Congress Unrest | ಬಿಜೆಪಿ ಜೊತೆ ಡಿಕೆಶಿ ಸಖ್ಯ; ಕಾಂಗ್ರೆಸ್ಸಿಗರ ನಿದ್ದೆಗೆಡಿಸಿ ಡಿ.ಕೆ ಶಿವಕುಮಾರ್‌ ಜಾಗರಣೆ

ಸಿಎಂ ಗಾದಿ ಕೈತಪ್ಪಿದ್ದರಿಂದ ನಿರಾಶರಾಗಿ ಬಿಜೆಪಿಯತ್ತ ಡಿ.ಕೆ.ಶಿವಕುಮಾರ್‌ ಒಲವು ತೋರುತ್ತಿರಬಹುದು ಎಂಬ ಚರ್ಚೆಗಳು ಗರಿಗೆದರಿವೆ. ಹಾಗಾಗಿ ಬಿಜೆಪಿ ಹೈಕಮಾಂಡ್‌ ನಾಯಕರೊಂದಿಗೆ ಶಿವರಾತ್ರಿ ಜಾಗರಣೆ ಮಾಡಿದ್ದು ಡಿಕೆ ಆದರೂ, ನಿದ್ದೆಗೆಟ್ಟಿರುವುದು ಮಾತ್ರ ಇಡೀ ಕಾಂಗ್ರೆಸ್‌ ಪಾಳೆಯ.;

Update: 2025-02-27 14:19 GMT
ಡಿ ಕೆ ಶಿವಕುಮಾರ್

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಸಿಎಂ ಸಿದ್ದರಾಮಯ್ಯ ಬಣದ ಸಚಿವರ ಸೊಲ್ಲಡಗಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೊಸ ವರಸೆ ಆರಂಭಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ʼಹಿಂದುʼ ದಾಳ ಉರುಳಿಸುವ ಮೂಲಕ ಅಹಿಂದ ವರ್ಗದ ಸಚಿವರು ಹಾಗೂ ತಮ್ಮ ನಾಯಕತ್ವ ವಿರೋಧಿಸುವವರಿಗೆ ಟಾಂಗ್ ನೀಡಿರುವ ಡಿ.ಕೆ. ಶಿವಕುಮಾರ್‌, ಬುಧವಾರ ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ತಮಿಳುನಾಡಿನ ಕೊಯಮತ್ತೂರಿನ ಇಶಾ ಫೌಂಡೇಷನ್ ಶಿವರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಪಮಾನ ಮಾಡಿದ ಸದ್ಗುರು ಜಗ್ಗಿ ವಾಸುದೇವ್‌ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡ ಡಿ.ಕೆ. ಶಿವಕುಮಾರ್ ನಿಲುವಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿ ವಿ ಮೋಹನ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಅವರು, ಹಲವು ಗುರುತರ ಆರೋಪಗಳನ್ನು ಹೊತ್ತಿರುವ ಸದ್ಗುರು ಜಗ್ಗಿ ವಾಸುದೇವ್ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವುದು ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

ಬಿಜೆಪಿಯತ್ತ ಡಿಕೆಶಿ ಒಲವು?

ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದರೆ ದೇಶದ ಬಡತನ ನೀಗುವುದಿಲ್ಲ ಎಂದು ಉತ್ತರಪ್ರದೇಶ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದ್ದರು. ಇದು ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ಜಟಾಪಟಿಗೆ ಕಾರಣವಾಗಿತ್ತು.

ಬಿಜೆಪಿ ಮತ್ತು ಅದರ ಸಂಘಪರಿವಾರದ ನಾಯಕರು ಆ ಹೇಳಿಕೆಯ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರನ್ನು ಹೀನಾಯವಾಗಿ ಟೀಕಿಸಿದ್ದರೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಮಹಾಕುಂಭ ಮೇಳಕ್ಕೆ ತೆರಳಿ, ಅಲ್ಲಿನ ವ್ಯವಸ್ಥೆಗಳ ಕುರಿತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.

