ಶೈಕ್ಷಣಿಕ ಕ್ರಾಂತಿ | ಕೆಪಿಎಸ್ ಶಾಲೆ ನಿರ್ಮಾಣಕ್ಕೆ ಕೈ ಜೋಡಿಸಿ: ಡಿಸಿಎಂ ಮನವಿ

Update: 2024-08-19 13:28 GMT

ʻʻರಾಜ್ಯದ ಎಲ್ಲಾ ಕಂಪೆನಿಗಳು ಸರ್ಕಾರದ ಜೊತೆ ಕೈ ಜೋಡಿಸಿದರೆ ಮೂರು ವರ್ಷಗಳಲ್ಲಿ 2 ಸಾವಿರ ಕೆಪಿಎಸ್ ಶಾಲೆಗಳ ನಿರ್ಮಾಣದ ಕನಸನ್ನು ನನಸು ಮಾಡಬಹುದು. ಪ್ರಾಥಮಿಕ ಶಿಕ್ಷಣದಲ್ಲಿ ಕರ್ನಾಟಕ ಕ್ರಾಂತಿ ಮಾಡಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಿಧಾನಸೌಧದ ಬಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸಿಎಸ್ ಆರ್ ಶಿಕ್ಷಣ ಸಮ್ಮೇಳನದಲ್ಲಿ ಮಾತನಾಡಿದ ಅವರು, ʻʻಕೆಪಿಎಸ್ ಶಾಲೆಗಳ ನಿರ್ಮಾಣಕ್ಕಾಗಿ ಸಮತ್ವ ಎನ್ನುವ ಕಾರ್ಯಕ್ರಮವನ್ನು ಸರ್ಕಾರ ಪರಿಚಯಿಸುತ್ತಿದೆ. ಶಾಲೆಗಳ ನಿರ್ಮಾಣ ಮಾಡುವ ಕಂಪೆನಿಗಳಿಗೆ ಗುತ್ತಿಗೆದಾರರು, ಶಾಲಾ ಕಟ್ಟಡ ವಾಸ್ತುಶಿಲ್ಪಿಗಳು ಸೇರಿದಂತೆ ತಾಂತ್ರಿಕ ಬೆಂಬಲ ನೀಡಲಾಗುವುದು. ಸರ್ಕಾರದ ಸಲಹೆ ಪಡೆದು ಕಂಪೆನಿಗಳು ಅವರ ಕಲ್ಪನೆಯ ವಿನ್ಯಾಸದ ಶಾಲೆಗಳನ್ನು ನಿರ್ಮಿಸಬಹುದುʼʼ ಎಂದು ತಿಳಿಸಿದರು.

ʻʻಕರ್ನಾಟಕದಲ್ಲಿ 43 ಬೃಹತ್ ಕಂಪೆನಿಗಳಿವೆ. ಇವುಗಳು 4 ಲಕ್ಷದ 8 ಸಾವಿರ ಕೋಟಿ ಲಾಭಾಂಶವನ್ನು ಘೋಷಿಸಿಕೊಂಡಿವೆ. ಇವುಗಳ ಸಿಎಸ್ ಆರ್ ಅನುದಾನದ ಮೊತ್ತ 8.63 ಸಾವಿರ ಕೋಟಿಯಾಗಲಿದೆ. ಇದರಲ್ಲಿ 6.6 ಸಾವಿರ ಕೋಟಿಯನ್ನು ಶಿಕ್ಷಣದ ಮೇಲೆ ಖರ್ಚು ಮಾಡುತ್ತಿವೆ. ಕೇವಲ 50 ಕಂಪೆನಿಗಳು 10 ಸಾವಿರ ಕೋಟಿ ಸಿಎಸ್ ಆರ್ ನಿಧಿ ನೀಡಲು ಸಾಧ್ಯವಾಗುತ್ತಿದೆ. ಎಲ್ಲರೂ ಸೇರಿದರೆ ಇನ್ನು ಹೆಚ್ಚಿನ ಅನುದಾನ ಸಾಧ್ಯ. ಇದೊಂದು ಪವಿತ್ರವಾದ ಕೆಲಸʼʼ ಎಂದರು.

