Congress Infighting | ಚುನಾವಣಾ ನಾಯಕತ್ವ ನನ್ನದೇ: ಡಿಕೆ ಶಿವಕುಮಾರ್‌ ಪುನರುಚ್ಚಾರ

ಸಿಎಂ ಮತ್ತು ಕೆಪಿಸಿಸಿ ಗಾದಿಯ ಮುಸುಕಿನ ಹಗ್ಗಜಗ್ಗಾಟ ದಿನದಿಂದ ದಿನಕ್ಕೆ ಬೇರೆ ಬೇರೆ ರೂಪದಲ್ಲಿ ಬಹಿರಂಗ ಪ್ರದರ್ಶನಕ್ಕೆ ಅಣಿಯಾಗುತ್ತಿರುವ ಸೂಚನೆಗಳು ದಟ್ಟವಾಗುತ್ತಿವೆ.;

Update: 2025-02-25 14:07 GMT

ಒಂದೆಡೆ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಪಟ್ಟದ ಫೈಟ್ ಮುಂದುವರಿದಿದ್ದರೆ, ಮತ್ತೊಂದು ಕಡೆ ಆಡಳಿತರೂಢ ಕಾಂಗ್ರೆಸ್ನಲ್ಲಿ ನಾಯಕತ್ವದ ಹಗ್ಗಜಗ್ಗಾಟ ಮುಂದಿನ ಚುನಾವಣೆಯ ಹೊಣೆಗಾರಿಕೆಯ ವರೆಗೆ ಹಿಗ್ಗಿದೆ.

ಕಳೆದ ವಾರವಷ್ಟೇ “ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ, ಅವರೇ ನಮ್ಮ ನಾಯಕರು. ಎಲ್ಲಾ ಚುನಾವಣೆಗಳಿಗೂ ಅವರೇ ಬೇಕು. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಯಿಂದ ಸಂಸತ್ ಚುನಾವಣೆಯವರೆಗೆ ಅವರೇ ಬೇಕು. ಅವರ ನಾಯಕತ್ವದಲ್ಲೇ ನಾವು ಚುನಾವಣೆ ಎದುರಿಸಬೇಕು” ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್, ಅದಾಗಿ ಮೂರೇ ದಿನದಲ್ಲೇ ರಾಜ್ಯ ಸರ್ಕಾರಿ ನೌಕರರ ಸಮಾವೇಶದಲ್ಲಿ ಯೂ ಟರ್ನ್ ಹೊಡೆದಿದ್ದರು.

ಒಪಿಎಸ್ ವಿಷಯ ಪ್ರಸ್ತಾಪಿಸಿದ ಡಿಕೆ ಶಿವಕುಮಾರ್ ಪರ ನೌಕರರು ಘೋಷಣೆ ಕೂಗಿದಾಗ, ಅವರು “ನಾನು ಮುಂದಿನ ಬಾರಿ ಚುನಾವಣೆಗೆ ನಿಂತಾಗ, ನನ್ನ ನಾಯಕತ್ವದಲ್ಲೇ ಚುನಾವಣೆ ನಡೆದಾಗ ದಯವಿಟ್ಟು ಈ ಪದವನ್ನು ಉಪಯೋಗಿಸಿ. ನಾನು ವಿಧಾನಸೌಧದಲ್ಲಿ ಇನ್ನೂ ಎಂಟತ್ತು ವರ್ಷ ಇರುವವನೇ..” ಎನ್ನುವ ಮೂಲಕ ಮುಂದಿನ ಚುನಾವಣೆಗೆ ತಮ್ಮದೇ ನಾಯಕತ್ವ ಎಂಬ ಮಾತನ್ನು ಆಡಿದ್ದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ ಕೆ ಶಿವಕುಮಾರ್ ಅವರನ್ನು ಬದಲಾಯಿಸಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ಸಿನ ಹಿರಿಯ ದಲಿತ ಸಚಿವರು ಸೇರಿದಂತೆ ಸಿದ್ದರಾಮಯ್ಯ ಅವರ ಆಪ್ತ ವಲಯದ ಹಲವರು ದೆಹಲಿಯಾತ್ರೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿತ್ತು.

