ಚನ್ನಪಟ್ಟಣದಲ್ಲಿ ದೇವೇಗೌಡರ ಕುಟುಂಬಕ್ಕೆ ಡಿಕೆಶಿ ರಣವೀಳ್ಯ? ಸೋದರನ ಸೋಲಿನ ಪ್ರತೀಕಾರಕ್ಕೆ ಬಂಡೆ ಸಜ್ಜು!

ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸುವ ಮೂಲಕ ಡಿ ಕೆ ಶಿವಕುಮಾರ್‌, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸೋದರ ಡಿ.ಕೆ. ಸುರೇಶ್‌ ಸೋಲಿಗೆ ಪ್ರತೀಕಾರ ತೀರಿಸಲು ರಾಜಕೀಯ ರಣವೀಳ್ಯ ನೀಡಿದ್ದಾರೆ!;

Update: 2024-06-19 12:23 GMT

ಮತ್ತೆ ಎಚ್‌.ಡಿ. ದೇವೇಗೌಡ ಕುಟುಂಬ ಮತ್ತು ಡಿ.ಕೆ. ಶಿವಕುಮಾರ್‌ ಕುಟುಂಬಗಳ ನಡುವೆ ರಾಜಕೀಯ ಕದನ ಆರಂಭವಾಗಲಿದೆ! ಈ ಬಾರಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಲೋಕಸಭಾ ಸದಸ್ಯರಾದ ಬಳಿಕ ತೆರವುಗೊಂಡಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮೂಲಕ ಈ ಕದನ ಕುತೂಹಲಕಾರಿ ತಿರುವು ಪಡೆದಿದೆ! ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸುವ ಮೂಲಕ ಡಿ ಕೆ ಶಿವಕುಮಾರ್‌, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸೋದರ ಡಿ.ಕೆ. ಸುರೇಶ್‌ ಸೋಲಿಗೆ ಪ್ರತೀಕಾರ ತೀರಿಸಲು ರಾಜಕೀಯ ರಣವೀಳ್ಯ ನೀಡಿದ್ದಾರೆ!