ಅದರ ಬೆನ್ನಲ್ಲೇ, ಮಹಾ ಶಿವರಾತ್ರಿಯಂದು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಷನ್ನಿನ ಶಿವರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಆ ಬಗ್ಗೆ ಟೀಕೆಗಳಿಗೆ ಪ್ರತಿಕ್ರಿಯಿಸುತ್ತಾ, ನಾನು ಹಿಂದೂ ಆಗಿ ಹುಟ್ಟಿದ್ದೇನೆ. ಹಿಂದೂ ಆಗಿಯೇ ಇರುತ್ತೇನೆ ಎಂಬ ಹೇಳಿಕೆ ನೀಡಿರುವುದು ಕುತೂಹಲ ಕೆರಳಿಸಿದೆ.

ಸಿಎಂ ಗಾದಿ ಕೈತಪ್ಪಿದ್ದರಿಂದ ನಿರಾಶರಾಗಿ ಬಿಜೆಪಿಯತ್ತ ಒಲವು ತೋರುತ್ತಿರಬಹುದು ಎಂಬ ಚರ್ಚೆಗಳು ಪಕ್ಷದಲ್ಲಿ ನಡೆಯುತ್ತಿವೆ. ಈ ಮೊದಲು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಸಂದರ್ಭದಲ್ಲೂ ಡಿ.ಕೆ.ಶಿವಕುಮಾರ್ ಅವರು ಪಕ್ಷನಿಷ್ಠೆ ಬದಲಿಸಿರಲಿಲ್ಲ. ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ, ಸರ್ಕಾರ ರಚನೆ ಕಸರತ್ತು ಆರಂಭವಾದಾಗ ಡಿ.ಕೆ ಶಿವಕುಮಾರ್‌ ಅವರನ್ನೇ ಟ್ರಬಲ್‌ ಶೂಟರ್‌ ಆಗಿ ವರಿಷ್ಠರು ಕಳುಹಿಸಿಕೊಡುತ್ತಿದ್ದರು. ಈಗ ಸಿಎಂ ಬದಲಾವಣೆ ವಿಚಾರದಲ್ಲಿ ಯಾವುದೇ ಭರವಸೆ ಸಿಗದಿರುವುದು ಶಿವಕುಮಾರ್ ಅವರಲ್ಲಿ ಬೇಸರ ತರಿಸಿದ್ದು, ಬಿಜೆಪಿಯತ್ತ ಚಿತ್ತ ಹರಿಸುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿಯೇ ಕೇಳಬರುತ್ತಿವೆ.

ಸಿಎಂ ಆಪ್ತರಿಗೆ ತಿರುಗೇಟು

ಮುಂಬರುವ ಚುನಾವಣೆ ನನ್ನ ನಾಯಕತ್ವದಲ್ಲೇ ನಡೆಯಲಿದೆ ಎಂದು ಹೇಳುವ ಮೂಲಕ ಡಿ.ಕೆ. ಶಿವಕುಮಾರ್ ನೀಡಿರುವ ತಿರುಗೇಟಿಗೆ ಸಿಎಂ ಸಿದ್ದರಾಮಯ್ಯ ಬಣದ ಸಚಿವರು ಕಂಗಾಲಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ಆಗ್ರಹಿಸಿದ್ದ ಸಚಿವರಿಗೆ ಶಿವಕುಮಾರ್‌ ಅವರ ಈ ಹೊಸ ವರಸೆ ಆತಂಕ ಸೃಷ್ಟಿಸಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಸ್ವಸಾಮರ್ಥ್ಯದ ಮೇಲೆ ಅಧಿಕಾರಕ್ಕೆ ತಂದೇ ತರುತ್ತೇನೆ. ಮುಂದಿನ ಅವಧಿಗೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿರುವುದು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದೆ. ಒಂದೆಡೆ ಬಿಜೆಪಿ ಪರವಾದ ಹೇಳಿಕೆಗಳು, ಮತ್ತೊಂದೆಡೆ ಮುಂಬರುವ ಚುನಾವಣೆಯ ನಾಯಕತ್ವ ವಹಿಸುವ ಹೇಳಿಕೆಗಳು ರಾಜ್ಯ ಕಾಂಗ್ರೆಸ್‌ ಮಾತ್ರವಲ್ಲದೆ ಎಐಸಿಸಿ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ʼನನ್ನನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿರುವುದು ಮನೆಯಲ್ಲಿ ಕುಳಿತುಕೊಳ್ಳಲು ಅಲ್ಲ. ನನ್ನ ಶಕ್ತಿ, ವರ್ಚಸ್ಸು ಏನೆಂಬುದು ಎಲ್ಲರಿಗೂ ಗೊತ್ತಿದೆ. ದೆಹಲಿ, ಆಂಧ್ರ, ತೆಲಂಗಾಣ, ಹಿಮಾಚಲ ಪ್ರದೇಶಗಳಿಗೆ ಸುಮ್ಮನೆ ಕಳುಹಿಸಲ್ಲ. 1990 ರಿಂದ ಸಚಿವನಾಗಿದ್ದೇನೆ. ಪಕ್ಷ ನನಗೆ ಹಲವು ಜವಾಬ್ದಾರಿಗಳನ್ನು ನೀಡಿ ನಾಯಕನನ್ನಾಗಿ ಬೆಳೆಸಿದೆ. ನನಗೂ ವರ್ಚಸ್ಸಿದೆ. ನಾಯಕತ್ವದ ಗುಣ ಇದೆʼ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್‌, ಸಿಎಂ ಆಪ್ತ ಸಚಿವರ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. 

