ಮಾಲ್‌ಗಳಿಗೆ ಎಚ್ಚರಿಕೆ | ಭಾಷೆ, ಜಾತಿ, ಉಡುಪು ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ: ಬಿಬಿಎಂಪಿ

ಬೆಂಗಳೂರಿನ ಎಲ್ಲ ವಾಣಿಜ್ಯ ಸಮುಚ್ಛಯಗಳು, ಅಂಗಡಿಗಳ ಮಾಲೀಕರು ಭಾಷೆ, ಜಾತಿ, ಜನಾಂಗ, ಧರ್ಮ, ಉಡುಪು ಮತ್ತು ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡವಂತಿಲ್ಲ ಎಂದು ಬಿಬಿಎಂಪಿ ನಗರದ ಮಾಲ್‌ಳಿಗೆ ಸೂಚನೆ ನೀಡಿದೆ

Update: 2024-08-02 08:02 GMT
ಬಿಬಿಎಂಪಿ
Click the Play button to listen to article

ಸಾರ್ವಜನಿಕ ಸ್ಥಳಗಳಲ್ಲಿ ಭಾಷೆ, ಜಾತಿ , ಧರ್ಮ, ಉಡುಪು ಮತ್ತು ಜನ್ಮಸ್ಥಳದ ಆಧಾರದಲ್ಲಿ ಯಾವುದೇ ವ್ಯಕ್ತಿಗೆ ಪ್ರವೇಶ ನಿರಾಕರಿಸುವುದು ಅಥವಾ ತಾರತಮ್ಯ ಮಾಡುವುದು ಕಾನೂನುಬಾಹಿರ ಎಂದು ಬಿಬಿಎಂಪಿ, ಬೆಂಗಳೂರು ಮಹಾನಗರ ವ್ಯಾಪ್ತಿಯ ಎಲ್ಲ ಶಾಪಿಂಗ್ ಮಾಲ್‌, ಕ್ಲಬ್‌ಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದೆ. 

ಇತ್ತೀಚೆಗೆ ಬೆಂಗಳೂರಿನ ಮಾಲ್ ಒಂದಕ್ಕೆ ಕಚ್ಚೆಪಂಚೆ ಧರಿಸಿ ಬಂದಿದ್ದ ರೈತರೊಬ್ಬರನ್ನು ಒಳ ಬಿಡದೆ ಪ್ರವೇಶ ನಿರಾಕರಿಸಿದ್ದರು. ಆ ಪ್ರಕರಣದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಯಿಂದ ಹೊಸ ಮಾರ್ಗಸೂಚಿ ಹೊರಡಿಸಿದೆ.

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ವಾಣಿಜ್ಯ ಸಮುಚ್ಚಯಗಳು ಹಾಗೂ ಇತರೆ ಅಂಗಡಿಗಳ ಮಾಲೀಕರಿಗೆ ಹೊಸ ಮಾರ್ಗಸೂಚಿ ಮೂಲಕ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರ ಪಾರಂಪರಿಕ ಉಡುಪಿನ ಬಗ್ಗೆ ತಾರತಮ್ಯ ಮಾಡುವಂತಿಲ್ಲ. ಭಾರತದ ಪ್ರತಿಯೊಬ್ಬ ನಾಗರೀಕರಿಗೂ ಸಾರ್ವಜನಿಕ ಪ್ರದೇಶಗಳಿಗೆ ಸಮಾನ ಪ್ರವೇಶ ಮತ್ತು ಸಾಮಾಜಿಕ ಸಮಾನತೆಯ ಹಕ್ಕಿದೆ. ಈ ಹಿನ್ನೆಲೆಯಲ್ಲಿ ಕೆಳಗೆ ಸೂಚಿಸಲಾದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

 ಬಿಬಿಎಂಪಿ ನಿರ್ದೇಶನದಲ್ಲಿ ಏನಿದೆ?

  • ಬೆಂಗಳೂರಿನ ಎಲ್ಲ ವಾಣಿಜ್ಯ ಸಮುಚ್ಛಯಗಳು, ಅಂಗಡಿಗಳ ಮಾಲೀಕರು ಭಾಷೆ, ಜಾತಿ, ಜನಾಂಗ, ಧರ್ಮ, ಉಡುಪು ಮತ್ತು ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡವಂತಿಲ್ಲ.
  • ಸಾರ್ವಜನಿಕರಿಗೆ ಪ್ರವೇಶ ಸಂದರ್ಭದಲ್ಲಿ ಭಾಷೆ, ಜಾತಿ, ಜನಾಂಗ, ಧರ್ಮ, ಉಡುಪು ಮತ್ತು ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ‌. ಸಾರ್ವಜನಿಕರು ಧರಿಸಿದ ಬಟ್ಟೆಯನ್ನು ಆಧರಿಸಿ ಪ್ರವೇಶ ನಿರಾಕರಣೆ ಮಾಡುವಂತಿಲ್ಲ. ವಾಣಿಜ್ಯ ಸಮುಚ್ಛಯದ ಮಾಲೀಕರು ಕೂಡಲೇ ಈ ಬಗ್ಗೆ ಭದ್ರತಾ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಿ ಆದೇಶ ನೀಡಬೇಕು. 
  • ಪಾಲಿಕೆಯಿಂದ ಸೂಚಿಸಲಾದ ಮಾರ್ಗಸೂಚಿಗಳನ್ನು ಪಾಲಿಸದೇ ಈ ರೀತಿಯ ಪ್ರಕರಣಗಳು ಮರುಕಳಿಸಿದರೆ ಅಪರಾಧ ಎಂದು ಪರಿಗಣಿಸಿ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಜೊತೆಗೆ, ಸಂಬಂಧಪಟ್ಟ ವಾಣಿಜ್ಯ ಸಮುಚ್ಛಯಗಳ ಮಾಲೀಕರು ಮತ್ತು ಸಿಬ್ಬಂದಿಯ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.
  • ಭಾಷೆ, ಲಿಂಗ, ಉಡುಪು ಹಾಗೂ ಜನಾಂಗವನ್ನು ಆಧರಿಸಿ ಪ್ರವೇಶ ನಿರಾಕರಣೆ ಮಾಡಿದಲ್ಲಿ ಅಂತಹ ವಾಣಿಜ್ಯ ಸಮುಚ್ಛಯಗಳ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗುವುದು. ಜೊತೆಗೆ, ಮಾಲ್ ಮತ್ತು ಅಂಗಡಿಗಳ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಈ ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
Tags:    

Similar News