ಯಾವ ಹುದ್ದೆಯಲ್ಲಿದ್ದರೂ ನನ್ನದೇ ನಾಯಕತ್ವ

ಇದೀಗ ಮತ್ತೊಮ್ಮೆ ಆ ಮಾತನ್ನು ಪುನರುಚ್ಚರಿಸಿರುವ ಡಿ ಕೆ, “ನಾನು ಯಾವುದೇ ಹುದ್ದೆಯಲ್ಲಿದ್ದರೂ 2028ರ ವಿಧಾನಸಭಾ ಚುನಾವಣೆಗೆ ನನ್ನದೇ ನಾಯಕತ್ವ. ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವುದು ನನ್ನ ಕರ್ತವ್ಯ” ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಸೋಮವಾರ ಮಾತನಾಡಿರುವ ಅವರು, “ಹುದ್ದೆಗಳು ಪಕ್ಷವನ್ನು ಮುನ್ನಡೆಸುವಂತೆ ಮಾಡುವುದಿಲ್ಲ. ಆದರೆ, ಏನೇ ಆಗಬಹುದು, ಅದು ಮುಖ್ಯವಲ್ಲ. ಪಕ್ಷ ಕೊಟ್ಟಿರುವ ಶಕ್ತಿಯಿಂದ ನಾವು ನಾಯಕರಾಗಿದ್ದು, ಕಾಂಗ್ರೆಸ್ಸಿಗನಾಗಿ ಪಕ್ಷಕ್ಕೆ ಶಕ್ತಿ ತುಂಬಿ ಮುನ್ನಡೆಸುವುದು ಮುಖ್ಯ” ಎಂದು ಹೇಳಿದ್ದಾರೆ.

ಈ ನಡುವೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ವಿಷಯದಲ್ಲಿ ಪ್ರಮುಖವಾಗಿ ದನಿ ಎತ್ತಿರುವ ಸಚಿವ ಡಾ ಜಿ ಪರಮೇಶ್ವರ್ ಅವರು ಎರಡು ದಿನಗಳ ಹಿಂದೆ ಕೊರಟಗೆರೆಯ ಕಾರ್ಯಕರ್ತರ ಸಮಾವೇಶಲ್ಲಿ ಮಾತನಾಡಿ, ನಿಮ್ಮ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಸಮಯ ಯಾರ ಕೈಯಲ್ಲೂ ಇಲ್ಲ, ನೀವು ಎಲ್ಲರೂ ದೊಡ್ಡ ಮನಸ್ಸು ಮಾಡಿ ಒಕ್ಕೊರಲಿನಿಂದ ಹೇಳಿದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದರು.

ಸರಣಿ ಸಮಾವೇಶಕ್ಕೆ ಬ್ರೇಕ್

ಕಳೆದ ತಿಂಗಳು ದಲಿತ ಸಚಿವರು ಮತ್ತು ಶಾಸಕರಿಗಾಗಿ ತಾವು ಆಯೋಜಿಸಿದ್ದ ಭೋಜನಕೂಟಕ್ಕೆ ಕೊನೇ ಕ್ಷಣದಲ್ಲಿ ಪಕ್ಷದ ಹೈಕಮಾಂಡ್ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಡಾ ಪರಮೇಶ್ವರ್ ಅವರ ಈ ಹೇಳಿಕೆ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ನೀಡಿದೆ.

ಈ ನಡುವೆ ಹಾಸನದಲ್ಲಿ ಆಯೋಜಿಸಲು ನಿರ್ಧರಿಸಿದ್ದ ಸ್ವಾಭಿಮಾನ ಸಮಾವೇಶ, ದಲಿತ ಸಚಿವರು ಯೋಜಿಸಿದ್ದ ದಲಿತ ಸಮುದಾಯಗಳ ಸಮಾವೇಶಗಳಿಗೆ ಬ್ರೇಕ್ ಹಾಕಿದ್ದ ಹೈಕಮಾಂಡ್, ಇದೀಗ ಶೋಷಿತರ ಹೆಸರಲ್ಲಿ ಆಯೋಜಿಸಲು ಯೋಜಿಸಿದ್ದ ಸಮಾವೇಶಕ್ಕೂ ಬ್ರೇಕ್ ಹಾಕಿದೆ ಎನ್ನಲಾಗುತ್ತಿದೆ.

ಈ ಎಲ್ಲಾ ʼಬ್ರೇಕ್ʼಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರ ಪ್ರಭಾವವೇ ಕೆಲಸ ಮಾಡಿದೆ ಎಂಬ ಮಾತು ದಲಿತ ಮುಖಂಡರು ಹಾಗೂ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದ್ದು, ಸಿಎಂ ಮತ್ತು ಕೆಪಿಸಿಸಿ ಗಾದಿಯ ಮುಸುಕಿನ ಹಗ್ಗಜಗ್ಗಾಟ ದಿನದಿಂದ ದಿನಕ್ಕೆ ಬೇರೆ ಬೇರೆ ರೂಪದಲ್ಲಿ ಬಹಿರಂಗ ಪ್ರದರ್ಶನಕ್ಕೆ ಅಣಿಯಾಗುತ್ತಿರುವ ಸೂಚನೆಗಳು ದಟ್ಟವಾಗುತ್ತಿವೆ.

Tags:    

Similar News