ಸಿಎಂ ಆಪ್ತ ಸಚಿವರ ವಿರುದ್ಧ ಪ್ರತಿದೂರು

ಸಿಎಂ ಸಿದ್ದರಾಮಯ್ಯ ಬಣದ ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಡಾ. ಜಿ ಪರಮೇಶ್ವರ್ ಅವರುಗಳು ಕೆಲ ದಿನಗಳ ಹಿಂದೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರಿಗೆ ಡಿ.ಕೆ. ಶಿವಕುಮಾರ್ ವಿರುದ್ಧ ದೂರು ಸಲ್ಲಿಸಿದ್ದರು.

ಆದರೆ, ಹೈಕಮಾಂಡ್ ಸಿಎಂ ಆಪ್ತ ಸಚಿವರ ದೂರಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. 

ಕಳೆದ ಸೋಮವಾರ ದೆಹಲಿಗೆ ತೆರಳಿದ್ದ ಡಿ.ಕೆ. ಶಿವಕುಮಾರ್ ಅವರು ವರಿಷ್ಠರನ್ನು ಭೇಟಿ ಮಾಡಿ, ಸಿಎಂ ಆಪ್ತ ಸಚಿವರ ವಿರುದ್ಧ ಪ್ರತಿದೂರು ನೀಡಿದ್ದರು. ಕೆಲ ಸಚಿವರ ಬಹಿರಂಗ ಹೇಳಿಕೆಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂದು ದೂರಿದ್ದರು ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್ ಭೇಟಿಯ ನಂತರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್ ಅವರು ಸಿಎಂ ಬಣದ ಸಚಿವರಿಗೆ ಬಹಿರಂಗವಾಗಿ ತಿರುಗೇಟು ನೀಡಿದ್ದರು. ನನ್ನ ನೇತೃತ್ವದಲ್ಲೇ ಮುಂಬರುವ ಚುನಾವಣೆ ನಡೆಯಲಿದೆ ಎಂದು ಘೋಷಿಸಿದ್ದರು. ಹೈಕಮಾಂಡ್ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಪ್ರಸ್ತಾಪ ಕೈಬಿಟ್ಟಿದ್ದು, ಡಿ.ಕೆ. ಶಿವಕುಮಾರ್ ಅವರನ್ನೇ ಮುಂದುವರಿಸಲು ತೀರ್ಮಾನಿಸಿದೆ ಎನ್ನಲಾಗಿದೆ.

ಬಿಜೆಪಿ ನಾಯಕರ ನ.16 ರ ಭವಿಷ್ಯ ಏನು?

