ಸುರ್ಜೇವಾಲಾ ಅಧಿಕಾರಿಗಳ ಸಭೆ ನಡೆಸಿಲ್ಲ, ಅದು ಸುಳ್ಳು ಸುದ್ದಿ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ
ಸುರ್ಜೇವಾಲ ಅವರ ಸಭೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ನಮ್ಮದೇ ಸರ್ಕಾರ. ಅವರಿಗೆ ಏನಾದರೂ ಹೇಳಬೇಕಿದ್ದರೆ, ಅವರು ನಮಗೇ ಹೇಳುತ್ತಾರೆ. ಏನಾದರೂ ತಪ್ಪುಗಳಿದ್ದರೆ ತಿಳಿಸುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.;
ಡಿ. ಕೆ ಶಿವಕುಮಾರ್
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಅವರು ರಾಜ್ಯದ ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂಬ ಆರೋಪವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಲವಾಗಿ ತಳ್ಳಿಹಾಕಿದ್ದಾರೆ. "ಇದು ಸಂಪೂರ್ಣ ಸುಳ್ಳು ಸುದ್ದಿ, ಅವರು ಯಾವುದೇ ಅಧಿಕಾರಿಯನ್ನು ಭೇಟಿ ಮಾಡಿಲ್ಲ ಅಥವಾ ಮಾತನಾಡಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಅರಸೀಕೆರೆಯ ಪ್ರಸಿದ್ಧ ಜೇನುಕಲ್ಲು ಸಿದ್ದೇಶ್ವರಬೆಟ್ಟ ಹಾಗೂ ಕೋಡಿ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
"ಏನಿದ್ದರೂ ನಮ್ಮ ಬಳಿ ಹೇಳುತ್ತಾರೆ"
ಸುರ್ಜೇವಾಲ ಅವರ ಸಭೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ನಮ್ಮದೇ ಸರ್ಕಾರ. ಅವರಿಗೆ ಏನಾದರೂ ಹೇಳಬೇಕಿದ್ದರೆ, ಅವರು ನಮಗೇ ಹೇಳುತ್ತಾರೆ. ಏನಾದರೂ ತಪ್ಪುಗಳಿದ್ದರೆ ತಿಳಿಸುತ್ತಾರೆ, ನಾವು ತಿದ್ದಿಕೊಳ್ಳುತ್ತೇವೆ. ಅದನ್ನು ಬಿಟ್ಟು ನೇರವಾಗಿ ಅಧಿಕಾರಿಗಳ ಸಭೆ ನಡೆಸಿದ್ದಾರೆ ಎನ್ನುವುದು ಸುಳ್ಳು," ಎಂದು ಹೇಳಿದರು. ಉದಾಹರಣೆಯಾಗಿ, "ನಮ್ಮ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆಯವರು ಕೂಡ ಇಲ್ಲಿಯವರೆಗೆ ಯಾವುದೇ ಅಧಿಕಾರಿಗೆ ಕರೆ ಮಾಡಿಲ್ಲ, ಮಾಡುವುದೂ ಇಲ್ಲ," ಎಂದು ತಿಳಿಸಿದರು.
ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ
ಅಧಿಕಾರಿಗಳ ಇಂತಹ ಸಭೆ ಕಾನೂನುಬಾಹಿರ ಎಂಬ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆ ಕುರಿತು ಕೇಳಿದಾಗ, "ದೊಡ್ಡವರ ಬಗ್ಗೆ ನಾನು ಮಾತನಾಡುವುದಿಲ್ಲ. ಈ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ. ಅವರಿಗಿಂತ ಹೆಚ್ಚು ಮಾಹಿತಿ ನನಗಿಲ್ಲ," ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು.
ಯೂರಿಯಾ ಕೊರತೆಗೆ ಕೇಂದ್ರದತ್ತ ಬೊಟ್ಟು
ರಾಜ್ಯದಲ್ಲಿನ ಯೂರಿಯಾ ಕೊರತೆಯ ಬಗ್ಗೆ ಮಾತನಾಡಿದ ಅವರು, "ಯೂರಿಯಾ ಪೂರೈಕೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಈ ಬಾರಿ ರೈತರು ಹೆಚ್ಚು ಬಿತ್ತನೆ ಮಾಡಿದ್ದರಿಂದ ಯೂರಿಯಾಗೆ ಬೇಡಿಕೆ ಹೆಚ್ಚಿದೆ. ನಾವು ಈಗಾಗಲೇ ಹೆಚ್ಚಿನ ಯೂರಿಯಾಗೆ ಒತ್ತಾಯ ಮಾಡಿದ್ದೇವೆ. ರೈತರು ತಾಳ್ಮೆಯಿಂದಿರಬೇಕು," ಎಂದು ಮನವಿ ಮಾಡಿದರು.
ದೇವರ ದರ್ಶನ, ನಾಡಿನ ಒಳಿತಿಗಾಗಿ ಪ್ರಾರ್ಥನೆ
ಜೇನುಕಲ್ಲು ಸಿದ್ದೇಶ್ವರನ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, "ನಾನು ಧರ್ಮ, ದೇವರು ಮತ್ತು ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟವನು. ರಾಜ್ಯದ ಜನರಿಗೆ ಸುಖ, ಶಾಂತಿ, ನೆಮ್ಮದಿ ಸಿಗಲಿ, ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದೇನೆ," ಎಂದರು. ವೈಯಕ್ತಿಕವಾಗಿ ಏನು ಬೇಡಿಕೊಂಡಿರಿ ಎಂಬ ಪ್ರಶ್ನೆಗೆ, "ಅದು ಭಕ್ತ ಮತ್ತು ಭಗವಂತನಿಗೆ ಬಿಟ್ಟ ವಿಚಾರ," ಎಂದು ನಯವಾಗಿ ಉತ್ತರಿಸಿದರು. ಇದೇ ಸಂದರ್ಭದಲ್ಲಿ ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.