ಸಿಎಂ ಬದಲಾವಣೆ ವಿಚಾರ|ಡಿಕೆಶಿ ಬೆಂಬಲಿಗರ ʼನವೆಂಬರ್ ಕ್ರಾಂತಿʼಯ ಹೇಳಿಕೆ ಸೃಷ್ಟಿಸಿದ ಸಂಚಲನ
ಸಿಎಂ ಸಿದ್ದರಾಮಯ್ಯ ಅವರು ಇನ್ನೆರಡೂವರೆ ವರ್ಷ ನಾನೇ ಸಿಎಂ ಎಂದು ಪ್ರಕಟಿಸುವ ಮೂಲಕ ಸಿಎಂ ಬದಲಾವಣೆ ಕೂಗು ಎಬ್ಬಿಸಿದ್ದವರಿಗೆ ತಿರುಗೇಟು ನೀಡಿದ್ದರು.
ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಹೈಕಮಾಂಡ್ ಆಕ್ರೋಶದ ನಂತರ ʼಸೆಪ್ಟೆಂಬರ್ ಕ್ರಾಂತಿʼಯ ಹೇಳಿಕೆಗಳು ತಣ್ಣಗಾದರೂ ಈಗ ನವೆಂಬರ್ ಕ್ರಾಂತಿಯ ಮಾತುಗಳು ರಾಜಕೀಯ ವಲಯದಲ್ಲಿ ಬಿಸಿಯೇರಿಸುತ್ತಿವೆ.
ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹಾಗೂ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಬ್ಯಾಟ್ ಬೀಸಿದ್ದು, ನವೆಂಬರ್ ತಿಂಗಳಲ್ಲಿ ʼಸಿಎಂ ಬದಲಾವಣೆʼ ಹೇಳಿಕೆಗಳು ತೀವ್ರ ಕುತೂಹಲ ಮೂಡಿಸಿವೆ.
ಕುಣಿಗಲ್ ಶಾಸಕರು ಹೇಳಿದ್ದೇನು?
"ಕಳೆದ ವಿಧಾನಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 140 ಸ್ಥಾನ ಗೆಲ್ಲುವಲ್ಲಿ ಡಿ.ಕೆ.ಶಿವಕುಮಾರ್ ಅವರ ಶ್ರಮವಿದೆ. ಅವರು ಒಂದಲ್ಲ, ಒಂದು ದಿನ ಸಿಎಂ ಆಗಲಿದ್ದಾರೆ ಎಂಬ ವಿಶ್ವಾಸವಿದೆ. ಡಿಸಿಎಂ ಡಿ.ಕೆ.ಶಿ ಅವರು ನನ್ನ ರಾಜಕೀಯ ಗುರು, ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ಸಾಕಷ್ಟು ಕಾರ್ಯಕರ್ತರು ಆಪೇಕ್ಷೆ ಪಡುತ್ತಿದ್ದಾರೆ" ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, "ಡಿ.ಕೆ. ಶಿವಕುಮಾರ್ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಹೈಕಮಾಂಡ್ ಚಿಂತನೆ ಮಾಡಬೇಕು. ಕಾರ್ಯಕರ್ತರು ಹೈಕಮಾಂಡ್ ನಿರ್ಧಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಕೆಲಸದಲ್ಲಿ ನಂಬಿಕೆ ಇಟ್ಟವರು. ಬೆಳಿಗ್ಗೆ ೮ ರಿಂದ ಮಧ್ಯರಾತ್ರಿವರೆಗೂ ದುಡಿಯುತ್ತಾರೆ. ಅವರಿಗೆ ಭಗವಂತನ ಆಶೀರ್ವಾದ ಇರುವುದರಿಂದ ಸಿಎಂ ಆಗೇ ಆಗುತ್ತಾರೆ" ಎಂದು ರಂಗನಾಥ್ ತಿಳಿಸಿದ್ದಾರೆ.
ಶಿವರಾಮೇಗೌಡ ಹೇಳಿದ್ದೇನು?
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರು, ಡಿಕೆಶಿ ಅವರು ಸಿಎಂ ಆಗಬೇಕೆಂಬುದರಲ್ಲಿ ಎರಡು ಮಾತಿಲ್ಲ, ನವೆಂಬರ್ ತಿಂಗಳಲ್ಲಿ ಶೇ 100ರಷ್ಟು ಡಿ.ಕೆ.ಶಿವಕುಮಾರ್ ಸಿಎಂ ಆಗುವುದು ನಿಶ್ಚಿತ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಾಕಷ್ಟು ಶ್ರಮ ವಹಿಸಿದ ಅವರನ್ನು ಸಿಎಂ ಮಾಡಬೇಕೆಂಬುದು ನಮ್ಮೆಲ್ಲರ ಆಪೇಕ್ಷೆ. ಈ ಕುರಿತು ಹೈಕಮಾಂಡ್ ನಿರ್ಧಾರ ಮಾಡಬೇಕಿದೆ. ನವೆಂಬರ್ ತಿಂಗಳಲ್ಲಿ ಸಿಎಂ ಬದಲಾವಣೆ ವಿಚಾರ ಇತ್ಯರ್ಥವಾಗಲಿದೆ ಎಂದು ಹೇಳಿದ್ದಾರೆ.
