ಡ್ರಗ್ಸ್ ಕೇಸ್: ಉಚ್ಚಾಟಿತ ಕಾಂಗ್ರೆಸ್ ಮುಖಂಡ ಲಿಂಗರಾಜ್ ಕಣ್ಣಿಗೆ ಜಾಮೀನು; ಸಿಬಿಐ ತನಿಖೆಗೆ ಆಗ್ರಹ
ನನ್ನನ್ನು ಈ ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಸಲಾಗಿದೆ, ನಾನು ಯಾವುದೇ ತಪ್ಪು ಮಾಡಿಲ್ಲ, ಬೇಕಿದ್ದರೆ ಸಿಬಿಐ ತನಿಖೆ ನಡೆಸಲಿ" ಎಂದು ಕಣ್ಣಿ ಸವಾಲು ಹಾಕಿದ್ದಾರೆ.;
ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕಲಬುರಗಿ ಬ್ಲಾಕ್ ಕಾಂಗ್ರೆಸ್‌ನ ಉಚ್ಚಾಟಿತ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರಿಗೆ ಜಾಮೀನು ಲಭಿಸಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಕಲಬುರಗಿಯಲ್ಲಿ ಮಾತನಾಡಿದ ಅವರು, "ನನ್ನನ್ನು ಈ ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಸಲಾಗಿದೆ, ನಾನು ಯಾವುದೇ ತಪ್ಪು ಮಾಡಿಲ್ಲ, ಬೇಕಿದ್ದರೆ ಸಿಬಿಐ ತನಿಖೆ ನಡೆಸಲಿ" ಎಂದು ಸವಾಲು ಹಾಕಿದ್ದಾರೆ.
ಥಾಣೆಯ ಕಲ್ಯಾಣ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ ನಂತರ, ಜೈಲಿನಿಂದ ಬಿಡುಗಡೆಯಾಗಿ ಕಲಬುರಗಿಗೆ ಆಗಮಿಸಿದ ಕಣ್ಣಿ, ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಬಂಧನದ ಹಿಂದಿನ ಘಟನೆಯನ್ನು ವಿವರಿಸಿದರು.
"ಪೊಲೀಸರೇ ಡ್ರಗ್ಸ್ ಇಟ್ಟು ಸಿಲುಕಿಸಿದ್ದಾರೆ"
"ನಾನು ನನ್ನ ಸ್ನೇಹಿತ ಸಯ್ಯದ್ ಇರ್ಫಾನ್ ಜೊತೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಹೋಗಿದ್ದೆ. ಆ ಸಮಯದಲ್ಲಿ ಇರ್ಫಾನ್ ಅವರ ಸಂಬಂಧಿಯಾದ ತೌಸಿಫ್ ಎಂಬಾತ ನಮ್ಮನ್ನು ಒಂದು ಲಾಡ್ಜ್‌ಗೆ ಕರೆದ. ನಾವು ಅಲ್ಲಿಗೆ ಹೋದ ಕೆಲವೇ ನಿಮಿಷಗಳಲ್ಲಿ ಪೊಲೀಸರು ದಾಳಿ ನಡೆಸಿದರು," ಎಂದು ಕಣ್ಣಿ ಹೇಳಿದರು.
"ಪೊಲೀಸರು ಬೇರೊಂದು ಪ್ರಕರಣದಲ್ಲಿ ಕಳೆದ ಮೂರು ತಿಂಗಳಿಂದ ತೌಸಿಫ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಆತನನ್ನು ಬಂಧಿಸಲು ಬಂದಾಗ ನಾವು ಅವರ ಕೈಗೆ ಸಿಕ್ಕಿಹಾಕಿಕೊಂಡೆವು. ನಮ್ಮ ಬಳಿ ಯಾವುದೇ ನಿಷೇಧಿತ ಸಿರಪ್ ಬಾಟಲಿಗಳು ಸಿಕ್ಕಿಲ್ಲ. ಪೊಲೀಸರೇ ತಮ್ಮ ವಾಹನದಿಂದ 120 ಎನ್-ರೆಕ್ಸ್ ಸಿರಪ್ ಬಾಟಲಿಗಳನ್ನು ತಂದು ತೌಸಿಫ್‌ನ ಬೈಕ್ ಮೇಲೆ ಇಟ್ಟು ಫೋಟೋ ತೆಗೆದು, ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ" ಎಂದು ಲಿಂಗರಾಜ್ ಕಣ್ಣಿ ಗಂಭೀರ ಆರೋಪ ಮಾಡಿದ್ದಾರೆ.