ಉಚಿತ ಕನ್ನಡಕ|ಪಂಚ ಗ್ಯಾರಂಟಿಗಳ ಜತೆಗೆ ʼದೃಷ್ಟಿ ಗ್ಯಾರಂಟಿʼ!

ರಾಜ್ಯದಾದ್ಯಂತ 393 ಕಡೆ ಆಶಾಕಿರಣ ದೃಷ್ಟಿ ಕೇಂದ್ರಗಳ ಉದ್ಘಾಟನೆಯಾಗಿ ಉಚಿತವಾಗಿ ಕನ್ನಡಕ ನೀಡಲಾಗುತ್ತಿದೆ. ಜನರಿಗೆ ಇದರಿಂದ ಚಿಕಿತ್ಸಾ ವೆಚ್ಚ ಉಳಿತಾಯವಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.;

Update: 2025-07-03 14:49 GMT

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌.

ಆಶಾಕಿರಣ ಯೋಜನೆ ಮೂಲಕ ಜನರ ಕಣ್ಣು, ದೃಷ್ಟಿಗೆ ತೊಂದರೆಯಾದಾಗ ಚಿಕಿತ್ಸೆ ನೀಡುವ ʼದೃಷ್ಟಿ ಗ್ಯಾರಂಟಿʼಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಗೋವಿಂದರಾಜನಗರದ ಎಂ.ಸಿ ಲೇಔಟ್‌ನಲ್ಲಿ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ʼಆಶಾಕಿರಣʼ ದೃಷ್ಟಿ ಕೇಂದ್ರವನ್ನು ಗುರುವಾರ(ಜು.3) ಉದ್ಘಾಟಿಸಿ ಮಾತನಾಡಿದ ಅವರು, ಯೋಜನೆಯ ಲಾಭ ಪಡೆದವರಿಗೆ ಉಚಿತ ಕನ್ನಡಕಗಳನ್ನು ವಿತರಣೆ ಮಾಡಿದರು.

“ರಾಜ್ಯದಾದ್ಯಂತ 393 ಕಡೆ ಆಶಾಕಿರಣ ದೃಷ್ಟಿ ಕೇಂದ್ರಗಳ ಉದ್ಘಾಟನೆಯಾಗಿ ಉಚಿತವಾಗಿ ಕನ್ನಡಕ ನೀಡಲಾಗುತ್ತಿದೆ. ಜನರಿಗೆ ಇದರಿಂದ ಕನ್ನಡಕ ಸೇರಿದಂತೆ ಚಿಕಿತ್ಸೆಯ ಮೊತ್ತ ಉಳಿಯುತ್ತದೆ. ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಆರೋಗ್ಯ ಇಲಾಖೆಯಡಿ ಕ್ರಾಂತಿಕಾರಕ ಹಾಗೂ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ” ಎಂದರು.

ಹಿಂದಿನಿಂದಲೂ ದೇಶ ಹಾಗೂ ರಾಜ್ಯದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಗೆ ಬುನಾದಿ ಹಾಕಿದ್ದು ಕಾಂಗ್ರೆಸ್ ಸರ್ಕಾರ. ರಾಜ್ಯದಲ್ಲಿ 70 ವೈದ್ಯಕೀಯ ಕಾಲೇಜುಗಳಿವೆ. ಅತ್ಯಂತ ಹೆಚ್ಚು ವೈದ್ಯರನ್ನು ತಯಾರು ಮಾಡುತ್ತಿರುವ ಪಟ್ಟಿಯಲ್ಲಿ ಕರ್ನಾಟಕವಿದ್ದು. ಇಲ್ಲಿ ಕಲಿತವರು ಹೊರ ದೇಶಗಳಿಗೆ ತೆರಳಿ ದೇಶಕ್ಕೆ ಉತ್ತಮ ಹೆಸರು ತರುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ʼಯಶಸ್ವಿನಿʼ ಯೋಜನೆ ಮೂಲಕ ರೈತರು, ಬಡವರ ಆರೋಗ್ಯ ಕಾಳಜಿಗೆ ಕಾಂಗ್ರೆಸ್‌ ಸರ್ಕಾರ ಮುನ್ನುಡಿ ಬರೆದಿತ್ತು. ಇದನ್ನು ನೋಡಿದ ಕೇಂದ್ರ ಸರ್ಕಾರ ಆರೋಗ್ಯ ಯೋಜನೆಗಳನ್ನು ಪ್ರಾರಂಭ ಮಾಡಿತು. ನಮ್ಮದು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿರುವ ಗ್ಯಾರಂಟಿ ಸರ್ಕಾರ. ಐದು ಗ್ಯಾರಂಟಿಗಳ ಜತೆಗೆ ಭೂಮಿ ಗ್ಯಾರಂಟಿಯನ್ನು ಸರ್ಕಾರಕ್ಕೆ ಎರಡು ವರ್ಷ ತುಂಬಿದ ಘಳಿಗೆಯಲ್ಲಿ ರಾಜ್ಯದ ಜನತೆಗೆ ನೀಡಿದ್ದೇವೆ ಎಂದರು.