ಹಳೇಮೈಸೂರು ಭಾಗದಲ್ಲಿ ದೇವೇಗೌಡ ಕುಟುಂಬ ಮತ್ತು ಡಿಕೆಶಿ ಕುಟುಂಬದ ರಾಜಕೀಯ ಪಾರುಪತ್ಯಕ್ಕೆ ಜಿದ್ದಾಜಿದ್ದಿ ನಡೆದು ಇತ್ತೀಚಿಗಿನ ಲೋಕಸಭಾ ಚುನಾವಣೆಯಲ್ಲಿ ಶಿವಕುಮಾರ್‌ ನಿರಾಸೆ ಅನುಭವಿಸಿದ್ದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ವತಃ ಮಂಡ್ಯದಿಂದ ಗೆದ್ದರೆ,  ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಅವರ ಬಾವ (ದೇವೇಗೌಡರ ಅಳಿಯ) ಡಾ. ಸಿ.ಎನ್‌. ಮಂಜುನಾಥ್‌ ಬಿಜೆಪಿಯಿಂದ ಕಣಕ್ಕಿಳಿದು ನೇರವಾಗಿ ಡಿ.ಕೆ. ಶಿವಕುಮಾರ್‌ ಅವರ ಅಖಾಡದಲ್ಲಿ ಅವರ ಸೋದರ, ಮೂರು ಬಾರಿಯ ಸಂಸದ ಡಿ.ಕೆ. ಸುರೇಶ್‌ ಅವರನ್ನು ಸೋಲಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗರ ಪ್ರಾಂತ್ಯಗಳಲ್ಲಿ ಪ್ರಾಬಲ್ಯ ಮೆರೆದಿದ್ದ ಡಿ.ಕೆ. ಶಿವಕುಮಾರ್‌ ಅವರ ಪಾರಮ್ಯಕ್ಕೆ ತಡೆಯೊಡ್ಡಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟು ಎನ್‌ಡಿಎ ಸರ್ಕಾರದ ಮಂತ್ರಿಯಾಗಿರುವ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಜೆಡಿಎಸ್‌ನಿಂದ ಅವಕಾಶ ಕಲ್ಪಿಸಲು ಬಹುತೇಕ ಮುಂದಾಗಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಸಾರ್ವಜನಿಕವಾಗಿ ದುಃಖ ತೋಡಿಕೊಂಡಿದ್ದ ಉಪಮುಖ್ಯಮಂತ್ರಿ  ಶಿವಕುಮಾರ್‌, ತನಗಾದ ರಾಜಕೀಯ ಅವಮಾನಕ್ಕೆ ಪ್ರತೀಕಾರಕ್ಕೆ ಮತ್ತೆ ಮುಂದಾಗಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ತಾವೇ ಕಣಕ್ಕಿಳಿಯುವ ಒಲವು ವ್ಯಕ್ತಪಡಿಸಿರುವ ಡಿಕೆಶಿ, ಜನ ಒಲವು ತೋರಿದರೆ ಚನ್ನಪಟ್ಟಣದಲ್ಲಿ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ ಎಂದಿದ್ದಾರೆ. ಆ ಮೂಲಕ ನಿಖಿಲ್‌ ಕುಮಾರಸ್ವಾಮಿ ಒಂದು ವೇಳೆ ಸ್ಪರ್ಧಿಸಿದರೆ ಅವರನ್ನು ಸೋಲಿಸಿ, ಆ ಮೂಲಕ ತನ್ನಿಂದ ತೆರವಾಗುವ ಕನಕಪುರ ಕ್ಷೇತ್ರವನ್ನು ಸೋದರ ಡಿ.ಕೆ. ಸುರೇಶ್‌ ಅವರಿಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಆ ಮೂಲಕ ಒಂದೇ ಕಲ್ಲಿಗೆ ಎರಡು ಹಣ್ಣು ಗಳಿಸಲು ಡಿಕೆಶಿ ಯತ್ನಿಸುತ್ತಿದ್ದಾರೆ.  ೨೦೧೯ರ  ಮಂಡ್ಯ ಲೋಕಸಭಾ ಚುನಾವಣೆ, ೨೦೨೩ ರ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಸೋತಿದ್ದರು. ಅದಕ್ಕೆ ಡಿಕೆಶಿ ತಂತ್ರಗಾರಿಕೆಯೂ ಕಾರಣವಾಗಿತ್ತು. ಈ ಬಾರಿ ನಿಖಿಲ್‌ ಸ್ಪರ್ಧಿಸಿದ್ದೇ ಆದರೆ, ನೇರ ಹಣಾಹಣಿಗೆ ಡಿಕೆಶಿ ತಯಾರಾಗುತ್ತಿದ್ದಾರೆ. ಆ ಮೂಲಕ ರಾಮನಗರ ಜಿಲ್ಲಾ ರಾಜಕೀಯವನ್ನು   ಸಂಪೂರ್ಣ ಹತೋಟಿಗೆ ಪಡೆಯಲು ತಯಾರಾಗಿದ್ದಾರೆ.

ದೇವೇಗೌಡರ  ಮೂರನೇ ತಲೆಮಾರು ನಿಖಿಲ್‌ ಕುಮಾರಸ್ವಾಮಿಗೆ ಚನ್ನಪಟ್ಟಣ ಕ್ಷೇತ್ರವೇ ಮತ್ತೆ ರಾಜಕೀಯ ನೆಲೆಯಾಗಬೇಕು ಎನ್ನುವುದು ಕುಮಾರಸ್ವಾಮಿ ಕುಟುಂಬದ ಒಲವಾಗಿದೆ ಎನ್ನಲಾಗಿದೆ. ಆದರೆ, ಜೆಡಿಎಸ್‌ ಈಗ ಬಿಜೆಪಿ ಜತೆ ಮೈತ್ರಿ  ಸಾಧಿಸಿರುವುದರಿಂದ ಮತ್ತು ದೇವಗೌಡರ ಅಳಿಯ ಮಂಜುನಾಥ್‌ ಪರವಾಗಿ ಕೆಲಸ ಮಾಡಿರುವ ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ ಅವರಿಗೂ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವ ಆಸೆಯಿದೆ. ಆದರೆ, ಬಹುತೇಕ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. 

