ಅಹಮದಾಬಾದ್ ವಿಮಾನ ದುರಂತ: ಹೆಣದ ಮೇಲೆ ರಾಜಕೀಯ ಮಾಡಲ್ಲ, ಎಂದ ಡಿ.ಕೆ. ಶಿವಕುಮಾರ್

ಅಹಮದಾಬಾದ್ ವಿಮಾನ ಅಪಘಾತದಂತಹ ದುರಂತ ದೇಶದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿ ಎಲ್ಲಿಯೂ ನಡೆಯಬಾರದು. ಈ ದುರಂತದಲ್ಲಿ ಅನೇಕರು ಸುಟ್ಟುಹೋಗಿದ್ದಾರೆ. ಆ ದುರಂತದ ಸ್ಥಳ ನೋಡಿದರೆ ಆಘಾತವಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.;

Update: 2025-06-16 09:24 GMT

ಡಿ.ಕೆ ಶಿವಕುಮಾರ್‌

ಅಹಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ವಿಮಾನ ದುರಂತದ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಹೆಣದ ಮೇಲೆ ರಾಜಕೀಯ ಮಾಡುವುದು ಏನಿದ್ದರೂ ಬಿಜೆಪಿ ಹಾಗೂ ಜೆಡಿಎಸ್ ಕೆಲಸ. ನಾವು ಅವರಂತೆ ನೀಚ ರಾಜಕೀಯ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸೋಮವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಕುಮಾರ್, "ಅಹಮದಾಬಾದ್ ವಿಮಾನ ಅಪಘಾತದಂತಹ ದುರಂತ ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಲ್ಲಿ ಎಲ್ಲಿಯೂ ನಡೆಯಬಾರದು. ಈ ದುರಂತದಲ್ಲಿ ಅನೇಕರು ಸುಟ್ಟು ಹೋಗಿದ್ದಾರೆ. ಆ ದುರಂತದ ಸ್ಥಳ ನೋಡಿದರೆ ಆಘಾತವಾಗುತ್ತದೆ. ಅಕಸ್ಮಾತ್ 500 ಮೀಟರ್ ಮುಂದಕ್ಕೆ ಹೋಗಿ ವಿಮಾನ ಅಪ್ಪಳಿಸಿದ್ದರೂ ಸಾವಿರಾರು ಮಂದಿಯ ಜೀವ ಹಾನಿಯಾಗುತ್ತಿತ್ತು" ಎಂದು ಆತಂಕ ವ್ಯಕ್ತಪಡಿಸಿದರು.

ಗಾಯಾಳುಗಳ ಭೇಟಿ ಮತ್ತು ಸಾಂತ್ವನ

ದುರಂತದಲ್ಲಿ ವೈದ್ಯಕೀಯ ಹಾಸ್ಟೆಲ್ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಕೆಲವು ವಿದ್ಯಾರ್ಥಿಗಳಿಗೆ ಮಾನಸಿಕ ಆಘಾತವಾಗಿದೆ ಎಂದು ಶಿವಕುಮಾರ್ ತಿಳಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಾವು ಕೆಲವರನ್ನು ಭೇಟಿ ಮಾಡಿ ಮಾತನಾಡಿದೆವು. ಈ ಅಪಘಾತ ಕುರಿತು ಬ್ಲಾಕ್ ಬಾಕ್ಸ್ ತನಿಖೆ ವರದಿ ಬರಬೇಕಾಗಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಅಲ್ಲಿ ಹೋಗಿ ಸಾಂತ್ವನ ಹೇಳಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಸಚಿವರ ಟೀಕೆಗೆ ಡಿ.ಕೆ. ಶಿವಕುಮಾರ್ ನಕಾರ

ಈ ಘಟನೆ ನಂತರ ವಿಮಾನಯಾನ ಸಚಿವರ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮೂಡುತ್ತಿವೆ ಎಂದು ಪತ್ರಕರ್ತರು ಕೇಳಿದಾಗ, ಡಿ.ಕೆ. ಶಿವಕುಮಾರ್, "ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಹೆಣದ ಮೇಲೆ ರಾಜಕೀಯ ಮಾಡುವುದೇ ಕೆಲಸ. ನಾವು ಹಳೇ ಪ್ರಕರಣ ಹಾಗೂ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಟೀಕೆ ಮಾಡಬಹುದು. ಆದರೆ ನಾವು ಅವರ ಮಟ್ಟಕ್ಕೆ ಇಳಿಯುವುದಿಲ್ಲ. ಈ ವಿಚಾರದಲ್ಲಿ ಅನೇಕ ತಾಂತ್ರಿಕ ಅಂಶಗಳಿವೆ. ನಾನು ಅವುಗಳ ತಜ್ಞನಲ್ಲ. ಈ ಎಲ್ಲಾ ವಿಚಾರವಾಗಿ ಚರ್ಚೆ ಆಗುತ್ತಿದೆ. ಆದರೆ ಈ ವಿಚಾರವನ್ನು ರಾಜಕೀಯಗೊಳಿಸುವ ವ್ಯಕ್ತಿ ನಾನಲ್ಲ. ಈ ಸಮಯದಲ್ಲಿ ಕೇಂದ್ರ ಸಚಿವರ ಬಗ್ಗೆ ಟೀಕೆ ಮಾಡುವುದಿಲ್ಲ. ಇದು ದೇಶದ ಗಂಭೀರ ವಿಚಾರ" ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ

ರಾಜ್ಯ ಸರ್ಕಾರ ವಸೂಲಿ ಮಾಡುತ್ತಿರುವ ತೆರಿಗೆ ನೋಡಿದರೆ ನನ್ನ ಸರ್ಕಾರ ಇದ್ದಿದ್ದರೆ ಗೃಹಲಕ್ಷ್ಮಿಗೆ 5 ಸಾವಿರ ಕೊಡುತ್ತಿದ್ದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಡಿ.ಕೆ. ಶಿವಕುಮಾರ್, "ಬಹಳ ಸಂತೋಷ. ಅವರು ಚೆನ್ನಾಗಿ ಆರೋಗ್ಯಕರವಾಗಿರಲಿ" ಎಂದು ಪ್ರತಿಕ್ರಿಯಿಸಿದರು. 

Tags:    

Similar News