ತು ಯುಕೆಜಿಯಲ್ಲಿ 20 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾ ಕಟ್ಟಡದ ಸಮೀಪದಲ್ಲೇ ವೀರಭದ್ರೇಶ್ವರಸ್ವಾಮಿ ದೇವಾಲಯವಿರುವ ಕಾರಣ, ಕೆಲವು ಪೋಷಕರ ಮನವಿಯ ಮೇರೆಗೆ ಇಲ್ಲಿಯವರೆಗೆ ಮಕ್ಕಳಿಗೆ ಮೊಟ್ಟೆಯ ಬದಲು ಬಾಳೆಹಣ್ಣು ನೀಡಲಾಗುತ್ತಿತ್ತು.

ಆದರೆ, ಶಾಲೆಯಲ್ಲಿ ಓದುತ್ತಿರುವ ಸುಮಾರು 20 ಪರಿಶಿಷ್ಟ ಜಾತಿಯ ಮಕ್ಕಳಿಗೆ ಪೌಷ್ಟಿಕ ಆಹಾರವಾದ ಮೊಟ್ಟೆಯನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಪೋಷಕರು ವಾರದ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ, ಶಾಲೆಯಲ್ಲಿ ಮೊಟ್ಟೆ ವಿತರಣೆಯನ್ನು ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದರು.

ಪೋಷಕರ ವಾದ-ಪ್ರತಿವಾದ

ಪರಿಶಿಷ್ಟ ಜಾತಿಯ ಪೋಷಕರು ತಮ್ಮ ಮಕ್ಕಳಿಗೆ ಶಾಲೆಯಲ್ಲೇ ಮೊಟ್ಟೆ ನೀಡಬೇಕೆಂದು ಒತ್ತಾಯಿಸುತ್ತಿದ್ದರೆ, ಪ್ರಬಲ ಜಾತಿಗಳಿಗೆ ಸೇರಿದ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. "ನಮಗೆ ಮೊಟ್ಟೆ ನೀಡುವುದಕ್ಕೆ ವಿರೋಧವಿಲ್ಲ, ಆದರೆ ಶಾಲೆಯ ಪಕ್ಕದಲ್ಲೇ ದೇಗುಲವಿರುವುದರಿಂದ ಇಲ್ಲಿ ಮೊಟ್ಟೆ ಬೇಯಿಸುವುದು ಬೇಡ. ಬೇಕಾದರೆ ಮನೆಗಳಿಗೆ ಕಳುಹಿಸಿಕೊಡಲಿ" ಎಂದು ಎಸ್‌ಡಿಎಂಸಿ ಸದಸ್ಯ ಚಂದ್ರು ಅಲಕೆರೆ ಹೇಳಿದ್ದಾರೆ.

ಶಾಲೆಯಲ್ಲೇ ಮೊಟ್ಟೆ ನೀಡಬೇಕೆಂಬ ಒತ್ತಡ ಹೆಚ್ಚಾದ ಕಾರಣ, 40ಕ್ಕೂ ಹೆಚ್ಚು ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಸಮೀಪದ ಕೀಲಾರ, ಹನಕೆರೆ ಮತ್ತು ಬೆಸಗರಹಳ್ಳಿ ಶಾಲೆಗಳಿಗೆ ಸೇರಿಸಲು ಮುಂದಾಗಿದ್ದು, ಟಿಸಿಗಾಗಿ ದುಂಬಾಲು ಬಿದ್ದಿದ್ದಾರೆ.

ಅಧಿಕಾರಿಗಳ ಸ್ಪಷ್ಟನೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಡಿಪಿಐ ಶಿವರಾಮೇಗೌಡ, "ಆಲಕೆರೆ ಶಾಲೆಯಿಂದ ಯಾವ ವಿದ್ಯಾರ್ಥಿಗೂ ಟಿ.ಸಿ ಕೊಟ್ಟಿಲ್ಲ. ಮೊಟ್ಟೆ ಕೊಡುವುದು ಸರ್ಕಾರದ ಆದೇಶ, ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ನಾವು ಪೋಷಕರ ಮನವೊಲಿಸುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ. ಬಿಇಒ ಸೌಭಾಗ್ಯ ಅವರು, "ಈಗಾಗಲೇ ಗ್ರಾಮಸ್ಥರೊಂದಿಗೆ ಮೂರು ಸಭೆಗಳನ್ನು ನಡೆಸಲಾಗಿದೆ. ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬಂದರೆ ವಿವಾದ ಬಗೆಹರಿಯಲಿದೆ" ಎಂದು ತಿಳಿಸಿದ್ದಾರೆ.

Tags:    

Similar News