ಹೈಕಮಾಂಡ್ ಎಚ್ಚರಿಕೆ ಕಡೆಗಣನೆ
ಸಿಎಂ ಬದಲಾವಣೆ ವಿಚಾರದ ಕುರಿತು ಯಾರೂ ಕೂಡ ಬಹಿರಂಗವಾಗಿ ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದ್ದರೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹಾಗೂ ಕುಣೀಗಲ್ ಶಾಸಕ ಡಾ. ರಂಗನಾಥ್ ಅವರ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತಂದಿವೆ.
ಸೆಪ್ಟೆಂಬರ್ ತಿಂಗಳಲ್ಲಿ ದೊಡ್ಡ ಕ್ರಾಂತಿಯಾಗಲಿದೆ ಎಂದು ಡಿ.ಕೆ. ಶಿವಕುಮಾರ್ ಬೆಂಬಲಿಗರು ಹೇಳಿಕೆ ನೀಡಿದ್ದರು. ಆಗ ಸಿಎಂ ಬದಲಾವಣೆ ಸಾಧ್ಯತೆ ಕುರಿತ ಚರ್ಚೆ ಜೋರಾಗಿ ನಡೆದಿತ್ತು. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬೆಂಬಗಲಿಗರ ಮಧ್ಯೆ ಗುಂಪುಗಾರಿಕೆ ಶುರುವಾಗಿತ್ತು. ಇದನ್ನು ಗಮನಿಸಿದ ಹೈಕಮಾಂಡ್ ತುರ್ತು ಸಭೆ ನಡೆಸಿ ಯಾರೂ ಕೂಡ ಇನ್ನು ಮುಂದೆ ಸಿಎಂ ಬದಲಾವಣೆ ವಿಚಾರ ಮಾತನಾಡಬಾರದು ಎಂದು ಸೂಚಿಸಿತ್ತು.
ಚರ್ಚೆಗೆ ತೆರೆ ಎಳೆದಿದ್ದ ಸಿಎಂ
ಈ ಮಧ್ಯೆ, ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ನಾನೇ ಸಿಎಂ ಎಂದು ಹೇಳುವ ಮೂಲಕ ಸಿಎಂ ಬದಲಾವಣೆಯ ಕೂಗು ಎಬ್ಬಿಸಿದ್ದವರಿಗೆ ತಿರುಗೇಟು ನೀಡಿದ್ದರು. ಡಿ.ಕೆ. ಶಿವಕುಮಾರ್ ಅವರು ಕೂಡ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಬೇಸರದಿಂದಲೇ ಹೇಳಿದ್ದರು.
ಇದೀಗ ಎಲ್.ಆರ್.ಶಿವರಾಮೇಗೌಡ ಅವರು “ನವಂಬರ್ ಕ್ರಾಂತಿ” ಕುರಿತು ಹೇಳಿಕೆ ನೀಡಿರುವುದು ಮತ್ತೆ ಸಿಎಂ ಬದಲಾವಣೆ ವಿಚಾರವನ್ನು ಮುನ್ನೆಲೆಗೆ ತಂದು ಬಿಟ್ಟಿದೆ.
ಕಾಂಗ್ರೆಸ್ ನಾಯಕರ ಈ ಹೇಳಿಕೆಗಳು ಮತ್ತೆ ಪಕ್ಷ ಹಾಗೂ ಸರ್ಕಾರದಲ್ಲಿ ಕೋಲಾಹಲ ಸೃಷ್ಟಿಸಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿಂದೆ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ್ದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಡಿ.ಕೆ.ಶಿವಕುಮಾರ್ ಅವರು ಶೋಕಾಷ್ ನೋಟಿಸ್ ನೀಡಿದ್ದರು. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೂ ಖಡಕ್ ಸೂಚನೆ ನೀಡಲಾಗಿತ್ತು. ಇಂತಹ ಸಂದರ್ಭದಲ್ಲಿ ಎಲ್.ಆರ್. ಶಿವರಾಮೇಗೌಡ ಹಾಗೂ ಶಾಸಕ ಡಾ.ರಂಗನಾಥ್ ಅವರು ಹೈಕಮಾಂಡ್ ಸೂಚನೆಗೆ ವಿರುದ್ಧವಾಗಿ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.