ಕಡಿಮೆ ಶುಲ್ಕ ಪಡೆದು ಎಂಆರ್ ಐ, ಸಿಟಿ ಸ್ಕ್ಯಾನ್ ಸೇವೆ

ಗೋವಿಂದರಾಜನಗರ ಕ್ಷೇತ್ರದಲ್ಲಿರುವ ಬಿಬಿಎಂಪಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೊಸ ರೂಪ ನೀಡಬೇಕು ಎಂದು ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಸರ್ಕಾರದ ಮೇಲೆ ಒತ್ತಡ ತಂದು ಕೆಲಸ ಮಾಡುತ್ತಿದ್ದಾರೆ.  ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳನ್ನು ತೆರೆದು ಜನಸೇವೆ ಮಾಡಲಾಗುತ್ತಿದೆ. ಮಾರುಕಟ್ಟೆ ದರದ ಶೇ.25 ರಷ್ಟು ಮಾತ್ರ ಹಣ ಪಡೆದು ಎಂಆರ್‌ಐ, ಸಿಟಿ ಸ್ಕ್ಯಾನ್ ಸೇವೆ ನೀಡುವ ಆಲೋಚನೆ ಇದೆ ಎಂದು ಹೇಳಿದರು.

ಆರ್ಯುವೇದ ಆಸ್ಪತ್ರೆಗೆ ಹೊಸ ರೂಪ

ರಾಜ್ಯದಲ್ಲಿ ಏಳು ಕೋಟಿ ಜನಸಂಖ್ಯೆಯಿದ್ದು 2,421 ಪ್ರಾಥಮಿಕ ಆರೋಗ್ಯ ಕೇಂದ್ರಗಳು ರಾಜ್ಯದಾದ್ಯಂತ ಕಾರ್ಯನಿರ್ವಹಣೆ ಮಾಡುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಉತ್ತಮ ಆರೋಗ್ಯ ಸೇವೆಗಳು ದೊರೆಯುವಂತೆ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮೂಲಕವು ಇದಕ್ಕೆ ಆದ್ಯತೆ ನೀಡಲಾಗುವುದು. ಬೆಂಗಳೂರು ಆರ್ಯುವೇದ ಆಸ್ಪತ್ರೆಗೆ ಹೊಸರೂಪ ನೀಡಲು ಸಚಿವರ ಜೊತೆ ಚರ್ಚೆ ನಡೆಸಲಾಗುವುದು.

ಕೊರೋನಾದ ನಂತರ ಆರೋಗ್ಯದ ಬಗ್ಗೆ ಜನರಿಗೆ ಕಾಳಜಿ ಬಂದಿದೆ. ಇದಕ್ಕೆ ಪೂರಕವಾಗಿ ಆರೋಗ್ಯ ಇಲಾಖೆ ಕೆಲಸ ಮಾಡುತ್ತಿದೆ. ವೈದ್ಯರು ಸರ್ಕಾರದ ಉತ್ತಮ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು. ಎಲ್ಲಾ ಕ್ಷೇತ್ರಗಳಲ್ಲಿ ರಸ್ತೆ ದುರಸ್ತಿ ಸೇರಿದಂತೆ ಅನೇಕ ದೂರುಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರದಿಂದ ಯಾವುದೇ ದೂರು ಬಂದಿಲ್ಲ. ಗುಣಮಟ್ಟದ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಕೆಲಸಗಳು ಲಂಚಮುಕ್ತ, ವಿಳಂಬಮುಕ್ತವಾಗಿ ನಡೆಯುತ್ತಿವೆ ಎಂದು ತಿಳಿಸಿದರು.

ಕಾನೂನು ಎಲ್ಲರಿಗೂ ಒಂದೇ

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ದ ಅವಹೇಳನ ಮಾತುಗಳನ್ನಾಡಿದ್ದರ ಪರಿಣಾಮ ಎಂಎಲ್‌ಸಿ ರವಿಕುಮಾರ್ ವಿರುದ್ದ ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕಾನೂನು ಎಲ್ಲರಿಗೂ ಒಂದೇ. ಯಾರ ಮಾತಿನಿಂದ ನೋವಾಗಿದ್ದರೂ, ಅವಾಚ್ಯ ಶಬ್ದದಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗುವ ಕೆಲಸ ಯಾರೇ ಮಾಡಿದ್ದರೂ ರಕ್ಷಣೆ ನೀಡುವ ಕೆಲಸ ಸರ್ಕಾರ ಮಾಡಲಿದೆ ಎಂದರು.

Tags:    

Similar News