ಬಿಜೆಪಿ ಕುಮ್ಮಕ್ಕಿನಿಂದ ಎಎಸ್ಪಿ ರಾಜೀನಾಮೆ ಬೆದರಿಕೆ ; ಅಶೋಕ್ ಪಟ್ಟಣ್ ವಾಗ್ದಾಳಿ

ಘಟನೆ ನಡೆದು ಎರಡು-ಮೂರು ತಿಂಗಳಾದ ಮೇಲೆ "ರಾಜೀನಾಮೆ ಕೊಡುವ ಮಾತನಾಡುತ್ತಿರುವುದು ಅನುಮಾನ ಮೂಡಿಸಿದೆ. ಇದರ ಹಿಂದೆ ಬಿಜೆಪಿಯವರ ಕುಮ್ಮಕ್ಕು ಇದೆ ಎಂದು ಅಶೋಕ್‌ ಪಟ್ಟಣ್‌ ಆರೋಪಿಸಿದ್ದಾರೆ.;

Update: 2025-07-03 13:23 GMT

 ಅಶೋಕ್ ಪಟ್ಟಣ್

ಧಾರವಾಡ ಎಎಸ್ಪಿ ನಾರಾಯಣ್ ಭರಮನಿ ಅವರು ಸ್ವಯಂ ನಿವೃತ್ತಿ (ವಿಆರ್‌ಎಸ್‌) ಕೋರಿರುವುದು ಮತ್ತು ಮುಖ್ಯ ಕಾರ್ಯದರ್ಶಿ ಕುರಿತು ಬಿಜೆಪಿ ಎಂಎಲ್‌ಸಿ ರವಿಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿರುವುದರ ಹಿಂದೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಶಾಸಕ ಹಾಗೂ ವಿಧಾನಸಭೆಯ ಮುಖ್ಯಸಚೇತಕ ಅಶೋಕ್ ಪಟ್ಟಣ್ ಆರೋಪಿಸಿದ್ದಾರೆ.

ಎಎಸ್ಪಿ ನಾರಾಯಣ್ ಬರಮನಿ ಅವರ ರಾಜೀನಾಮೆ ವಿಚಾರ ಪ್ರಸ್ತಾಪಿಸಿದ ಪಟ್ಟಣ್, "ಈ ಘಟನೆ ನಡೆದು ಎರಡು-ಮೂರು ತಿಂಗಳಾಗಿವೆ. ಅಸಮಾಧಾನ ಇದ್ದಿದ್ದರೆ ಅಂದೇ ರಾಜೀನಾಮೆ ಕೊಡಬೇಕಿತ್ತು. ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ," ಎಂದು ದೂರಿದ್ದಾರೆ.

ಮುಖ್ಯಮಂತ್ರಿಗಳು ಹೊಡೆಯಲು ಹೋಗಿರಲಿಲ್ಲ ಎಂದು ಪುನರುಚ್ಚರಿಸಿದ ಪಟ್ಟಣ್, "ರಾಜೀನಾಮೆ ಕೊಡಲು ಎರಡು-ಮೂರು ತಿಂಗಳು ಯಾಕೆ ತೆಗೆದುಕೊಂಡರು? ಬಿಜೆಪಿಯವರ ಕುಮ್ಮಕ್ಕಿನಿಂದ ಅವರು ಈ ರೀತಿ ಮಾಡುತ್ತಿದ್ದಾರೆ. ಮನುಷ್ಯ ಅಂದ ಮೇಲೆ ಸ್ವಾಭಾವಿಕವಾಗಿ ಸಿಟ್ಟು ಬರುತ್ತದೆ ಅಷ್ಟೆ. ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡುವಾಗ ಕರೆದು ಕೇಳಿದ್ದಾರೆ. ಹೊಡೆದಿಲ್ಲ, ಬೈದಿಲ್ಲ," ಎಂದು ವಿವರಿಸಿದ್ದಾರೆ.

ಎಂಎಲ್‌ಸಿ ರವಿ ಕುಮಾರ್ ಅವರು ಸಿಎಸ್‌ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಅಶೋಕ್ ಪಟ್ಟಣ್ ತೀವ್ರವಾಗಿ ಖಂಡಿಸಿದ್ದಾರೆ.

"ಮಹಿಳಾ ಅಧಿಕಾರಿ ಬಗ್ಗೆ ಮಾತನಾಡುವುದು ಖಂಡನೀಯ. ಅವರ ಮೇಲೆ ಕೇಸ್ ಹಾಕಬೇಕು. ವಿರೋಧ ಪಕ್ಷದಲ್ಲಿದ್ದೇವೆ ಎಂದು ಏನೇನೋ ಹೇಳುವುದಲ್ಲ. ಕಾನೂನು ಪ್ರಕಾರ ಶಿಕ್ಷೆಯಾಗಬೇಕು," ಎಂದು ಆಗ್ರಹಿಸಿದ್ದಾರೆ.

Tags:    

Similar News