ಅದಕ್ಕೇ ಅವರು ಬುಧವಾರ ಚನ್ನಪಟ್ಟಣ ಪ್ರವಾಸ ಕೈಗೊಂಡು "ಉಪಚುನಾವಣೆಯಲ್ಲಿ ಚನ್ನಪಟ್ಟಣದ ಜನ ನನ್ನ ಮೇಲೆ ಒಲವು ತೋರಿದರೆ, ಪಕ್ಷ ತೀರ್ಮಾನಿಸಿದರೆ ನಾನು ಸ್ಪರ್ಧೆ ಮಾಡದೇ ಬೇರೆ ವಿಧಿ ಇಲ್ಲ" ಎಂದು ನೇರವಾಗಿ ಹೇಳಿದ್ದಾರೆ.

"ಚನ್ನಪಟ್ಟಣ ನನ್ನ ಹೃದಯದಲ್ಲಿದೆ. ಇದು ಈ ಹಿಂದೆ ಸಾತನೂರು ವಿಧಾನಸಭಾ ಕ್ಷೇತ್ರದ ಭಾಗವಾಗಿತ್ತು. ಆಮೂಲಕ ಈ ಭಾಗ ನನಗೆ ರಾಜಕೀಯವಾಗಿ ಜನ್ಮ ನೀಡಿದ ಸ್ಥಳ. ಈ ಭಾಗದ ಜನ ಕಷ್ಟಕಾಲದಲ್ಲಿ ನಮಗೆ ಹೆಚ್ಚಿನ ಮತ ನೀಡಿ ಬೆಂಬಲ ನೀಡಿದ್ದಾರೆ. ನಾನು ಅವರ ಋಣ ತೀರಿಸಬೇಕು. ಕನಕಪುರ ಯಾವ ರೀತಿ ಅಭಿವೃದ್ಧಿ ಮಾಡಿದ್ದೇನೋ ಅದಕ್ಕಿಂತ ಹೆಚ್ಚಿನ ಅಭಿವೃದ್ಧಿಗೆ ಅವಕಾಶವಿದೆ. ಹೀಗಾಗಿ ಈ ಕ್ಷೇತ್ರದ ಮೇಲೆ ನನಗೆ ವಿಶೇಷವಾದ ಕಾಳಜಿ ಇದೆ. ಚನ್ನಪಟ್ಟಣ ಅಭಿವೃದ್ಧಿ ಹಾಗು ಬದಲಾವಣೆಗೆ ನಾನು ಬದ್ಧವಾಗಿದ್ದೇನೆ. ಮತದಾರರು ಹಾಗು ನಾಯಕರ ಜತೆ ಮಾತನಾಡುತ್ತೇನೆ. ಅಲ್ಲಿನ ಜನ ಏನು ಹೇಳುತ್ತಾರೆ ಎಂದು ತಿಳಿದು ನಂತರ ತೀರ್ಮಾನ ಮಾಡುತ್ತೇನೆ" ಎಂದು ತಿಳಿಸಿದರು.

ಚನ್ನಪಟ್ಟಣದಲ್ಲಿ ಸಹೋದರ ಡಿ.ಕೆ. ಸುರೇಶ್ ಅವರ ಸ್ಪರ್ಧೆ ಬಗ್ಗೆ ಕೇಳಿದಾಗ, "ಈ ವಿಚಾರವಾಗಿ ಇನ್ನು ತೀರ್ಮಾನವಾಗಿಲ್ಲ. ನನಗೆ ಮತ ನೀಡಿ ಎಂದು ನಾನು ಅಲ್ಲಿನ ಮತದಾರರಿಗೆ ಮನವಿ ಮಾಡುತ್ತೇನೆ" ಎಂದು ತಿಳಿಸಿದರು.