ರಾಜ್ಯ ಕಾಂಗ್ರೆಸ್‌ನಲ್ಲಿ ನ.16 ರೊಳಗೆ ಮಹತ್ವದ ಬದಲಾವಣೆಗಳಾಗಲಿವೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈಚೆಗೆ ರಾಜ್ಯದ ರಾಜಕಾರಣದಲ್ಲಿ ನ.16 ರೊಳಗೆ ದೊಡ್ಡ ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದರು. ಈಗ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಕೂಡ ಇದೇ ಡೆಡ್ಲೈನ್ ಕುರಿತು ಪ್ರಸ್ತಾಪ ಮಾಡಿರುವುದು ಕುತೂಹಲ ಕೆರಳಿಸಿದೆ.

ಗುರುವಾರ(ಫೆ.27) ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್‌ ಅಶೋಕ್ ಅವರು, ಡಿ.ಕೆ. ಶಿವಕುಮಾರ್ ಅವರು ಮಹಾಕುಂಭಮೇಳ ಹಾಗೂ ಶಿವರಾತ್ರಿ ಕಾರ್ಯಕ್ರಮಕ್ಕೆ ತೆರಳಿದ್ದು ಅವರ ವೈಯಕ್ತಿಕ ವಿಷಯ. ಅವರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಮೊದಲು ಅವರನ್ನು ಕಾಂಗ್ರೆಸ್ ಪಕ್ಷ ಹೊರಗೆ ಹಾಕಲಿ. ಆಮೇಲೆ ನಾವು ಏನು ಮಾಡಬೇಕೆಂಬುದನ್ನು ನಿರ್ಧರಿಸುತ್ತೇವೆ. ನವೆಂಬರ್ ಡೆಡ್ಲೈನ್ ಬಗ್ಗೆ ನಾನು ಮೊದಲೇ ಡಿಕೆಶಿ ಅವರಿಗೆ ಹೇಳಿದ್ದೇನೆ. ನವೆಂಬರ್ ಜ್ಯೋತಿಷ್ಯ ಸುಳ್ಳಾದರೆ ಈ ಎಲ್ಲ ನಾಟಕಗಳನ್ನು ಆಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ನಾಯಕತ್ವದ ವಿಚಾರದಲ್ಲಿ ಸಿದ್ದರಾಮಯ್ಯ ಸಮರ್ಥರಲ್ಲ. ಅವರನ್ನು ಯಾವ ರಾಜ್ಯದಲ್ಲೂ ಮೂಸಿ ನೋಡುವುದಿಲ್ಲ. ಸಿದ್ದರಾಮಯ್ಯ ಮಾಸ್ ಲೀಡರ್ ಅಲ್ಲ ಎಂಬುದನ್ನು ಈಗಾಗಲೇ ಡಿ.ಕೆ. ಶಿವಕುಮಾರ್ ಅವರೇ ಸಾರಿ ಹೇಳಿದ್ದಾರೆ ಎಂದೂ ಅಶೋಕ್ ವ್ಯಂಗ್ಯವಾಡಿದ್ದಾರೆ.‌

ಒಂದು ಕಡೆ ಡಿ ಕೆ ಶಿವಕುಮಾರ್‌ ಅವರು ಬಿಜೆಪಿಯ ಹೈಕಮಾಂಡ್‌ ಅಮಿತ್‌ ಶಾ ಅವರೊಂದಿಗೆ ಶಿವರಾತ್ರಿ ಜಾಗರಣೆ ಮಾಡಿದ್ದಲ್ಲದೆ, ಅದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರೆ, ಮತ್ತೊಂದು ಕಡೆ ರಾಜ್ಯ ಬಿಜೆಪಿ ನಾಯಕರು ಸರದಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ನಡೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಶಿವರಾತ್ರಿಯ ಜಾಗರಣೆ ಕೇವಲ ಶಿವರಾತ್ರಿಯ ದಿನಕ್ಕಷ್ಟೇ ಅಲ್ಲದೆ, ಇನ್ನೂ ಕೆಲವು ದಿನ ಬಹಳಷ್ಟು ಮುಖಂಡರ ನಿದ್ದೆಗೆಡಿಸುವ ಸೂಚನೆಗಳಿವೆ.

Tags:    

Similar News