ʻʻಉದ್ದಿಮೆದಾರರು 2 ಸಾವಿರ ಸ್ಥಳಗಳಲ್ಲಿ ಜಿಲ್ಲಾ, ತಾಲ್ಲೂಕು ಕೇಂದ್ರಗಳನ್ನು ಹೊರತುಪಡಿಸಿ ರಾಜ್ಯದ ಗ್ರಾಮೀಣ ಭಾಗದಲ್ಲಿ ಯಾವುದೇ ಜಾಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಮನೆ ಮಕ್ಕಳನ್ನು ಸಾಕಿದಂತೆ ನೀವು ಕಟ್ಟುವ ಶಾಲೆಯನ್ನು ಪ್ರೀತಿಸಿ. ಇದರಿಂದ ಗ್ರಾಮೀಣ ಪ್ರದೇಶಗಳಿಂದ ನಗರ ಭಾಗಗಳಿಗೆ ಶಿಕ್ಷಣಕ್ಕಾಗಿ ವಲಸೆ ಬರುವುದು ತಪ್ಪಲಿದೆ. ಮಗುವಿನ ಶಿಕ್ಷಣಕ್ಕಾಗಿ ಇಡೀ ಕುಟುಂಬವೇ ವಲಸೆ ಬರುವುದು ತಪ್ಪಲಿದೆ. ನಗರ, ಗ್ರಾಮೀಣ ಪ್ರದೇಶಗಳ ನಡುವಿನ ಕೀಳರಿಮೆ, ಒತ್ತಡ ಹಾಗೂ ಮೂಲ ಸೌಕರ್ಯಗಳ ಸಮಸ್ಯೆ ಕಡಿಮೆಯಾಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳು ಬೆಳವಣಿಗೆ ಕಂಡರೆ ನಮಗೆ, ನಿಮಗೆ ಎಲ್ಲರಿಗೂ ಸಂತೃಪ್ತಿಭಾವ ಮೂಡುತ್ತದೆʼʼ ಎಂದು ಹೇಳಿದರು.

ಸಿಬಿಎಸ್ ಇ, ಐಸಿಎಸ್ ಇ ಮಾದರಿ ಶಿಕ್ಷಣ

ʻʻಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಶಾಲೆಗಳಿವೆ. ಆದರೆ ಬಾಗಲಕೋಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುತ್ತಾಳೆ. ಅಂದರೆ ನಾವು ಸೌಕರ್ಯಗಳನ್ನು ನೀಡಿದರೆ ಮಕ್ಕಳು ಸಾಧನೆ ಮಾಡುತ್ತಾರೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ನಗರ ಭಾಗದಲ್ಲಿ ಸಿಗುವ ಸಿಬಿಎಸ್ ಇ, ಐಸಿಎಸ್ ಇ ಶಿಕ್ಷಣ ಮಾದರಿ ಗ್ರಾಮೀಣ ಭಾಗದ ಮಕ್ಕಳಿಗೂ ಸಿಗಬೇಕು ಎನ್ನುವುದು ಈ ಯೋಜನೆಯ ಹಿಂದಿರುವ ಉದ್ದೇಶʼʼ ಎಂದು ತಿಳಿಸಿದರು.

ಅಜೀಂ ಪ್ರೇಮ್ ಜೀ 1,500 ಕೋಟಿ ಅನುದಾನ

ʻʻಅಜೀಂ ಪ್ರೇಮ್ ಜೀ ಅವರು ಯಾದಗಿರಿ, ಕಲಬುರ್ಗಿ ಜಿಲ್ಲೆಗಳ ಜವಾಬ್ದಾರಿ ಸಂಪೂರ್ಣ ನಮಗೆ ನೀಡಿ ಎಂದು ಹೇಳಿದ್ದಾರೆ. ಮೊಟ್ಟೆ ವಿತರಣೆಗೆ ರೂ.1,500 ಕೋಟಿ ನೀಡಿದ್ದಾರೆ ಟೊಯೋಟಾ ಕಂಪೆನಿಯವರು ರಾಮನಗರ ಜಿಲ್ಲೆಯ 300 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಈಗ ಐದರಿಂದ ಆರು ಶಾಲೆಗಳನ್ನು ಪ್ರಸ್ತುತ ಅಭಿವೃದ್ದಿ ಮಾಡುವುದಾಗಿ ತಿಳಿಸಿದ್ದಾರೆ. ಒಂದೇ ಕಂಪೆನಿಯವರು ಎಲ್ಲಾ ಕೆಲಸಗಳನ್ನು ಮಾಡಬೇಕೆಂದಿಲ್ಲ. ಒಂದಷ್ಟು ಜನರು ಒಟ್ಟಿಗೆ ಸೇರಿ ಕೆಲಸ ಮಾಡಬಹುದು. ಶಾಲೆಗಳನ್ನು ವಿನ್ಯಾಸ ಮಾಡುವ ವಾಸ್ತುಶಿಲ್ಪಿಗಳು ಉಚಿತವಾಗಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಇವರ ನೆರವು ಪಡೆಯಬಹುದು. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ. ಮುಂದಿನ ಜನಾಂಗದ ಬೆಳವಣಿಗೆಗಾಗಿ ನಾವೆಲ್ಲ ಕೈ ಜೋಡಿಸಬೇಕುʼʼ ಎಂದು ಡಿಕೆ ಶಿವಕುಮಾರ್‌ ಅವರು ಮನವಿ ಮಾಡಿದರು.

Tags:    

Similar News