ಚನ್ನಪಟ್ಟಣ ರಾಜಕೀಯ

ನನ್ನ ರಾಜಕೀಯ ಜೀವನದಲ್ಲಿ ಮಹತ್ವದ ಬದಲಾವಣೆಯಾಗಿದ್ದು ಚನ್ನಪಟ್ಟಣದಿಂದ. ಈಗ ಇಲ್ಲಿನ ಕೆಂಗಲ್ ಆಂಜನೇಯಸ್ವಾಮಿಯ ದೇವಸ್ಥಾನದಿಂದ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ ಮಾಡಲು ಬಂದಿದ್ದೇನೆ. ನಾನು ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದಾಗ ಚನ್ನಪಟ್ಟಣದ ಒಂದು ಭಾಗ ನನ್ನ ಕ್ಷೇತ್ರದಲ್ಲಿತ್ತು. ನಿಮ್ಮ ಆಶೀರ್ವಾದದಿಂದ ಇಂದು ಉನ್ನತ ಸ್ಥಾನಕ್ಕೆ ಏರಿದ್ದೇನೆ. ಈ ಕ್ಷೇತ್ರದ ಮರುವಿಂಗಡಣೆ ಸಂದರ್ಭದಲ್ಲಿ ಬಿಟ್ಟು ಹೋಗವುವಾಗ ನೋವು ಉಂಟಾಗಿತ್ತು. ನಾನು ಹೋದರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದು ಇತಿಹಾಸ ಎಂದು ಹೇಳಿದ್ದಾರೆ.

ನನ್ನ ತಮ್ಮ ಡಿ.ಕೆ.ಸುರೇಶ್ ಗೆ ಸೋಲಾಗಿದೆ ಎಂದರೆ ನನ್ನಲ್ಲೇ ಏನೂ ನ್ಯೂನ್ಯತೆ ಇದೆ ಎಂದು ಕ್ಷೇತ್ರದ ಜನ ಅರ್ಥ ಮಾಡಿಸಿದ್ದಾರೆ. ನನಗೆ ಬುದ್ಧಿವಾದ ಹೇಳಲು ಜನರು ಈ ತೀರ್ಮಾನ ನೀಡಿದ್ದಾರೆ. ಇದನ್ನು ನಾನು ಅರಿತುಕೊಂಡಿದ್ದೇನೆ. ಈ ವಿಚಾರದಲ್ಲಿ ನಾನು ಯಾರನ್ನೂ ದೂಷಣೆ ಮಾಡಲು ಹೋಗುವುದಿಲ್ಲ. ಗೆದ್ದಿರುವ ವ್ಯಕ್ತಿ ತುಂಬು ಹೃದಯದಿಂದ ಸುರೇಶ್ ಗಿಂತ ಹೆಚ್ಚಿನ ಜನರ ಸೇವೆ ಮಾಡಲಿ ಎಂದು ಶುಭ ಕೋರುತ್ತೇನೆ.

ನಾನು ಧೈರ್ಯ ಕಳೆದುಕೊಳ್ಳುವವನು, ಹೆದರಿ ಓಡಿ ಹೋಗುವವನಲ್ಲ. ಹೋರಾಟ ಮಾಡುವವನು. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ಭಕ್ತಿ ಇರುವ ಕಡೆ ಭಗವಂತ ಇದ್ದಾನೆ. ಪ್ರತಿ ಪಂಚಾಯ್ತಿಗೂ ಭೇಟಿ ನೀಡಿ ಚನ್ನಪಟ್ಟಣದ ಬದಲಾವಣೆಗೆ ನನಗೆ ಇರುವ ಶಕ್ತಿಯಲ್ಲಿ ಪ್ರಯತ್ನಿಸುತ್ತೇನೆ. ಸರ್ಕಾರದಲ್ಲಿ ನಾನು ಉತ್ತಮ ಸ್ಥಾನದಲ್ಲಿದ್ದು ಚನ್ನಪಟ್ಟಣದ ಅಭಿವೃದ್ದಿಗೆ ರೂಪುರೇಷೆಯನ್ನು ಸಿದ್ದಪಡಿಸಿದ್ದೇನೆ. ಭೂಮಿ ಋಣ, ತಾಯಿ ಋಣ, ಅನ್ನದ ಋಣ, ಜನರ ಋಣ ತೀರಿಸ ಬೇಕಾಗಿರುವುದು ನಮ್ಮ ಕರ್ತವ್ಯ. ಈಗ ಮತ್ತೊಮ್ಮೆ ನಿಮ್ಮ ಋಣ ತೀರಿಸುವ ಅವಕಾಶ ದೊರೆತಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಖಾಲಿಯಿದ್ದು ಮುಂದಿನ ದಿನಗಳಲ್ಲಿ ಯಾರು ಅಭ್ಯರ್ಥಿ ಎಂಬುದನ್ನು ತಿಳಿಸುತ್ತೇನೆ ಎಂದವರು ಹೇಳಿದ್ದಾರೆ.

