Teachers Job | ಕಲ್ಯಾಣ ಕರ್ನಾಟಕದ 5,267 ಶಿಕ್ಷಕರ ಹುದ್ದೆ ನೇಮಕಾತಿಗೆ ಆದೇಶ
380 ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್-2) ಸೇರಿ ಒಟ್ಟು 5,267 ಶಿಕ್ಷಕರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.;
ಕಲ್ಯಾಣ ಕರ್ನಾಟಕದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ 5,267 ಶಿಕ್ಷಕರನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವ ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿ ಆದೇಶಿಸಿದೆ.
ಒಂದರಿಂದ ಐದನೇ ತರಗತಿಗೆ 4,424 ಶಿಕ್ಷಕರು (ಪ್ರಾಥಮಿಕ ಶಾಲಾ ಶಿಕ್ಷಕರು), ಆರರಿಂದ ಎಂಟನೇ ತರಗತಿಗೆ 78(ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು) ಹಾಗೂ 380 ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್-2) ಸೇರಿ ಒಟ್ಟು 5,267 ಶಿಕ್ಷಕರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ನೇಮಕಾತಿ ಪೂರ್ವ ಪ್ರಕ್ರಿಯೆಗಳು ಮುಕ್ತಾಯವಾದ ನಂತರ ಹಾಗೂ ನೇಮಕಾತಿ ಆದೇಶ ನೀಡುವ ಮೊದಲು ಹುದ್ದೆಗಳಿಗೆ ತಗುಲುವ ಹಣಕಾಸು ವಿವರಗಳನ್ನು ಅಂದಾಜಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಶಾಲೆಗಳಿಗೆ ಮಂಜೂರಾಗಿದ್ದ ಹುದ್ದೆಗಳಲ್ಲಿ ಒಟ್ಟು 6,584 ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ಶೇ 80 ರಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ರಾಯಚೂರು ಜಿಲ್ಲೆಯಲ್ಲಿ ಸುಮಾರು 2100ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿದ್ದು, ಸುಮಾರು ಆರು ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಇದೇ ಅ.5 ರಂದು ರಾಯಚೂರು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡುವ ಬಗ್ಗೆ ಭರವಸೆ ನೀಡಿದ್ದರು. 2023-24ನೇ ಸಾಲಿನ ಬಜೆಟ್‌ನಲ್ಲಿ ಶಿಕ್ಷಕರ ಹುದ್ದೆ ಭರ್ತಿ ಮಾಡುವ ಬಗ್ಗೆ ಸರ್ಕಾರ ಘೋಷಿಸಿತ್ತು.