ಕೇರಳದ ವಂಚನೆ ಪ್ರಕರಣ: ಇಡಿ ತನಿಖೆಯಲ್ಲಿ ಶಾಸಕ ಹ್ಯಾರಿಸ್‌ ಮತ್ತು ಪುತ್ರ ನಲಪಾಡ್‌ ಹೆಸರು ತಳಕು

ಪ್ರಮುಖ ಆರೋಪಿ ಮುಹಮ್ಮದ್ ಹಫೀಜ್, ಬೆಂಗಳೂರಿನ ಶಾಂತಿನಗರದ ಶಾಸಕ ಎನ್.ಎ. ಹ್ಯಾರಿಸ್‌ ಅವರ ಹೆಸರಿನಲ್ಲಿ ಕರ್ನಾಟಕ ವಿಧಾನಸಭೆಯಿಂದ ಅಧಿಕೃತ ಪ್ರೋಟೋಕಾಲ್ ಸ್ಟಿಕ್ಕರ್ ಅನ್ನು ಅಂಟಿಸಿರುವ ವಾಹನವನ್ನು ಬಳಸುತ್ತಿದ್ದರು.

Update: 2024-03-20 15:26 GMT

ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಕೇರಳ, ಕರ್ನಾಟಕ ಮತ್ತು ಗೋವಾದಾದ್ಯಂತ ವ್ಯಾಪಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕರ್ನಾಟಕ ಕಾಂಗ್ರೆಸ್ ಶಾಸಕ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ. ಹ್ಯಾರಿಸ್‌ ಮತ್ತು ಅವರ ಪುತ್ರ ಹಾಗೂ ಕರ್ನಾಟಕ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಅವರ ಹೆಸರು ತಳಕು ಹಾಕಿಕೊಂಡಿದೆ.

ಕೇರಳದ ಚಿನ್ನದ ವ್ಯಾಪಾರಿಯ ಅಕ್ರಮ ಚಿನ್ನ ಸಾಗಣೆ ಮಾಡುತ್ತಿದ್ದ ಕಾರು ಮತ್ತು ಅದರಲ್ಲಿ ಬಳಸಲಾದ ಕರ್ನಾಟಕ ಸರ್ಕಾರದ ಸ್ಟಿಕರ್‌ ಹ್ಯಾರಿಸ್‌ ಮತ್ತು ಅವರ ಪುತ್ರನಿಗೆ ಸಂಬಂಧಿಸಿದ್ದಾಗಿದೆ ಎಂದು ಇಡಿ ಪ್ರಕಟಣೆ ತಿಳಿಸಿದೆ.

ಕೊಚ್ಚಿ ವಲಯ ಕಚೇರಿ ಇತ್ತೀಚೆಗೆ ಕೇರಳದ ಉದ್ಯಮಿ ಮೊಹಮ್ಮದ್ ಹಫೀಜ್ ಮತ್ತು ಇತರರಿಗೆ ಸಂಬಂಧಿಸಿದಂತೆ ಮಾರ್ಚ್ 14 ರಿಂದ ಮಾರ್ಚ್ 16 ರವರೆಗೆ ಕೇರಳ, ಕರ್ನಾಟಕ ಮತ್ತು ಗೋವಾದಾದ್ಯಂತ ಒಂಬತ್ತು ಸ್ಥಳಗಳಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.

ಶೋಧದ ವೇಳೆ ಅಧಿಕಾರಿಗಳು 1672.8 ಗ್ರಾಂ ಚಿನ್ನಾಭರಣ, 12.5 ಲಕ್ಷ ನಗದು, ಏಳು ಮೊಬೈಲ್ ಫೋನ್‌ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಾರಿ ನಿರ್ದೇಶನಾಲಯದ (ಇಡಿ) ಅಧಿಕೃತ ಹೇಳಿಕೆಯ ಪ್ರಕಾರ ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 4.4 ಕೋಟಿ ರೂ. ಪತ್ತೆಯಾಗಿತ್ತು. ಕೇರಳ ಪೊಲೀಸರು, ಗೋವಾ ಪೊಲೀಸರು ಮತ್ತು ಕರ್ನಾಟಕ ಪೊಲೀಸರು ಸಹಕಾರದಿಂದ ತನಿಖೆ ನಡೆಸಲಾಗುತ್ತಿದೆ. ಹೆಚ್ಚುವರಿ ಹಣಕ್ಕಾಗಿ ಕಾನೂನುಬಾಹಿರ ಬೇಡಿಕೆಗಳನ್ನು ಈಡೇರಿಸಲು ಹಫೀಜ್ ಮತ್ತು ಅವನ ಸಹಚರರು ವಂಚನೆ, ಹಣ ದುರುಪಯೋಗ, ನಕಲಿ ಮತ್ತು ದಾಖಲೆಗಳ ತಯಾರಿಕೆ ಸೇರಿದಂತೆ ವಿವಿಧ ಅಪರಾಧಗಳಲ್ಲಿ ತೊಡಗಿದ್ದಾರೆ ಎಂದು ಇಡಿ ಪ್ರಕಟಣೆ ತಿಳಿಸಿದೆ.

ಪ್ರಮುಖ ಆರೋಪಿ ಮುಹಮ್ಮದ್ ಹಫೀಜ್, ಬೆಂಗಳೂರಿನ ಶಾಂತಿನಗರದ ಶಾಸಕ ಎನ್.ಎ.  ಹ್ಯಾರಿಸ್ ಅವರ ಹೆಸರಿನಲ್ಲಿ ಕರ್ನಾಟಕ ವಿಧಾನಸಭೆಯಿಂದ ಅಧಿಕೃತ ಪ್ರೋಟೋಕಾಲ್ ಸ್ಟಿಕ್ಕರ್ ಅನ್ನು ಅಂಟಿಸಿರುವ ವಾಹನವನ್ನು ಬಳಸುತ್ತಿದ್ದರು. ಈ ವಾಹನವನ್ನು ಎನ್.ಎ. ಹ್ಯಾರಿಸ್ ಅವರ ಪುತ್ರ ಮುಹಮ್ಮದ್ ಹ್ಯಾರಿಸ್ ನಲಪಾಡ್ ಖರೀದಿಸಿದ್ದು, ಅವರ ಹತ್ತಿರದ ಸಂಬಂಧಿ ನಫೀಹ್ ಮುಹಮ್ಮದ್ ನಾಸರ್ ಹೆಸರಿನಲ್ಲಿ ವಾಹನವನ್ನು ನೋಂದಾಯಿಸಲಾಗಿದೆ ಎಂದು ಹೆಚ್ಚಿನ ವಿಚಾರಣೆಯಿಂದ ತಿಳಿದುಬಂದಿದೆ. ʼಇಡಿʼ ಹೇಳಿಕೆಯ ಪ್ರಕಾರ ನಾಸರ್, ಪ್ರಮುಖ ಆರೋಪಿ ಮುಹಮ್ಮದ್ ಹಫೀಜ್‌ನ ಆಪ್ತ ಸ್ನೇಹಿತ . ತನಿಖೆ ಪ್ರಗತಿಯಲ್ಲಿದೆ ಎಂದು ಇಡಿ ಹೇಳಿದೆ.

 

Tags:    

Similar News