ಅತಿ ಚಿಕ್ಕ ವಯಸ್ಸಿಗೆ ಬಂಗಾರಪ್ಪ ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದು ನಿಮ್ಮ ಆಶೀರ್ವಾದದಿಂದ. ಚನ್ನಪಟ್ಟಣದ ಮಹಾಜನತೆಯ ಆಶೀರ್ವಾದ ನಮಗೆ ಬೇಕಾಗಿದೆ. ಜನರು ಪಕ್ಷಬೇಧವನ್ನು ಮರೆತು ಸರ್ಕಾರದ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನನ್ನ ಅಧಿಕಾರವನ್ನು ಚನ್ನಪಟ್ಟಣದ ಬದಲಾವಣೆಗೆ ಉಪಯೋಗಿಸಿಕೊಳ್ಳಬೇಕು ಎಂದಿದ್ದಾರೆ.

ದೇಶದ ಪ್ರಧಾನಮಂತ್ರಿಯಾದವರಿಂದ ತೆರವಾದ ರಾಮನಗರ ಕ್ಷೇತ್ರದಲ್ಲಿ ಸಿ.ಎಂ.ಲಿಂಗಪ್ಪ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಅವರನ್ನು 9 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದು ಈಗ ಇತಿಹಾಸ. ಲೋಕಸಭೆ ಚುನಾವಣೆಯಲ್ಲಿ 85 ಸಾವಿರ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಬಂದಿವೆ. ಅಂದರೆ ಸುಮಾರು 70 ಸಾವಿರದಷ್ಟು ಹೆಚ್ಚಿನ ಮತಗಳು ಬಂದಿದ್ದು. ಇದಕ್ಕೆ ಜನತಾದಳ, ರೈತಸಂಘ ಸೇರಿದಂತೆ ಎಲ್ಲಾ ವರ್ಗಗಳ ಜನರು ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಚನ್ನಪಟ್ಟಣವನ್ನು ಚಿನ್ನದ ನಾಡು ಮಾಡುತ್ತೇನೆ

ರಾಮನಗರಕ್ಕೆ ಸುಮಾರು 1 ಸಾವಿರ ಕೋಟಿ ಅನುದಾನ ಕೊಟ್ಟಿದ್ದೇನೆ. ಚನ್ನಪಟ್ಟಣವನ್ನು ಚಿನ್ನದ ನಾಡನ್ನಾಗಿ ಮಾಡುತ್ತೇನೆ. ಮದ್ದೂರು ಗಡಿ, ಸಂಗಮ, ಹುಲಿಯೂರುದುರ್ಗ, ಕೋಲಾರ ಗಡಿ, ನಂದಿ ಬೆಟ್ಟದ ತನಕ ನಾವೆಲ್ಲಾ ಬೆಂಗಳೂರಿಗೆ ಸೇರಿದವರು. ಬೆಂಗಳೂರಿನ ಸುತ್ತ ಹೊಸ ನಾಮಕರಣ ಮಾಡಲಾಗುತ್ತದೆ. ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು. ಚನ್ನಪಟ್ಟಣದ 15 ಕ್ಕೂ ಹೆಚ್ಚು ಗ್ರಾಮ ದೇವರುಗಳಿಗೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆಯುತ್ತೇನೆ ಎಂದು ಡಿ ಕೆ ಶಿವಕುಮಾರ್‌ ಘೋಷಿಸಿದ್ದಾರೆ.

Similar News